‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿರುವ ತಿಮಿಂಗಿಲ ಯಾರು ಎಂದು ಗೊತ್ತಿದ್ದರೆ ಹೇಳಲಿ ಪ್ರಕರಣವೇ ಮುಗಿದು ಹೋಗುತ್ತದೆ. ಒಂದೊಮ್ಮೆ ಅವರ ಬಳಿ ಮಾಹಿತಿ ಇದ್ದರೂ ಹೇಳದಿರುವುದು ಸಹ ದೊಡ್ಡ ತಪ್ಪು’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಮೇ.16): ‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿರುವ ತಿಮಿಂಗಿಲ ಯಾರು ಎಂದು ಗೊತ್ತಿದ್ದರೆ ಹೇಳಲಿ ಪ್ರಕರಣವೇ ಮುಗಿದು ಹೋಗುತ್ತದೆ. ಒಂದೊಮ್ಮೆ ಅವರ ಬಳಿ ಮಾಹಿತಿ ಇದ್ದರೂ ಹೇಳದಿರುವುದು ಸಹ ದೊಡ್ಡ ತಪ್ಪು’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣ ರಾಜಕೀಯ ಪ್ರೇರಿತ. ಇದರ ಹಿಂದೆ ದೊಡ್ಡ ತಿಮಿಂಗಿಲವೇ ಇದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಲೈಂಗಿಕ ದೌರ್ಜನ್ಯ ಆರೋಪ: ಭಾರತಕ್ಕೆ ಬರದೆ ಕೈಕೊಟ್ಟ ಪ್ರಜ್ವಲ್..!
ಕುಮಾರಸ್ವಾಮಿ ಅವರು ದಿನಕ್ಕೊಂದು ಹೇಳಿಕೆ ಕೊಡುತ್ತಿರುತ್ತಾರೆ. ಇದೀಗ ಇದರ ಹಿಂದೆ ದೊಡ್ಡ ತಿಮಿಂಗಲ ಇದೆ ಎಂದು ಹೇಳಿದ್ದಾರೆ. ಅದು ಯಾರು ಎಂದು ಕುಮಾರಸ್ವಾಮಿಯವರೇ ಹೇಳಿದರೆ ಒಳ್ಳೆಯದು. ಅವರು ಮಾಹಿತಿ ನೀಡಿದರೆ ಪ್ರಕರಣವೇ ಮುಗಿಯುತ್ತದೆ. ಅವರು ದಾಖಲೆ ಕೊಟ್ಟ ನಂತರವೂ ತನಿಖೆ ಮಾಡಲಿಲ್ಲ ಎಂದರೆ ಆಗ ಕೇಳಲಿ ಎಂದು ಸವಾಲು ಹಾಕಿದರು.
ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾರೆ ಎಂಬ ಮಾಹಿತಿ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಕೇಂದ್ರದ ತನಿಖಾ ಸಂಸ್ಥೆಗಳಿಂದ ನಮಗೆ ಮಾಹಿತಿ ಬರಬೇಕು. ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದರು.
5 ಬಾರಿ ಟೆಕೆಟ್ ಬುಕ್ ಮಾಡಿ ಕ್ಯಾನ್ಸಲ್, 7.5 ಲಕ್ಷ ರೂ ಖರ್ಚು ಮಾಡಿದರೂ ಭಾರತಕ್ಕೆ ಬರ್ಲಿಲ್ಲ ಪ್ರಜ್ವಲ್!
ಸಮುದಾಯವಾರು ಡಿಸಿಎಂ ಚರ್ಚೆಯಾಗಿಲ್ಲ: ಪರಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗಿನ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ಮುಖ್ಯಮಂತ್ರಿಗಳ ಜತೆಗಿನ ಚರ್ಚೆಯನ್ನು ಮಾಧ್ಯಮಗಳ ಮುಂದೆ ಹೇಳಲಾಗುವುದಿಲ್ಲ. ಮುಖ್ಯಮಂತ್ರಿಗಳು ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ. ಸಮುದಾಯವಾರು ಉಪ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.