ಈಶ್ವರಪ್ಪ ರಾಜೀನಾಮೆ ಹಿಂದಿದೆಯಾ ಮತ್ತೊಂದು ಕಹಾನಿ?

By Suvarna News  |  First Published Apr 15, 2022, 4:58 AM IST

* ನಾಳೆ ವಿಜಯನಗರದಲ್ಲಿ ನಡೆಯುವ ಕಾರ್ಯಕಾರಣಿಗೆ ನಡ್ಡಾ ಆಗಮನ, ಈ ವೇಳೆ ಮುಜುಗರ ಆಗದಂತೆ ಕ್ರಮ

* ಇದನ್ನು ತಪ್ಪಿಸಲು ಹೈಕಮಾಂಡ್‌ ಸೂಚನೆ ಅನ್ವಯ ರಾಜೀನಾಮೆ

* ಪ್ರಕರಣ ಕುರಿತು ಕಟೀಲ್‌, ಈಶ್ವರಪ್ಪರಿಂದ ವರದಿ ಪಡೆದ ಹೈಕಮಾಂಡ್‌


ಬೆಂಗಳೂರು(ಏ.15) ವಿಜಯನಗರ ಜಿಲ್ಲೆಯಲ್ಲಿ ಪೂರ್ವನಿಗದಿಯಂತೆ ಶನಿವಾರ ಮತ್ತು ಭಾನುವಾರ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಆಗಮಿಸಲಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಗುತ್ತಿಗೆದಾರ ಡೆತ್‌ನೋಟ್‌ ಪ್ರಕರಣದಿಂದ ಮುಜುಗರವಾಗುವುದು ಬೇಡ ಎಂಬ ಕಾರಣಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಎರಡು ದಿನಗಳ ಕಾಲ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ವಿಜಯನಗರ ಜಿಲ್ಲೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಸಭೆಯಲ್ಲಿ ಮುಂದಿನ ಚುನಾವಣೆಗೆ ಸಿದ್ಧತೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ರಾಜ್ಯದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿರುವ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣವು ಕಾರ್ಯಕಾರಿಣಿ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇತ್ತು. ಇದರಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಮುಜುಗರವಾಗುವ ಸಾಧ್ಯತೆ ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್‌ ಸೂಚನೆ ಮೇರೆಗೆ ಸಚಿವ ಈಶ್ವರಪ್ಪ ರಾಜೀನಾಮೆಗೆ ನಿರ್ಧರಿಸಿದ್ದಾರೆ.

Tap to resize

Latest Videos

ಶುಕ್ರವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರಾಜೀನಾಮೆ ನೀಡುವ ಬಗ್ಗೆ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ. ಪ್ರಕರಣದಿಂದ ಪಕ್ಷದಲ್ಲಿಯೇ ಭಿನ್ನಮತ ಉಂಟಾಗುವ ಸಾಧ್ಯತೆ ಇದೆ. ಕಾರ್ಯಕಾರಿಣಿ ಸಭೆಯಲ್ಲಿ ಭಿನ್ನಮತ ವ್ಯಕ್ತವಾಗುತ್ತಿತ್ತು. ಈಶ್ವರಪ್ಪ ರಾಜೀನಾಮೆ ಘೋಷಣೆಯಿಂದ ಮುಜುಗರಕ್ಕೊಳಗಾಗುವ ಪರಿಸ್ಥಿತಿಯಿಂದ ಪಾರಾಗಿದೆ. ಅಲ್ಲದೇ, ಪ್ರತಿಪಕ್ಷ ಕಾಂಗ್ರೆಸ್‌ನ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿರುವುದರಿಂದ ಪಕ್ಷಕ್ಕೆ ಇರುಸುಮುರುಸು ಆಗಿದ್ದು, ಇದರಿಂದಲೂ ತಪ್ಪಿಸಿಕೊಂಡಂತಾಗಿದೆ ಎಂದು ಹೇಳಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್‌ ವಾಸ್ತವಾಂಶದ ಕುರಿತು ವರದಿ ಪಡೆದುಕೊಂಡಿದೆ. ಹೈಕಮಾಂಡ್‌ ತಾಕೀತು ಮಾಡಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವರದಿ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾಮಗಾರಿಯಲ್ಲಿ ಶೇ.40ರಷ್ಟುಕಮಿಷನ್‌ ಆರೋಪವು ಪ್ರತಿಪಕ್ಷ ಕಾಂಗ್ರೆಸ್‌ ಸೇರಿದಂತೆ ಇತರೆ ಪಕ್ಷಗಳಿಗೆ ಅಸ್ತ್ರವಾಗಿರುವುದು ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡಿತು. ಇಡೀ ಸಂಪುಟವೇ ಈಶ್ವರಪ್ಪ ಬೆಂಬಲಕ್ಕೆ ನಿಂತರೂ ನೈತಿಕವಾಗಿ ಸಮರ್ಥಿಸಿಕೊಳ್ಳಲು ಪಕ್ಷಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ರಾಜೀನಾಮೆ ಪಡೆದು ಸದ್ಯಕ್ಕೆ ಟೀಕೆಗಳಿಂದ ಪಾರಾಗುವುದು ಒಳಿತು ಎಂಬುದನ್ನು ಮನಗಂಡು ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆದುಕೊಳ್ಳಲಾಗುತ್ತಿದೆ.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌ ಅವರಿಂದ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಂದಲೂ ಪ್ರತ್ಯೇಕ ಮಾಹಿತಿಯನ್ನು ಹೈಕಮಾಂಡ್‌ ಪಡೆದುಕೊಂಡಿದೆ. ಇದಲ್ಲದೇ, ಇತರೆ ಮೂಲಗಳಿಂದಲೂ ವಾಸ್ತವತೆಯ ಕುರಿತು ಮಾಹಿತಿಯನ್ನು ಸಂಗ್ರಹಿಸಿದೆ. ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ರಾಜ್ಯಕ್ಕೆ ಜೆ.ಪಿ.ನಡ್ಡಾ ಅವರು ಆಗಮಿಸಿದಾಗ ಈ ಬಗ್ಗೆ ಮಾಧ್ಯಮಗಳಿಗೆ ಉತ್ತರ ನೀಡಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಬೇಕಾದರೆ ಈಶ್ವರಪ್ಪ ರಾಜೀನಾಮೆ ಅನಿವಾರ್ಯ ಎಂಬುದನ್ನು ವರಿಷ್ಠರು ಮನಗಂಡಿದ್ದಾರೆ. ಹೀಗಾಗಿ ರಾಜೀನಾಮೆ ನೀಡುವಂತೆ ನಿರ್ದೇಶನ ನೀಡಿದ್ದರಿಂದ ಈಶ್ವರಪ್ಪ ರಾಜೀನಾಮೆ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.

click me!