
ಬೆಳಗಾವಿ (ಮೇ.2): ದೇವೇಗೌಡರ ಕುಟುಂಬ ಸದಸ್ಯರು ಹಾಸನದಲ್ಲಷ್ಟೇ ಅಲ್ಲ ಕರ್ನಾಟಕದ ಹೆಸರು ಕೆಡಿಸಿದ್ದಾರೆ. ರಾಜಕೀಯ ಕೆಡಿಸಿದ್ದಾರೆ, ದೇಶದ ಎದುರು ಕರ್ನಾಟಕ ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರ ಮಗ, ಮೊಮ್ಮಗನಿಂದ ಒಂದಲ್ಲ, ಎರಡು ಸಾವಿರ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಒಂದು ಕಡೆ ಪ್ರಧಾನಿ ಮೋದಿ ನಾರಿಶಕ್ತಿ, ಬೇಟಿ ಪಡಾವೋ ಭೇಟಿ ಬಚಾವೋ ಅಂತಾರೆ, ಇನ್ನೊಂದು ಇವರು ಈ ರೀತಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂಗೆ ಗಂಡಸ್ತನ ಅನ್ನೋದು ಇದ್ರೆ ರಾಮನಗರ ಎಂಎಲ್ಎ ವಿರುದ್ಧ ಕ್ರಮ ಕೈಗೊಳ್ಳಲಿ: ಅರವಿಂದ ಬೆಲ್ಲದ್ ಕಿಡಿ
ಭಾರತ ಸರ್ಕಾರದ ಬಳಿಯೇ ನ್ಯಾಷನಲ್ ಕ್ರೈಂ ರೆಕಾರ್ಡ್ ಮಾಹಿತಿ ಇದೆ. ಯುಪಿಎ ಸಮಯದಲ್ಲಿ ಮೂರು ಲಕ್ಷ ಮಹಿಳೆಯರ ಮೇಲೆ ದೌರ್ಜನ್ಯ ಆಗ್ತಿತ್ತು. ಈಗ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರಮಾಣ 22 ಲಕ್ಷ ದಾಟಿದೆ. ಬಿಜೆಪಿ ಆಡಳಿತ ನಡೆಸುತ್ತಿರುವ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಅಧಿಕವಾಗಿವೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಎಲ್ಲ ಸೂತ್ರದಾರರು ಪ್ರಧಾನಿ ಮೋದಿ ಜೊತೆಗೆ ವೇದಿಕೆ ಹಂಚಿಕೊಳ್ತಿದ್ದಾರೆ. ಇಷ್ಟೆಲ್ಲ ಆದರೂ ಗೃಹ ಸಚಿವ ಅಮಿತ್ ಶಾ ಮಲಗಿದ್ದಾರೆಯೇ? ಇಂಥ ಕೃತ್ಯ ಎಸಗಿ, ಹಣದೋಚಿಕೊಂಡು ದೇಶದಿಂದ ಪರಾರಿ ಆಗ್ತಿದ್ದಾರೆ. ಕೇಂದ್ರದಲ್ಲಿ ಇಂಥ ಸರ್ಕಾರ ಇದ್ದರೇನು ಪ್ರಯೋಜನ ಎಂದು ಆಕ್ರೋಶ ಆಕ್ರೋಶಗೊಂಡರು.
ಬೆಳಗಾವಿ-ಹುಬ್ಬಳ್ಳಿ ಮಧ್ಯೆ ನೇರ ರೈಲು ಮಾರ್ಗ ಆಗಬೇಕಿತ್ತು, ಆಗಲಿಲ್ಲ. ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗವೂ ಆಗಲಿಲ್ಲ. ಮಹಾದಾಯಿ ಯೋಜನೆಯನ್ನು ಜಾರಿಗೆ ತರಲಿಲ್ಲ. ಕರ್ನಾಟಕದಲ್ಲಿ ನರೇಂದ್ರ ಮೋದಿಗೆ ಮತ ಕೇಳಲು ನೈತಿಕ ಹಕ್ಕೂ ಇಲ್ಲ, ಭೌತಿಕ ಹಕ್ಕೂ ಇಲ್ಲ. ಹೊಸ ಮುಖಗಳಿಗೆ ಈ ಸಲ ಕಾಂಗ್ರೆಸ್ ಅವಕಾಶ ಕೊಟ್ಟಿದೆ, ಅವರ ಗೆಲುವು ಆಗಬೇಕು. ಬೆಳಗಾವಿ ಬಿಜೆಪಿ ಟಿಕೆಟ್ ಆ ಪುಣ್ಯಾತ್ಮ ಜಗದೀಶ್ ಶೆಟ್ಟರ್‌ಗೆ ಸಿಕ್ಕಿದೆ. ಕಾಂಗ್ರೆಸ್ ಪಕ್ಷಕ್ಕೆ ಜಗದೀಶ್ ಶೆಟ್ಟರ್ ವಿಶ್ವಾಸ ದ್ರೋಹ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೆಟ್ಟರ್ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಅನಾರೋಗ್ಯದ ಮಧ್ಯೆಯೂ ಸೋನಿಯಾ ಗಾಂಧಿ ಹುಬ್ಬಳ್ಳಿಗೆ ಬಂದು ಪ್ರಚಾರ ಮಾಡಿದ್ರು. ನಮ್ಮ ಜೊತೆಗೆ ಬಂದವರಿಗೆ ಗೌರವ ಕೊಡಬೇಕೆಂದು ಅಂದು ಸೋನಿಯಾ ಬಂದಿದ್ರು. ಹೀಗಿದ್ದರೂ ಈ ಪುಣ್ಯಾತ್ಮನಿಗೆ ಕೃತಜ್ಞತೆ ಭಾವ ಇಲ್ಲ ಎಂದು ಶೆಟ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದು ಯಾರಿಗೂ ನೆನಪಿಲ್ಲ. ಏಕೆಂದರೆ ಅವರ ಕೊಡುಗೆ ಶೂನ್ಯ ಇದೆ. ಹುಬ್ಬಳ್ಳಿಯಿಂದ ಕಣಕ್ಕಿಳಿದಿದ್ರೆ ಇನ್ನೂ ಹಲವು ಸಲ ಸೋಲಿಸುತ್ತಿದ್ದರು. ಅಲ್ಲಿ ಸಲ್ಲದವರು ಇಲ್ಲಿ ಸಲ್ಲುವುದು ಸಾಧ್ಯವೇ? ಪಾಪ ಮಹಿಳೆ, ಗಂಡನ ಕಳೆದುಕೊಂಡ ವಿಧವೆಯ ಟಿಕೆಟ್‌ನ್ನು ಶೆಟ್ಟರ್ ತಪ್ಪಿಸಿದರು. ವಿಧವೆ ಟಿಕೆಟ್ ತಪ್ಪಿಸಿ ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧಿಸುತ್ತಿದ್ದಾರೆ. ಮೋದಿ ಬಲಗಡೆ ಬಿಎಸ್ವೈ, ಎಡಗಡೆ ದೇವೇಗೌಡ ಈ ಇಬ್ಬರಿಂದ ಬಿಜೆಪಿಗೆ ಮೈನಸ್. ಮೈನಸ್ ಪ್ಲಸ್ ಮೈನಸ್ ಪ್ಲಸ್ ಆಗಲ್ಲ, ಬಿಜೆಪಿಗೆ ಮೈನಸ್ ಆಗಲಿದೆ ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಮಹಿಳೆಯರ ರಕ್ಷಣೆಗೆ ಏನು ಮಾಡಿದ್ದಾರೆ? ಪ್ರಿಯಾಂಕಾ ಗಾಂಧಿ
ಇನ್ನು ರಮೇಶ್ ಜಾರಕಿಹೊಳಿ, ಪ್ರಜ್ವಲ್ ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಡಿಕೆಶಿ ಪಾತ್ರ ಇದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಾತ್ರ ಮುಖ್ಯನಾ? ಪರ್ಫಾಮ್ ಮಾಡಿದವರು, ಅನ್ಯಾಯ ಮಾಡಿದವರು ಮುಖ್ಯನಾ? ನಾನು ಮೂರು ಕಾದಂಬರಿ ಬರೆದಿದ್ದೇನೆ, ಆ ಮೂರು ಕಥೆಗಳು ಸಿನೆಮಾಗಳಾಗಿವೆ. ನನಗೆ ಪಾತ್ರದಾರರು ತಪ್ಪು ಮಾಡಿ ಸಿನೆಮಾ ಪ್ಲಾಪ್ ಆದರೆ ಕಥೆ ಬರೆದವರು ತಪ್ಪಿತಸ್ಥರಾ ನಿಜವಾಗಿಯೂ ದೇವಗೌಡರ ಕುಟುಂಬ ತಲೆ ತಗ್ಗಿಸಿದೆ, ಇಡೀ ಕುಟುಂಬ ರಾಜೀನಾಮೆ ನೀಡಬೇಕು. ಪ್ರಜ್ವಲ್ ಕರ್ನಾಟಕದಲ್ಲಿ ಇದ್ದಿದ್ದು ನಾಚಿಕೆಗೇಡಿನ ಸಂಗತಿ. ದೇವಗೌಡರು ಈ ಪ್ರಕರಣದಲ್ಲಿ ಸುಮ್ಮನೆ ಇರಬೇಕು, ಅಂದಾಗ ಅವರೂ ಕೃತ್ಯ ಖಂಡಿಸಿದಂತೆ ಆಗ್ತದೆ. ರಮೇಶ್ ಜಾರಕಿಹೊಳಿ, ಪ್ರಜ್ವಲ್ ರೇವಣ್ಣ ಅನ್ಯಾಯ ಮಾಡಿದ್ದಾರೆ. ಈ ಇಬ್ಬರು ಯಾವ ಪುರುಷಾರ್ಥದ ಕೆಲಸ ಮಾಡಿದ್ದಾರಾ? ದೌರ್ಜನ್ಯ ಎಸಗಿದ್ದು ಸ್ಪಷ್ಟವಿದೆ, ದಾಖಲೆಗಳಿವೆ ನಾಚಿಕೆಗೇಡಿ ಕೆಲಸ ಮಾಡಿದ್ದಾರೆ. ಈಗ ಡಿಕೆ ಶಿವಕುಮಾರ್ ವಿರುದ್ಧ ಬೆರಳು ತೋರುವ ಕೆಲಸ ಮಾಡಬಾರದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.