
ನವದೆಹಲಿ (ಆ.22): ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಭ್ರಷ್ಟಾಚಾರದಲ್ಲಿ ದೇಶದಲ್ಲೇ ನಂಬರ್ ಒನ್ ಮಾಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
'ಕಾಂಗ್ರೆಸ್ ಆಡಳಿತದಲ್ಲಿ ಕಮಿಷನ್ ಹಾವಳಿ ಹೆಚ್ಚಿದೆ' ಎಂಬ ರಾಜ್ಯ ಗುತ್ತಿಗೆದಾರರ ಸಂಘದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವರು, ಗುತ್ತಿಗೆದಾರರ ಸಂಘ ಸರ್ಕಾರದಲ್ಲಿನ ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಹರಿ ಹಾಯ್ದಿದ್ದಾರೆ.
ಅಬಕಾರಿಯಲ್ಲಿ ಲಂಚದ ರೇಟ್: ಅಬಕಾರಿ ಇಲಾಖೆ ಕರ್ನಾಟಕದ ಆರ್ಥಿಕತೆಯ ಬೆನ್ನೆಲುಬು. ಆದರೆ, ಇದೇ ಇಲಾಖೆಯಲ್ಲೀಗ ಪ್ರತಿಯೊಂದುಕ್ಕೂ ಲಂಚದ ರೇಟ್ ಫಿಕ್ಸ್ ಮಾಡಿದಂತಿದೆ. ಅಧಿಕಾರಿಗಳು ಪ್ರತಿ ತಿಂಗಳು ಹಫ್ತಾ ವಸೂಲಿಗೆ ಇಳಿದಿರುವುದು ರಾಜ್ಯದ ದುರಂತ ಎಂದು ಜೋಶಿ ಖಂಡಿಸಿದ್ದಾರೆ.
ಆರ್ಥಿಕತೆ ಮುಳುಗಿಸುವುದೇ ಕಾಂಗ್ರೆಸ್ ಧ್ಯೇಯ: ಸುಭಿಕ್ಷವಾಗಿದ್ದ ರಾಜ್ಯದ ಆರ್ಥಿಕತೆಯನ್ನು ಮುಳುಗಿಸುವುದೇ ಈ ಕಾಂಗ್ರೆಸ್ ಸರ್ಕಾರದ ಧ್ಯೇಯವಾಗಿದೆ. ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯದ ಆರ್ಥಿಕತೆಯನ್ನು ಮಣ್ಣುಪಾಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ: ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಹಾಗೂ ಭ್ರಷ್ಟಾಚಾರ ವಿರೋಧಿ ಎಂದು ಬುರುಡೆ ಬಿಟ್ಟು ಅಧಿಕಾರದ ಚುಕ್ಕಾಣಿ ಹಿಡಿದ ಈ ಕಾಂಗ್ರೆಸ್ ಸರ್ಕಾರ ಈಗ ಅದಕ್ಕೆ ತದ್ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ರಾಜ್ಯದ ಬೊಕ್ಕಸ ಬರಿದು ಮಾಡಿ ಅಭಿವೃದ್ಧಿ ಶೂನ್ಯವಾಗಿಸಿದೆ ಎಂದು ಸಚಿವರು ವಾಗ್ದಾಳಿ ನಡೆಸಿದ್ದಾರೆ.
ಬೆಲೆ ಏರಿಕೆಯಿಂದ ಜನಜೀವನ ದುಸ್ತರ: ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ದುಪ್ಪಟ್ಟು ಬೆಲೆ ಏರಿಕೆ ಮಾಡಿ ಜನರ ಜೀವನವನ್ನು ದುಸ್ತರಗೊಳಿಸಿದೆ. ವ್ಯಾಪಾರಿಗಳಿಗೆ ಅಧಿಕಾರಿಗಳಿಂದ ಲಂಚದ ಕಿರುಕುಳ, ಶೂನ್ಯ ಅಭಿವೃದ್ಧಿ, ಸುಳ್ಳು ಭರವಸೆ. ಇದೇ ಕಾಂಗ್ರೆಸ್ ಸರ್ಕಾರದ ನಿಜ ಆಡಳಿತ ಎಂದು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.