ಧಮ್ ಎಂದರೆ ಧಮ್ ಬಿರಿಯಾನಿ ಅಲ್ಲ, ಧಮ್ ಇದ್ದರೆ ಭ್ರಷ್ಟಾಚಾರದ ಚರ್ಚೆಗೆ ಬನ್ನಿ, ವೀರಾವೇಶದಿಂದ ಮಾತಾಡಿದ್ದೀರಿ, ಹೀಗೆ ಮಾತಾಡಿಯೇ ಬಿಎಸ್‌ವೈ ಜೈಲಿಗೆ ಹೋಗಿದ್ದು, ಧಮ್ ಇದ್ದರೆ ಸಂಪುಟದ ಖಾಲಿ ಸ್ಥಾನ ಭರ್ತಿ ಮಾಡಿ, ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಿ: ಸಿದ್ದು
ಬೆಂಗಳೂರು(ಸೆ.12): ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನೀವು ಧಮ್ ಎಂದರೆ ಧಮ್ ಬಿರಿಯಾನಿ ಎಂದು ತಿಳಿದುಕೊಂಡಂತಿದೆ. ನಿಮಗೆ ನಿಜವಾಗಿಯೂ ಧಮ್ ಇದ್ದರೆ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಬನ್ನಿ. ಸ್ಥಳ-ಸಮಯ ನೀವೇ ನಿರ್ಧಾರ ಮಾಡಿ. ನೀವು ಹೇಳಿದ ಸ್ಥಳಕ್ಕೆ ನಾನು ಬರುತ್ತೇನೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ನಿಮಗೆ ಧಮ್ ಇಲ್ಲ ಎಂಬುದು ಸ್ವತಃ ನಿಮಗೂ ಗೊತ್ತಿದೆ. ನಿಮಗೆ ನಿಜವಾಗಿಯೂ ಧಮ್ ಇದ್ದರೆ ಭ್ರಷ್ಟಾಚಾರವನ್ನೇ ವಿಷಯವನ್ನಾಗಿಟ್ಟು ಚುನಾವಣೆ ಎದುರಿಸಲು ಸಿದ್ಧರಿದ್ದೀರಾ?ಎಂದು ಪ್ರಶ್ನಿಸಿದ್ದಾರೆ.
ಜನಸ್ಪಂದನ ಸಮಾವೇಶದಲ್ಲಿ ಧಮ್ ಇದ್ದರೆ ಯಾತ್ರೆ ಹಿಮ್ಮೆಟ್ಟಿಸಿ ಎಂದಿರುವ ಬೊಮ್ಮಾಯಿ ಹೇಳಿಕೆ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ‘ಜನಮರ್ದನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವೀರಾವೇಶದ ಭಾಷಣ ಕೇಳಿ ಖುಷಿಯಾಯಿತು. ಸಂಘ ಪರಿವಾರ ಇಂತಹ ಜೋರು ಮಾತುಗಳನ್ನು ಸಹಿಸುವುದಿಲ್ಲ. ಇದೇ ರೀತಿ ಮಾತನಾಡಿಯೇ ಪಾಪ ಬಿ.ಎಸ್. ಯಡಿಯೂರಪ್ಪ ಜೈಲು ಸೇರಿದ್ದು ಎನ್ನುವುದು ನೆನಪಿರಲಿ ಎಂದು ತಿರುಗೇಟು ನೀಡಿದ್ದಾರೆ.
ಎಲ್ಲ ಧರ್ಮಕ್ಕೆ ಮಿಗಿಲಾಗಿದ್ದು ಮನುಷ್ಯ ಧರ್ಮ; ಸಿದ್ದರಾಮಯ್ಯ
ಜನರೇ ಹಿಮ್ಮೆಟ್ಟಿಸಿದ್ದಾರೆ:
ಧಮ್ ಇದ್ದರೆ ಬಿಜೆಪಿ ಯಾತ್ರೆ ಹಿಮ್ಮೆಟ್ಟಿಸಿ ಎಂದು ಬೊಮ್ಮಾಯಿ ಸವಾಲು ಹಾಕಿದ್ದಾರೆ. ನಾವು ಯಾಕೆ ಹಿಮ್ಮೆಟ್ಟಿಸಲು ಹೋಗ್ಬೇಕು? ಸಮಾವೇಶದಲ್ಲಿ ಖಾಲಿ ಕುರ್ಚಿಗಳನ್ನು ನೋಡಿದರೆ ನಿಮ್ಮ ಜಾತ್ರೆಯನ್ನು ನಮ್ಮ ಜನರೇ ಹಿಮ್ಮೆಟ್ಟಿಸಿದ್ದಾರೆ ಎಂಬುದು ನಿಮಗೂ ಗೊತ್ತಾಗಿದೆ. ನಿಮಗೆ ಧಮ್ ಇದ್ದರೆ ಮೊದಲು ನಿಮ್ಮ ಸಂಪುಟದಲ್ಲಿರುವ ಖಾಲಿ ಸ್ಥಾನಗಳನ್ನು ತುಂಬಿ ಬಿಡಿ. ಕನಿಷ್ಠ ಬಸವಗೌಡ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಿ. ಆ ಮೇಲೆ ನಿಮ್ಮ ಧಮ್ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಧಮ್ ಇದ್ದರೆ ನನ್ನ ವಿರುದ್ಧ ತನಿಖೆ ಮಾಡಿ: ಸಿದ್ದು ಟಾಂಗ್
ನನ್ನ ಆಡಳಿತದ ಕಾಲದ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಕೆಲವು ದಿನಗಳಿಂದ ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಹೀಗೆ ಧಮ್ಕಿ ಹಾಕುವ ಬದಲು ಧಮ್ ಇದ್ದರೆ ಮೊದಲು ತನಿಖೆ ಮಾಡಿ. ನಾನು ಅದನ್ನು ಎದುರಿಸಲು ಸದಾ ಸಿದ್ಧ. ಈ ಬ್ಲಾಕ್ ಮೇಲ್ ತಂತ್ರಗಳನ್ನೆಲ್ಲ ನಿಮ್ಮವರ ಮೇಲೆ ಬಳಸಿಕೊಳ್ಳಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.