
ಕಲಬುರಗಿ (ನ.26): ರಾಜ್ಯದಲ್ಲಿ ಮೊದಲು ಶಾಸಕರ ಕುದುರೆ ವ್ಯಾಪಾರ ಆರಂಭಿಸಿದ್ದೇ ಬಿಜೆಪಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಪಕ್ಷ ನಾಯಕರ ಟೀಕೆಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕರೇ ಆಡಳಿತ ಪಕ್ಷದ ಶಾಸಕರನ್ನು ಖರೀದಿಸುತ್ತಿದ್ದಾರೆಂಬ ಬಿಜೆಪಿ ನಾಯಕರು ಆರೋಪದ ಬಗ್ಗೆ ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ಬಿಜೆಪಿ ಒಮ್ಮೆಯಾದರೂ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದಿದೆಯೇ?
ಬಿಜೆಪಿಯಲ್ಲಿ ಒಬ್ಬರಾದರೂ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿದ್ದಾರೆಯೇ? ಕುದುರೆ ವ್ಯಾಪಾರವಿಲ್ಲದೆ ಬಿಜೆಪಿ ಸರ್ಕಾರ ರಚಿಸಿದಿಯೇ? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಮೊದಲ ಅವಧಿಯ ಅಧಿಕಾರದಲ್ಲಿ 3 ಮುಖ್ಯಮಂತ್ರಿಗಳನ್ನು ಬದಲಿಸಿ, 2ನೇ ಅವಧಿಯಲ್ಲಿ 2 ಮುಖ್ಯಮಂತ್ರಿಗಳನ್ನು ಬದಲಿಸಿದ ಹಾಗೂ ಆಪರೇಷನ್ ಕಮಲವೆಂಬ ಕರ್ನಾಟಕ ರಾಜಕಾರಣದ ಕರಾಳ ಅಧ್ಯಾಯವನ್ನು ಆರಂಭಿಸಿದ ಬಿಜೆಪಿ ಅವರಿಗೆ ಕಾಂಗ್ರೆಸ್ ಹೆಸರೆತ್ತುವುದಕ್ಕೆ ನೈತಿಕತೆಯೂ ಇಲ್ಲ, ಅರ್ಹತೆಯೂ ಇಲ್ಲ ಎಂದು ಖರ್ಗೆ ತಿವಿದಿದ್ದಾರೆ.
ಹೈಕಮಾಂಡ್ ಕಪ್ಪದ ಬಗ್ಗೆ ಬಹಳ ಆಸಕ್ತಿಯಿಂದ ಮಾತನಾಡುವ ಬಿಜೆಪಿ, ಯಡಿಯೂರಪ್ಪನವರು ಹೈಕಮಾಂಡ್‌ಗೆ ಎಷ್ಟು ಕಪ್ಪ ಕೊಟ್ಟು 4 ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದರು? ಜಗದೀಶ್ ಶೆಟ್ಟರ್, ಸದಾನಂದಗೌಡರು, ಬಸವರಾಜ್ ಬೊಮ್ಮಯಿ ಅವರು ಎಷ್ಟೆಷ್ಟು ಬಿಡ್ ಕೂಗಿ ಮುಖ್ಯಮಂತ್ರಿಗಳಾದರು? ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳು ನಮ್ಮದಲ್ಲ, ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ ಎಂಬುದು ಪೇಮೆಂಟ್ ಸೀಟ್ ಎಂದು ಯತ್ನಾಳ್ ಅವರೇ ಹೇಳಿದ್ದರು. ಮಂತ್ರಿಗಿರಿಗೆ ₹70 ರಿಂದ 80 ಕೋಟಿ ವಸೂಲಿಯಾಗಿತ್ತು ಎಂಬ ಸತ್ಯವನ್ನೂ ಬಿಜೆಪಿಯವರೇ ಬಹಿರಂಗಪಡಿಸಿದ್ದರು ಎಂದು ಬರೆದುಕೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಆಗಮಿಸಿ 4 ದಿನ ಕಳೆದರೂ ಡಿಸಿಎಂ ಡಿ.ಕೆ.ಶಿವಕುಮಾರ್ ಈವರೆಗೆ ಅವರನ್ನು ಭೇಟಿ ಮಾಡಿಲ್ಲ. ಇದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಧಿಕಾರ ಹಸ್ತಾಂತರದ ಬೆಳವಣಿಗೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ಖರ್ಗೆ ಅವರನ್ನು ಭೇಟಿಯಾಗಿದ್ದರು. ಆದರೆ ಡಿಕೆಶಿ ಭೇಟಿ ಮಾಡದಿರುವುದು ಕುತೂಹಲ ಮೂಡಿಸಿದೆ. ಆದರೆ ಈ ಬಗ್ಗೆ ಡಿಕೆಶಿ ಸ್ಪಷ್ಟನೆ ನೀಡಿದ್ದು, ‘ಖರ್ಗೆಯವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದೇನೆ. ಮತ್ತೆ ಭೇಟಿ ಮಾಡಬೇಕು ಎಂದರೆ ಮಾಡುತ್ತೇನೆ. ಇದರಲ್ಲಿ ಯಾವುದೇ ಗೊಂದಲವಿಲ್ಲ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.