ಜೈಲಿಗೆ ಹೋಗಿ ಬಂದವರಿಗೆ ನನ್ನ ಬಗ್ಗೆ ಮಾತಾಡುವ ನೈತಿಕತೆ ಇಲ್ಲ: ಡಿಕೆಶಿ ವಿರುದ್ಧ ಅಶ್ವತ್ಥ್‌ ಗರಂ

Published : May 05, 2022, 07:31 AM ISTUpdated : May 05, 2022, 07:45 AM IST
ಜೈಲಿಗೆ ಹೋಗಿ ಬಂದವರಿಗೆ ನನ್ನ ಬಗ್ಗೆ ಮಾತಾಡುವ ನೈತಿಕತೆ ಇಲ್ಲ: ಡಿಕೆಶಿ ವಿರುದ್ಧ ಅಶ್ವತ್ಥ್‌ ಗರಂ

ಸಾರಾಂಶ

*  ತಮ್ಮನ್ನು ಭ್ರಷ್ಟಎಂದ ಡಿಕೆಶಿಗೆ ಅಶ್ವತ್ಥ್‌ ನಾರಾಯಣ್‌ ತಿರುಗೇಟು *  ಡಿಕೆಶಿ ಭ್ರಷ್ಟಾಚಾರಕ್ಕೆ ಹೆಸರುವಾಸಿ, ನನ್ನ ಬಗ್ಗೆ ದಾಖಲೆ ರಹಿತ ಆರೋಪ *  ಅಶ್ವತ್ಥ್‌ನಾರಾಯಣ ಅತ್ಯಂತ ಭ್ರಷ್ಟ ಸಚಿ​ವ  

ಬೆಂಗಳೂರು(ಮೇ.05): ಭ್ರಷ್ಟಾಚಾರಕ್ಕೆ(Corruption) ಹೆಸರುವಾಸಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಭ್ರಷ್ಟಾಚಾರದ ಬಗ್ಗೆ ಬಹಳ ದೊಡ್ಡ ಹೇಳಿಕೆ ನೀಡಿದ್ದಾರೆ. ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದ ವ್ಯಕ್ತಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ್‌ನಾರಾಯಣ(CN Ashwath Narayan) ತಿರುಗೇಟು ನೀಡಿದ್ದಾರೆ.

ಎಸ್‌ಐ ನೇಮಕಾತಿ ಹಗರಣಕ್ಕೆ(PSI Recruitment Scam) ಸಂಬಂಧಿಸಿದಂತೆ ‘ಅಶ್ವತ್ಥನಾರಾಯಣ ಅತ್ಯಂತ ಭ್ರಷ್ಟಸಚಿವ’ ಎಂಬ ಡಿ.ಕೆ.ಶಿವಕುಮಾರ್‌(DK Shivakumar) ಹೇಳಿಕೆಗೆ ಪ್ರತಿಕ್ರಿಯಿಸಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವರು ಯಾವುದೇ ದಾಖಲೆ ಇಲ್ಲದೆ ಮಾತನಾಡಿದ್ದಾರೆ. ಜೈಲಿಗೆ ಹೋಗಿ ಬಂದ ವ್ಯಕ್ತಿ ನನ್ನ ಬಗ್ಗೆ ಮಾತನಾಡಿದ್ದಾರೆ. ನೈತಿಕತೆ ಇಲ್ಲದ ವ್ಯಕ್ತಿ ಮಾಡಿರುವ ಸುಳ್ಳು ಆರೋಪಗಳನ್ನು ನಾನು ಖಂಡಿಸುತ್ತೇನೆ’ ಎಂದು ಹೇಳಿದರು.

PSI Scam: ನಾನು ಸಿಎಂ ಆಗುತ್ತೇನೆಂದು ಡಿಕೆಶಿಗೆ ಭಯ: ಸಚಿವ ಅಶ್ವತ್ಥ ನಾರಾಯಣ

‘ಕಾಂಗ್ರೆಸ್‌(Cogress) ಸೋತು ಸುಣ್ಣವಾಗಿದೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ವ್ಯಕ್ತಿಯ ಆರೋಪಕ್ಕೆ ಯಾವುದೇ ಕಿಮ್ಮತ್ತಿಲ್ಲ. ಸಿಐಡಿ ತನಿಖೆ ನಡೆಸುತ್ತಿದ್ದು, ದಾಖಲೆ ಇದ್ದರೆ ಮುಂದೆ ಬನ್ನಿ. ತನಿಖೆ ವೇಳೆ ಸುಳ್ಳು ಹೇಳಿಕೆಗಳಿಂದ ದಾರಿ ತಪ್ಪಿಸುವ ಪ್ರಯತ್ನ ಮಾಡಬೇಡಿ. ಕಾಂಗ್ರೆಸ್‌ ಪಕ್ಷವೇ ಜೈಲಿಗೆ ಹೋಗಿ ಬಂದವರನ್ನು ಅಧ್ಯಕ್ಷರನ್ನಾಗಿ ಮಾಡಿದೆ. ಅಂತಹ ಅಧ್ಯಕ್ಷರು ಬೇರೆ ಪಕ್ಷಗಳತ್ತ ಬೊಟ್ಟು ಮಾಡುತ್ತಿರುವುದು ಹಾಸ್ಯಾಸ್ಪದ’ ಎಂದರು.

ಜೈಲು ಸೇರಿದವರ ಪರವಾಗಿ ಸಿದ್ದು ಹೇಳಿಕೆ:

‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಅಸಹಾಯಕರಾಗಿದ್ದಾರೆ. ಜೈಲಿಗೆ ಹೋಗಿ ಬಂದ ಡಿ.ಕೆ. ಶಿವಕುಮಾರ್‌ ಪರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಜೈಲಿಗೆ ಹೋಗಿ ಬಂದ ಇವರ ವಿರುದ್ಧ ಸಿದ್ದರಾಮಯ್ಯ ಎಂದಾದರೂ ಧ್ವನಿ ಎತ್ತಿದ್ದಾರಾ?’ ಎಂದು ಅಶ್ವತ್ಥನಾರಾಯಣ ಪ್ರಶ್ನಿಸಿದರು.

‘ಇದೇ ಪ್ರಕರಣ ಕಾಂಗ್ರೆಸ್‌ ಅವಧಿಯಲ್ಲಿ ನಡೆದಿದ್ದರೆ ತನಿಖೆಗೆ ವಹಿಸುತ್ತಿರಲಿಲ್ಲ. ನಮ್ಮ ಸಚಿವರು ಗಮನಕ್ಕೆ ಬಂದ ಕೂಡಲೇ ತನಿಖೆಗೆ ಆದೇಶಿಸಿದ್ದಾರೆ. ನಮ್ಮ ಉನ್ನತ ಶಿಕ್ಷಣ ಇಲಾಖೆ ಬಗ್ಗೆಯೂ ದೂರು ಬಂದಿದ್ದು, ತಕ್ಷಣ ತನಿಖೆಗೆ ನೀಡಲಾಗಿದೆ’ ಎಂದು ಸಮರ್ಥಿಸಿಕೊಂಡರು.

ಗೌಡರೆಲ್ಲ ನನ್ನ ಸಂಬಂಧಿಕರು:

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಹೆಸರು ಕೇಳಿಬಂದಿರುವ ದರ್ಶನ್‌ ಗೌಡ, ನಾಗೇಶ್‌ ಗೌಡ ನಿಮ್ಮ ಸಂಬಂಧಿಗಳೇ ಎಂಬ ಪ್ರಶ್ನೆಗೆ, ‘ರಾಜ್ಯದಲ್ಲಿರುವ ಎಲ್ಲ ಗೌಡರು ನನ್ನ ಸಂಬಂಧಿಕರೇ. ಯಾರೇ ಇರಲಿ ಎಲ್ಲರೂ ನನ್ನ ಸಂಬಂಧಿಗಳೇ. ಇಲ್ಲಿ ಅವರು ಬೇರೆ, ಇವರು ಬೇರೆ ಇಲ್ಲ. ಗೌಡರು ಯಾರಿದ್ದಾರೆ ಎಲ್ಲರೂ ನಮ್ಮವರೇ’ ಎಂದಷ್ಟೇ ಹೇಳಿದರು.

ಅಶ್ವತ್ಥ್‌ನಾರಾಯಣ ಅತ್ಯಂತ ಭ್ರಷ್ಟ ಸಚಿ​ವ: ಡಿಕೆಶಿ

ರಾಮನಗರ/ಕನ​ಕ​ಪು​ರ: ಡಾ.ಅಶ್ವತ್ಥ ನಾರಾ​ಯಣ ಅವರು ರಾಜ್ಯ​ದಲ್ಲೇ(Karnataka) ಅತ್ಯಂತ ಹೆಚ್ಚು ಭ್ರಷ್ಟ ಸಚಿವ. ಇದ​ರಲ್ಲಿ ಯಾವ ಅನು​ಮಾ​ನವೂ ಇಲ್ಲ. ಹಾಗಿ​ದ್ದರೂ ಅವರು ತಮ್ಮನ್ನು ತಾವು ಪ್ರಾಮಾ​ಣಿಕ ಅಧಿ​ಕಾರಿ ಎಂದು ಬಿಂಬಿ​ಸಿ​ಕೊ​ಳ್ಳುವ ಅಗ​ತ್ಯ​ವೇ​ನಿದೆ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಆರೋ​ಪಿ​ಸಿ​ದ್ದಾ​ರೆ.

PSI Scam: ಪ್ರಭಾವಿ ಸಚಿವರ ಹೆಸರನ್ನ ಹೇಳಬೇಡಿ ಎಂದು ನನಗೆ ಕರೆ ಬರ್ತಿವೆ: ಡಿಕೆಶಿ

ಕನ​ಕ​ಪುರ ತಾಲೂ​ಕಿನ ದೊಡ್ಡಾ​ಲ​ಹ​ಳ್ಳಿ​ಯಲ್ಲಿ ಬುಧವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ನಾವು ಯಾರನ್ನೂ ಟಾರ್ಗೆಟ್‌ ಮಾಡುತ್ತಿಲ್ಲ, ಅವರೇನೋ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ. ಅವರು ತಡ ಮಾಡದೆ ಎಲ್ಲವನ್ನೂ ಬಿಚ್ಚಿಡಲಿ. ಬೇಡ​ವೆಂದು ಯಾರು ಹೇಳಿ​ದ್ದಾರೆ. ನಮಗೆ ಏನು ಬೇಕಾದರೂ ಮಾಡಲಿ, ನಾವು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಹೇಳಿದರು.

ಸಾರ್ವಜನಿಕ ಸಭೆಯಲ್ಲಿ ಗಂಡಸ್ತನದ ಬಗ್ಗೆ ಸಚಿವ ಅಶ್ವತ್ಥ್‌ನಾರಾಯಣ್‌ ಮಾತನಾಡಿದ್ದಾರೆ. ರಾಮನಗರ ಮಹಾ ಜನತೆಗೆ ಸವಾಲು ಹಾಕಿ ಇಲ್ಲಿ ಯಾರಾದರೂ ಗಂಡಸರು ಇದ್ದೀರಾ ಎಂದು ಕೇಳಿದ್ದರು. ನಾವೆಲ್ಲ ಹೆಂಗಸರ ಕುಲಕ್ಕೆ ಸೇರಿದವರು. ನಮಗೆಲ್ಲ ಸೀರೆ ಕೊಡಿಸಿದರೆ, ಅದನ್ನೇ ತೊಟ್ಟುಕೊಂಡು ಇದ್ದು ಬಿಡುತ್ತೇವೆ. ಅವರು ಹೇಳಿಕೆ ನೀಡು​ವಾಗ ಇದ್ದ​ವ​ರು ಗಂಡಸರೋ ಅಲ್ಲವೋ ಎಂದು ಹೇಳಬೇಕು. ಅವರೇ ಬೇಕಾದರೆ ಟೆಸ್ವ್‌ ಮಾಡಿಸಿಕೊಳ್ಳಲಿ ಎಂದು ವ್ಯಂಗ್ಯ​ವಾ​ಡಿ​ದರು ಡಿ.ಕೆ.​ಶಿ​ವ​ಕು​ಮಾ​ರ್‌.

ಹಗರಣಗಳನ್ನು ಸರ್ಕಾರದ ಪ್ರಭಾವದಿಂದಷ್ಟೇ ಮುಚ್ಚಿಹಾಕಲು ಸಾಧ್ಯ. ಪಿಎಸ್‌ಐ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆಯ ನಾಲ್ಕೈದು ಜನ ಆಯ್ಕೆಯಾಗಿದ್ದು, ಮೊದಲ ಸ್ಥಾನವನ್ನೂ ಪಡೆದಿದ್ದಾರೆ. ಅವರು ನಮಗೆ ಬೇಕಾದ ಹುಡುಗರೇ ಆಗಿದ್ದು, ಈ ಹಗರಣದಲ್ಲಿ ಭಾಗಿಯಾಗಿ ಬಂಧನವಾಗಿದ್ದಾರೆ. ಅವರಿಗೆ ಈ ಅಕ್ರಮದಲ್ಲಿ ಮಂತ್ರಿಗಳು ಸಹಾಯ ಮಾಡಿದ್ದಾರೋ, ಅವರ ಕುಟುಂಬದವರು ಮಾಡಿದ್ದಾರೋ ಗೊತ್ತಿಲ್ಲ ಎಂದು ತಿಳಿ​ಸಿದರು.

ಸರ್ಕಾ​ರದ ವಿವಿಧ ಇಲಾಖೆಗಳಲ್ಲಿ ಅಕ್ರಮ ನಡೆದಿದೆ. ಇನ್ನು ಅವರದೇ ಶಾಸಕರು ಹೇಳಿರುವಂತೆ ಕೆಪಿಎಸ್‌ಸಿ ಸದಸ್ಯರಾಗಲೂ ಹಣ ನೀಡಿದ್ದಾರಂತೆ. ಈ ಬಗ್ಗೆ ಬೊಮ್ಮಾಯಿ ಅವರು ಇನ್ನೂ ಯಾಕೆ ಕೇಸು ದಾಖಲಿಸಿಲ್ಲ? ಎಂದು ಇದೇ ವೇಳೆ ಪ್ರಶ್ನಿ​ಸಿ​ದ​ರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಂಎಸ್ಪಿ ಅಡಿಯಲ್ಲಿ ತೊಗರಿ ಖರೀದಿ ಆರಂಭಿಸಿ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ
ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್