Karnataka Politics: ಸಂಸದ ಕರಡಿ ಹೇಳಿಕೆಗೆ ಬಿಜೆಪಿಯಲ್ಲಿ ಭಾರೀ ಸಂಚಲನ..!

By Girish GoudarFirst Published May 5, 2022, 7:55 AM IST
Highlights

*  ಇದುವರೆಗೂ ತೆರೆಮರೆಯಲ್ಲಿನ ಚರ್ಚೆಯೀಗ ಬಹಿರಂಗ
*  ಎಂಎಲ್‌ಎ ಚುನಾವಣೆಯಲ್ಲಿ ಸ್ಪರ್ಧೆ ವದಂತಿ 
*  ಬಿಜೆಪಿ ವರಿಷ್ಠರು ಅವಕಾಶ ನೀಡಿದರೆ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.05): ಸಂಸದ ಸಂಗಣ್ಣ ಕರಡಿ(Sanganna Karadi) ಅವರು ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ(Koppal Assembly Constituency) ಸ್ಪರ್ಧೆ ಮಾಡುತ್ತಾರೆ ಎನ್ನುವ ಕುರಿತು ವದಂತಿ ಆಗಾಗ ಹರಡುತ್ತಿತ್ತು. ಆದರೆ, ಸ್ವತಃ ಸಂಗಣ್ಣ ಕರಡಿ ಅವರೇ ಸಿಂಧನೂರು ತಾಲೂಕಿನ ತುರುವಿಹಾಳ ಗ್ರಾಮದ ಕಾರ್ಯಕ್ರಮವೊಂದರಲ್ಲಿ ವರಿಷ್ಠರು ಅವಕಾಶ ನೀಡಿದರೆ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿರುವುದು ಭಾರಿ ಸಂಚಲನ ಮೂಡಿದೆ.

ಎಂಎಲ್‌ಎ ಚುನಾವಣೆಯಲ್ಲಿ(Karnataka Assembly Election) ಸ್ಪರ್ಧೆ ವದಂತಿ ಕುರಿತು ಪ್ರಶ್ನೆ ಕೇಳಿದಾಗಲೆಲ್ಲಾ ನಾನೀಗ ಸಂಸದನಿದ್ದೇನೆ ಎನ್ನುತ್ತಿದ್ದರು. ಆದರೆ ‘ಜೆಡಿಎಸ್‌(JDS) ಸೇರಿದಂತೆ ಬೇರೆ ಪಕ್ಷದಿಂದಲೂ ಸ್ಪರ್ಧೆ ಮಾಡುವುದಿಲ್ಲ. ಬಿಜೆಪಿ(BJP) ವರಿಷ್ಠರು ಅವಕಾಶ ನೀಡಿದರೆ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ’ ಎಂದು ಸಂಗಣ್ಣ ಹೇಳಿದ್ದಾರೆ.

ಆ್ಯಸಿಡ್ ದಾಳಿಗೆ ಒಳಗಾದ ಯುವತಿಯ ನೆರವಿಗೆ ಧಾವಿಸಿದ ಸಚಿವ ಹಾಲಪ್ಪ ಆಚಾರ್

ಸಂಗಣ್ಣ ಅವರಿಗೆ ಬಿಜೆಪಿ ಟಿಕೆಟ್‌ ಸಿಗುವುದು ಕಷ್ಟ. ಹೀಗಾಗಿ ಅವರು ಜೆಡಿಎಸ್‌ದಿಂದ(JDS) ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಕುರಿತು ಗುಸುಸು ಚರ್ಚೆ ಕೇಳಿಬಂದಿತ್ತು. ಆದರೆ, ಇದನ್ನು ಸಂಸದ ಸಂಗಣ್ಣ ಕರಡಿ ಅವರು ತಳ್ಳಿ ಹಾಕಿದ್ದಾರೆ. ಪಕ್ಷ ನನ್ನನ್ನು ಒಂದು ಬಾರಿ ಶಾಸಕನನ್ನು ಮಾಡಿದೆ ಮತ್ತು ಎರಡು ಬಾರಿ ಸಂಸದನನ್ನಾಗಿ ಮಾಡಿದೆ. ಹೀಗಾಗಿ ಪಕ್ಷದ ವರಿಷ್ಠರು ಅವಕಾಶ ನೀಡಿದರೆ ಮಾತ್ರ ಬಿಜೆಪಿಯಿಂದಲೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎನ್ನುವುದು ಜನರ ಆಸೆಯಾಗಿದೆ ಎನ್ನುವ ಮೂಲಕ ಅವರು ಜೆಡಿಎಸ್‌ ಬಾಗಿಲು ತಟ್ಟುತ್ತಿದ್ದಾರೆ ಎನ್ನುವುದನ್ನು ಅಲ್ಲಗಳೆದಿದ್ದಾರೆ.

ಪುತ್ರನ ಬದಲಿಗೆ ಅಖಾಡಕ್ಕೆ:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಠಕ್ಕೆ ಬಿದ್ದು ಸಂಸದ ಸಂಗಣ್ಣ ಕರಡಿ ಅವರು ಪುತ್ರ ಅಮರೇಶ ಕರಡಿ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಚುನಾವಣೆಯಲ್ಲಿ ಗೆಲ್ಲಿಸಲು ಶತಾಯ ಪ್ರಯತ್ನ ಮಾಡಿದರು. ಆದರೆ ಗೆಲುವು ಸಾಧ್ಯವಾಗಲಿಲ್ಲ.

ಬಿಜೆಪಿ ಲೀಡರ್ ಬರ್ತಡೇಗೆ ಕಾಂಗ್ರೆಸ್ ಮುಖಂಡನ ಶುಭಾಶಯ ಫೆಕ್ಸ್, ಚರ್ಚೆಗೆ ಗ್ರಾಸ

ತಮ್ಮ ಕುಟುಂಬದಿಂದಲೇ ಅಮರೇಶ ಕರಡಿ ಬದಲಿಗೆ ಗವಿಸಿದ್ದಪ್ಪ ಕರಡಿ ಅವರನ್ನು ಅಖಾಡಕ್ಕೆ ಇಳಿಸಲಿದ್ದಾರೆ ಎನ್ನುವ ವದಂತಿಯೂ ಹರಡಿತ್ತು. ಅಲ್ಲದೇ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್‌ ಅವರ ಪರವಾಗಿಯೂ ಕಳೆದ ಬಾರಿ ಬ್ಯಾಟಿಂಗ್‌ ಮಾಡಿದ್ದು, ಈ ಬಾರಿಯೂ ಆ ಮಾತನ್ನು ಅಲ್ಲಗಳೆಯುತ್ತಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಇದೆಲ್ಲವನ್ನು ಮೀರಿ ತಾವೇ ಸ್ಪರ್ಧೆಗೆ ಮುಂದಾಗಿರುವ ಕುರಿತು ಹೇಳಿಕೆ ನೀಡಿರುವುದು ವಿಶೇಷ.
ವಿಧಾನಸಭೆ ಚುನಾವಣೆ ಸ್ಪರ್ಧೆ ಕುರಿತ ಸಂಗಣ್ಣ ಅವರ ಹೇಳಿಕೆ ಬಿಜೆಪಿ ವಲಯದಲ್ಲಿಯೂ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಅಂತಿಮವಾಗಿ ಟಿಕೆಟ್‌ ಯಾರಿಗೆ ದಕ್ಕುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕೊಪ್ಪಳ ವಿಧಾನಸಭಾ ಚುನಾವಣೆಯಿಂದ ಸ್ಪರ್ಧಿಸುವ ಕುರಿತು ಮಾತನಾಡಿರುವುದು ನಿಜ. ಆದರೆ, ಪಕ್ಷದ ವರಿಷ್ಠರು ಒಪ್ಪಿದರೆ ಮಾತ್ರ ಸ್ಪರ್ಧೆ ಮಾಡುವುದಾಗಿ ಹೇಳಿದ್ದೇನೆ. ಜೆಡಿಎಸ್‌ದಿಂದ ಸ್ಪರ್ಧೆ ಮಾಡುತ್ತೇನೆ ಎನ್ನುವ ವದಂತಿ ಸುಳ್ಳು ಅಂತ ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.  
 

click me!