
ಹುಬ್ಬಳ್ಳಿ (ಡಿ.23): ರಾಜ್ಯ ಕಾಂಗ್ರೆಸ್ ಸರ್ಕಾರ ಅಂಗೀಕರಿಸಿದ ದ್ವೇಷ ಭಾಷಣ ಮಸೂದೆ ಸಾರ್ವಜನಿಕರ ಬಾಯಿ ಮುಚ್ಚಿಸುವ ಆದೇಶವಾಗಿದೆ. ಇದೊಂದು ವಾಕ್ ಸ್ವಾತಂತ್ರ್ಯದ ಹರಣ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಮಸೂದೆ ಮೂಲಕ ಸಂವಿಧಾನದ 19ನೇ ವಿಧಿಯ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದೆ. ಹಿಂದೂಪರ ಸಂಘಟನೆ ಹಣಿಯುವುದಕ್ಕಾಗಿಯೇ ಈ ಕಾನೂನು ಜಾರಿಗೆ ತರುತ್ತಿದ್ದಾರೆ. ಇಂತಹ ನೀತಿಗಳಿಂದಾಗಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲದಂತಾಗಿದೆ.
ವ್ಯಾಪಕ ಅಧಿಕಾರದ ದಾಹ ಮತ್ತು ಕಠಿಣ ಕ್ರಿಮಿನಲ್ ಶಿಕ್ಷೆ ಮೂಲಕ ಜನಪರ ಹೋರಾಟ ಹತ್ತಿಕ್ಕಲು ಮುಂದಾಗಿದೆ. ಸರ್ಕಾರವು ಜನರ ಮೇಲೆ ದಬ್ಬಾಳಿಕೆ ಮಾಡಲು ಇಂತಹ ಕಾನೂನುಗಳನ್ನು ಬಳಸಿಕೊಳ್ಳಲು ನೋಡುತ್ತಿದೆ. ಸಂವಿಧಾನದ ನಿಬಂಧನೆಗಳನ್ನು ಕಿಂಚಿತ್ತೂ ಗೌರವಿಸದೆ ಆಡಳಿತ ನಡೆಸುತ್ತಿದೆ. ಈ ಕಾನೂನು ಜಾರಿಗೆ ನಮ್ಮ ವಿರೋಧವಿದ್ದು, ಮುಂದಿನ ದಿನಗಳಲ್ಲಿ ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದರು.
ಕಾಂಗ್ರೆಸ್ ನಾಯಕರು ಜಿ ರಾಮ್ ಜಿ ಯೋಜನೆಯ ಬಗ್ಗೆ ಜನರಲ್ಲಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಕಾನೂನು ಓದದೆ ಅವರ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ನರೇಗಾ ಕೆಲಸದ ಹೆಸರಿನಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಮೊದಲೆಲ್ಲ ಹಳೆಕಲ್ಲು ಹೊಸ ಬಿಲ್ ಮಾಡಿರುವುದು ಗಮನಕ್ಕೆ ಬಂದಿದೆ. ಇದೇ ಮಾದರಿಯಲ್ಲಿ ಸಾವಿರಾರು ಕೋಟಿ ರುಪಾಯಿ ಭ್ರಷ್ಟಾಚಾರ ನಡೆದಿದೆ. ಆದರೆ, ಇದೀಗ ಆ ರೀತಿ ಮಾಡಲು ಆಗುವುದಿಲ್ಲ. ಕೆಲಸದ ಹೆಸರಿನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ತಡೆಯಲು ಇದು ಸಹಕಾರಿಯಾಗಿದೆ ಎಂದು ಹೇಳಿದರು.
ಹಿಂದಿನ ನರೇಗಾದಲ್ಲಿ ಹಲವು ಮಾರ್ಪಾಡುಗಳನ್ನು ಮಾಡುವ ಮೂಲಕ ಜಿ ರಾಮ್ ಜಿ ಎಂದು ಹೆಸರು ಇಡಲಾಗಿದೆ. ಮಹಾತ್ಮ ಗಾಂಧೀಜಿ ಅವರಿಗೆ ಶ್ರೀರಾಮ ಅಚ್ಚುಮೆಚ್ಚು. ಅವರು ತಮ್ಮ ಕೊನೆಯ ಕಾಲದಲ್ಲಿ ಹೇ ರಾಮ್ ಎಂದು ಹೇಳಿದ್ದರು. ಹೆಸರು ಬದಲಿಸಿರುವುದನ್ನೇ ಹೇಳುತ್ತಿರುವ ಕಾಂಗ್ರೆಸ್ ನಾಯಕರು ಎಷ್ಟು ಯೋಜನೆಗಳಿಗೆ ಮಹಾತ್ಮ ಗಾಂಧೀಜಿ, ಇಂದಿರಾ ಗಾಂಧಿ ಹೆಸರಿಟ್ಟಿದೆ ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದರು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಹಲವು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಹಾಗಾಗಿಯೇ ದೇಶದ ಜನತೆ ಅವರನ್ನು ಬೆಂಬಲಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ಸಿನವರಿಗೆ ಎಷ್ಟು ಬಾರಿ ಸೋಲಿಸಿದ್ದಾರೆ ಎಂಬುದನ್ನು ತಿಳಿಯಲಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.