ಸರ್ಕಾರದ ಸ್ಪಷ್ಟ ಆದೇಶ, ಮೇಲುಗೈ ಸಾಧಿಸಿದ ಪ್ರೀತಂ ಗೌಡ, ರೇವಣ್ಣಗೆ ಹಿನ್ನಡೆ

Published : May 05, 2022, 12:34 PM IST
ಸರ್ಕಾರದ ಸ್ಪಷ್ಟ ಆದೇಶ, ಮೇಲುಗೈ ಸಾಧಿಸಿದ ಪ್ರೀತಂ ಗೌಡ, ರೇವಣ್ಣಗೆ ಹಿನ್ನಡೆ

ಸಾರಾಂಶ

* ಹಾಸನದಲ್ಲಿ ಟ್ರಕ್​ ಟರ್ಮಿನಲ್​ ವಿವಾದ * ರಾಜ್ಯ ಸರ್ಕಾರದಿಂದ ಸ್ಪಷ್ಟ ಆದೇಶ * ರೇವಣ್ಣ ವಿರುದ್ಧ ಮೇಲುಗೈ ಸಾಧಿಸಿದ ಪ್ರೀತಂ ಗೌಡ 

ಹಾಸನ, (ಮೇ.05): ಹಾಸನದಲ್ಲಿ ಟ್ರಕ್​ ಟರ್ಮಿನಲ್​ ವಿವಾದದಲ್ಲಿ ಕೊನೆಗೂ ಹಾಸನ ಶಾಸಕ ಪ್ರೀತಂ ಗೌಡ ಮೇಲುಗೈ ಸಾಧಿಸಿದ್ದು, ವಿವಾದಿತ ಜಾಗವನ್ನು ಟ್ರಕ್ ಟರ್ಮಿನಲ್​ಗೆ ಕಾಯ್ದಿರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಮಾಜಿ ಸಚಿವ ಹೆಚ್.ಡಿ ರೇವಣ್ಣ ಹಾಗೂ ಹಾಸನ ಶಾಸಕ‌ ಪ್ರೀತಮ್ ಗೌಡ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿದ್ದ ಟ್ರಕ್​ ಟರ್ಮಿನಲ್​ ವಿವಾದದಲ್ಲಿ ಪರಿಸ್ಥಿತಿ ಕೈ ಮೀರಿ 144 ಸೆಕ್ಷನ್​ ಜಾರಿ ಮಾಡಲಾಗಿತ್ತು.ಹಾಸನ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಕೂಡ ಒಂದು ನಿಲುವಿಗೆ ಬರಲಾಗದೇ ವಿವಾದವನ್ನು ಕಂದಾಯ ಸಚಿವ ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದರು.

 ಕೊನೆಗೂ ಸರ್ಕಾರ ಈ ಬಗ್ಗೆ ನಿಲುವಿಗೆ ಬಂದಿದ್ದು, ಕಂದಾಯ ಇಲಾಖೆ ಉಪ ಕಾರ್ಯದರ್ಶಿ ಕವಿತಾ ರಾಮ್ ಸದ್ಯ ಜಾಗವನ್ನು ಟ್ರಕ್ ಟರ್ಮಿನಲ್​ಗೆ ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ. ಈ ಸ್ಥಳವನ್ನು ಅಲ್ಲದೇ ಮುಂದೆ ಯಾವುದೇ ಸಂಸ್ಥೆ, ಅಥವಾ ಇನ್ನಾವುದೇ ಉದ್ದೇಶಕ್ಕೆ ನೀಡುವುದಾದರೆ ನೇರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ನೀಡುವಂತೆ ಸರ್ಕಾರ ಸೂಚನೆ ನೀಡಿದೆ.

Karnataka Politics: ತಾಕತ್ತಿದ್ದರೆ ಹಾಸನಕ್ಕೆ ರೇವಣ್ಣ ಬಂದು ನಿಲ್ಲಲಿ: ಶಾಸಕ ಪ್ರೀತಮ್‌ ಜೆ. ಗೌಡ

ಶಾಸಕ ಪ್ರೀತಂಗೌಡ ನೇತೃತ್ವದಲ್ಲಿ ಕೈಗೊಂಡ ಹಲವು ಕಾಮಗಾರಿಗಳಲ್ಲಿ ಹಾಸನದಲ್ಲಿ ಹಳೆತಾಲೂಕು ಕಚೇರಿ ಕೆಡವಿ ನೂತನವಾಗಿ ನಿರ್ಮಿಸುವುದು ಮತ್ತು ಟ್ರಕ್ ಟರ್ಮಿನಲ್ ಕೂಡ ಸೇರಿದ್ದವು. ಆದ್ರೆ ಇವೆರೆಡು ಕಾಮಗಾರಿಗಳನ್ನು ಮಾಜಿ ಸಚಿವ ಎಚ್‍.ಡಿ.ರೇವಣ್ಣ ವಿರೋಧಿಸುತ್ತಲೇ ಬಂದಿದ್ದರು. ಒಂದು ಕಡೆ ಟ್ರಕ್ ಟರ್ಮಿನಲ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ರೇವಣ್ಣ ಯಶಸ್ವಿಯಾಗಿದ್ರು. ಆದ್ರೆ, ಇದೀಗ ಸರ್ಕಾರ, ಟ್ರಕ್ ಟರ್ಮಿನಲ್​ಗೆ ಕಾಯ್ದಿರಿಸಿ ಆದೇಶ ಹೊರಡಿಸಿದ್ದು, ರೇವಣ್ಣಗೆ ಮುಖಂಭವಾದಂತಾಗಿದೆ.

ಹಾಸನದ ಕೆಂಚಟ್ಟಹಳ್ಳಿ ಬಳಿ ಇರುವ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮುಂಭಾಗ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಹೋರಾಟ ನಡೆಸಿದ್ರು. ಅವರಿಗೆ ಎಚ್‍.ಡಿ.ರೇವಣ್ಣ ಬೆಂಬಲ ಸೂಚಿಸಿದ್ರು. ಆದ್ರೆ ಯಾವುದೇ ಕಾರಣಕ್ಕೂ ಟ್ರಕ್ ಟರ್ಮಿನಲ್ ನಿಲ್ಲಿಸಲ್ಲ ಎಂದು ಪ್ರೀತಂ ಗೌಡ ಸವಾಲು ಹಾಕಿದ್ರು. ಇದಾದ ನಂತರ ರೇವಣ್ಣ ಮತ್ತು ಅವರ ಪುತ್ರರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಮಗಾರಿ ತಡೆದು, ಕಾಂಪೌಂಡ್ ಗೋಡೆ ಕೆಡವಲಾಗಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು.

ಕೇವಲ ಟ್ರಕ್ ಟರ್ಮಿನಲ್ ವಿಚಾರವಲ್ಲ. ಹಾಸನದಲ್ಲಿ ಈಗಿರುವ ತಾಲೂಕು ಕಚೇರಿ ಕೆಡವಿ, ನೂತನವಾಗಿ ತಾಲೂಕು ಕಚೇರಿ ನಿರ್ಮಿಸಲು ಪ್ರೀತಂ ಗೌಡ ಯೋಜನೆ ರೂಪಿಸಿದ್ರು. ಆದ್ರೆ ಅದಕ್ಕೂ ಯಾವುದೇ ಕಾರಣಕ್ಕೂ ಅವಕಾಶ ಕೊಡಲ್ಲ. ಈಗಿರುವ ಹಳೆಯ ಕಟ್ಟಡವೇ ಇರಬೇಕೆಂದು ರೇವಣ್ಣ ಪಟ್ಟುಹಿಡಿದಿದ್ರು. ಯಾವಾಗ ಟ್ರಕ್ ಟರ್ಮಿನಲ್ ಕೆಲಸವನ್ನು ರೇವಣ್ಣ & ಸನ್ಸ್ ತಡೆಹಿಡಿದ್ರೋ, ಇದೀಗ ರಾತ್ರೋ ರಾತ್ರಿ ಹಾಸನ ತಾಲೂಕು ಕಚೇರಿಯನ್ನು, ಕಿಟಕಿ ಬಾಗಿಲುಗಳ ಸಮೇತವೇ ನೆಲಕ್ಕುರುಳಿಸುವ ಕೆಲಸ ಮಾಡಿಸಿರುವ ಪ್ರೀತಂಗೌಡ, ಎಚ್‍ಡಿ.ರೇವಣ್ಣನಿಗೆ ಟಾಂಗ್ ನೀಡಿದ್ದಾರೆ. 

ಜಿಲ್ಲಾಧಿಕಾರಿ ವಿರುದ್ಧ ರೇವಣ್ಣ ಗರಂ
ರಾತ್ರಿ ವೇಳೆ ಹಾಸನ ತಾಲೂಕು ಕಚೇರಿ ಕಟ್ಟಡ ಒಡೆದು ಹಾಕಿದ ಬಗ್ಗೆಯೂ ಅಸಮಾಧಾನ ಹೊರಹಾಕಿದ ರೇವಣ್ಣ ಅವರು, ಡಿಸಿಯವರಿಗೆ ಪುರುಸೊತ್ತಿಲ್ಲ, ರಾತ್ರಿ ವೇಳೆ ಬಿಲ್ಡಿಂಗ್ ಹೊಡೆಯುವುದರಲ್ಲಿ ಬ್ಯುಸಿ ಇದ್ದಾರೆ. ಡಿಸಿ ಅನ್ನೋ ಪದ ತೆಗೆಯಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

ಡಿಸಿ ಆಫೀಸ್ ಹೊಡೆದ್ರೆ ಅದರ ಪರಿಣಾಮ ಬೇರೆ ಆಗುತ್ತೆ. ಜಿಲ್ಲಾಧಿಕಾರಿ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು. ನಾನು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಡಿಸಿ ರಬ್ಬರ್ ಸ್ಟಾಂಪ್ ಇದ್ದಂಗೆ, ಡಿಸಿ ಆಗುವುದಕ್ಕೆ ಅವರಿಗೆ ಯೋಗ್ಯತೆಯಿಲ್ಲ. ಯಾವೋನೋ ಹೇಳ್ದಾ ಕಟ್ಟಡ ಹೊಡುದ್ರು. ಎಷ್ಟು ದಿನ ದಬ್ಬಾಳಿಕೆ ಮಾಡ್ತಾರೆ ಮಾಡ್ಲಿ. ಕೆಲವು ಅಧಿಕಾರಿಗಳು ಮುಂದಿನ ದಿನಗಳಲ್ಲಿ ಅನುಭವಿಸುತ್ತಾರೆ. ಇವರೆಲ್ಲ ಜನಹಿತ ಕಾಪಾಡುವುದಿಲ್ಲ. ಇವರು ಬರಿ ದುಡ್ಡು ಹೊಡೆಯುತ್ತಾರೆ. ಡಿಸಿ ಮೇಲೆ ಕ್ರಿಮಿನಲ್ ಕೇಸ್ ಹಾಕುವಂತೆ ರಾಜ್ಯಪಾಲರು, ಸಿಎಂಗೆ ಮನವಿ ಕೊಟ್ಟಿದ್ದೇನೆ ಎಂದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!