Ballari Banner row: ರಾಜ್ಯ ಸರ್ಕಾರಕ್ಕೆ ಕಾನೂನು ಕಾಪಾಡಲು ಸಾಧ್ಯವಾಗದಿದ್ರೆ, ಕೇಂದ್ರ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ: ಪ್ರಲ್ಹಾದ್ ಜೋಶಿ ಎಚ್ಚರಿಕೆ

Published : Jan 03, 2026, 06:04 PM IST
Pralhad Joshi reacts to Ballari banner clash

ಸಾರಾಂಶ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಬಳ್ಳಾರಿ ಗುಂಡಿನ ಚಕಮಕಿ ಮತ್ತು ಕೋಗಿಲು ಬಡಾವಣೆ ತೆರವು ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಶಾಸಕರನ್ನು ರಕ್ಷಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಧಾರವಾಡ (ಜ.3): ಬಳ್ಳಾರಿಯಲ್ಲಿ ನಡೆದ ಗುಂಡಿನ ಚಕಮಕಿ ಮತ್ತು ಬೆಂಗಳೂರಿನ ಕೋಗಿಲು ಬಡಾವಣೆ ತೆರವು ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಕಿಡಿ ಕಾರಿದ್ದಾರೆ. ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವುದನ್ನು ಬಿಟ್ಟು ತನ್ನ ಶಾಸಕರನ್ನು ರಕ್ಷಿಸುವಲ್ಲಿ ಬ್ಯುಸಿಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಳ್ಳಾರಿ ಘಟನೆ: ಶಾಸಕರನ್ನು ರಕ್ಷಿಸಲು ಸರ್ಕಾರ ಹರಸಾಹಸ

ಬಳ್ಳಾರಿಯಲ್ಲಿ ನಡೆದ ಘಟನೆಯ ಕುರಿತು ಮಾತನಾಡಿದ ಜೋಶಿ, ಸರ್ಕಾರ ಕಾನೂನು ಸುವ್ಯವಸ್ಥೆ ಮರೆತು ಶಾಸಕ ಭರತ್ ರೆಡ್ಡಿ ಅವರನ್ನು ಕಾಪಾಡುವಲ್ಲಿ ಮಗ್ನವಾಗಿದೆ. ಅಲ್ಲಿ ಮೃತಪಟ್ಟ ವ್ಯಕ್ತಿಗೆ ತಗುಲಿರುವುದು ಪೊಲೀಸರ ಗುಂಡಲ್ಲ ಎಂಬುದು ಸ್ಪಷ್ಟವಾಗಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಹೋಗಿ ಗಲಾಟೆ ಮಾಡುವ ಅವಶ್ಯಕತೆ ಏನಿತ್ತು? ಅವರು ಮನೆಯಲ್ಲಿ ಇಲ್ಲದಿದ್ದಾಗ ಅವರ ಮನೆ ಮೇಲೆ ಫೈರ್ ಮಾಡುವುದು ಯಾವ ನ್ಯಾಯ? ಇದು ಸಂಪೂರ್ಣವಾಗಿ 'ನಾನ್‌ಸೆನ್ಸ್' ವರ್ತನೆ ಎಂದು ಆಕ್ರೋಶ ಹೊರಹಾಕಿದರು.

ದ್ವೇಷ ರಾಜಕಾರಣ, FIR ತಾರತಮ್ಯ

ಘಟನೆಯ ಬಗ್ಗೆ ತನಿಖೆಯ ವೈಖರಿಯನ್ನು ಟೀಕಿಸಿದ ಅವರು, ವಾಲ್ಮೀಕಿ ಪುತ್ಥಳಿ ಸ್ಥಾಪನೆಗೆ ಪಾಲಿಕೆಯಿಂದ ಅನುಮತಿಯೇ ಸಿಕ್ಕಿರಲಿಲ್ಲ. ಆದರೂ ತರಾತುರಿಯಲ್ಲಿ ಕಾರ್ಯಕ್ರಮ ಮಾಡಲು ಹೋಗಿ ಈ ಅನಾಹುತ ನಡೆದಿದೆ. ಸತೀಶ್ ರೆಡ್ಡಿ ಎಂಬುವವರು ಜನಾರ್ದನ ರೆಡ್ಡಿ ಮನೆ ಸುಟ್ಟು ಹಾಕಲು ಬೆಂಬಲಿಗರಿಗೆ ಪ್ರಚೋದನೆ ನೀಡಿದ್ದಾರೆ. ಆದರೆ ಸರ್ಕಾರ ಇವರ ಮೇಲೆ ಕ್ರಮ ಕೈಗೊಳ್ಳುವ ಬದಲು, ಘಟನೆಯನ್ನು ಪ್ರತಿಭಟಿಸಿದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಮೇಲೆ ಎಫ್‌ಐಆರ್ ದಾಖಲಿಸಿದೆ. ಗುಂಡು ಹಾರಿಸಿದವರ ಮೇಲೆ 24 ಗಂಟೆಯ ನಂತರ ಕೇಸ್ ದಾಖಲಿಸಿರುವುದು ಸರ್ಕಾರದ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ನೀತಿಯನ್ನು ತೋರಿಸುತ್ತದೆ ಎಂದರು.

ಕೋಗಿಲು ಲೇಔಟ್: ಅತಿಕ್ರಮಣಕಾರರಿಗೆ ಪರೋಪಕಾರಿ ಸಿದ್ದರಾಮಯ್ಯ

ಬೆಂಗಳೂರಿನ ಕೋಗಿಲು ಬಡಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ ಜೋಶಿ, ಸಿದ್ದರಾಮಯ್ಯ ಅವರು ಕೇವಲ ವ್ಯಾಕರಣ, ಸಂಧಿ, ಸಮಾಸ ಮಾತಾಡುತ್ತಾರೆ. ಇವರನ್ನು 'ಮನೆಗೆ ಮಾರಿ, ಅತಿಕ್ರಮಣಕಾರರಿಗೆ ಪರೋಪಕಾರಿ' ಎಂದು ಕರೆಯಬಹುದು. ಅಕ್ರಮವಾಗಿ ಟೆಂಟ್ ಹಾಕಿಕೊಂಡವರಿಗೆ ಸರ್ಕಾರಿ ಹಣದಲ್ಲಿ ಮನೆ ಕಟ್ಟಿಕೊಡುವುದು ಎಷ್ಟು ಸರಿ? ಹಿಂದೆ ಹೈಕಮಾಂಡ್ ದೆಹಲಿಯಿಂದ ನಡೆಯುತ್ತಿತ್ತು, ಈಗ ಕೇರಳದಿಂದ (ವೇಣುಗೋಪಾಲ್ ಮೂಲಕ) ನಡೆಯುತ್ತಿದೆ. ಇದು ತುಷ್ಟೀಕರಣದ ಪರಾಕಾಷ್ಠೆ. ಬಾಂಗ್ಲಾದೇಶದಿಂದ ಬಂದ ನುಸುಳುಕೋರರ ಪತ್ತೆ ಹಚ್ಚುವ ಬದಲು ಅವರಿಗೆ ಮನೆ ನೀಡಲು ಹೊರಟಿರುವುದು ದೇಶದ್ರೋಹಿ ಚಟುವಟಿಕೆಗಳಿಗೆ ಪ್ರಚೋದನೆ ನೀಡಿದಂತೆ ಎಂದು ಎಚ್ಚರಿಸಿದರು.

ವಿಬಿಜಿ ರಾಮ್ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ

ಕೇಂದ್ರದ ಉದ್ಯೋಗ ಖಾತ್ರಿ ಮಾದರಿಯ 'ವಿಬಿಜಿ ರಾಮ್ ಜಿ' (VB-G RAM JI) ಯೋಜನೆ ಬಗ್ಗೆ ಕಾಂಗ್ರೆಸ್ ಸುಳ್ಳು ಹರಡುತ್ತಿದೆ ಎಂದು ಕಿಡಿಕಾರಿದ ಜೋಶಿ ಅವರು, ಯಾರು ಹೇಳಿದ್ದು ಜಾಬ್ ಕಾರ್ಡ್ ಸಿಗಲ್ಲ ಎಂದು? ಪಾರ್ಲಿಮೆಂಟ್‌ನಲ್ಲಿ ಪಾಸ್ ಆಗಿರುವ ಈ ಯೋಜನೆಯಡಿ ಎಲ್ಲರಿಗೂ 125 ದಿನಗಳ ಕಾಲ ಕೂಲಿ ಕೆಲಸ ಸಿಗಲಿದೆ. ಕಾಂಗ್ರೆಸ್ ಕಾಲದಲ್ಲಿ ಎರಡು ಲಕ್ಷ ಕೋಟಿ ಕೂಡ ಖರ್ಚು ಮಾಡುತ್ತಿರಲಿಲ್ಲ, ಮೋದಿ ಸರ್ಕಾರ ಬಂದ ಮೇಲೆ 8.60 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಸ್ಯಾಟಲೈಟ್ ಮೂಲಕ ಪಾರದರ್ಶಕವಾಗಿ ಅಕೌಂಟಬಿಲಿಟಿ ಇರಲಿದೆ. ಕಾಂಗ್ರೆಸ್ ಎಂದರೆ ಭರ್ರಷ್ಟಾಚಾರದ 'ರಕ್ತಬೀಜಾಸುರ' ಇದ್ದಂತೆ, ಎಂದು ಕುಟುಕಿದರು.

ಜಮೀರ್ ಅಹ್ಮದ್ ಕೇವಲ ಒಂದು ಸಮುದಾಯದ ಉಸ್ತುವಾರಿ

ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಘಟನಾ ಸ್ಥಳಕ್ಕೆ ಭೇಟಿ ನೀಡದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಮೀರ್ ಅಹ್ಮದ್ ಅವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಉಸ್ತುವಾರಿ ಸಚಿವರಂತೆ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ರಾಹುಲ್ ಗಾಂಧಿಗೆ ಅಂತಹವರೇ ಸೂಟ್ ಆಗುತ್ತಾರೆ. ಬಳ್ಳಾರಿಯನ್ನು 'ರಿಪಬ್ಲಿಕ್ ಆಫ್ ಬಳ್ಳಾರಿ' ಎಂದಿದ್ದ ಕಾಂಗ್ರೆಸ್, ಈಗ ಅದನ್ನು 'ರಿಪಬ್ಲಿಕ್ ಆಫ್ ಪಾಕಿಸ್ತಾನ' ಮಾಡಲು ಹೊರಟಿದೆಯೇ? ರಾಜ್ಯ ಸರ್ಕಾರಕ್ಕೆ ಕಾನೂನು ಕಾಪಾಡಲು ಸಾಧ್ಯವಾಗದಿದ್ದರೆ, ಕೇಂದ್ರ ಸರ್ಕಾರ ಮತ್ತು ಜನಾರ್ದನ ರೆಡ್ಡಿ ಸೇರಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ, ಎಂದು ಎಚ್ಚರಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದರಾಮಯ್ಯಗೆ ‘ಬೆಸ್ಟ್‌ ಆಫ್‌ ಲಕ್‌’ : ಡಿಕೆಶಿ
ಇನ್ನು ಕರ್ನಾಟಕದ ಅತಿ ಸುದೀರ್ಘಾವಧಿ ಸಿಎಂ ಎಂದು.. ಪ್ರಸಿದ್ದರಾಮಯ್ಯ