
ನವದೆಹಲಿ (ಸೆ.18): ʼವೋಟ್ ಚೋರಿʼ ಹೆಸರಿಟ್ಟು ಆರೋಪಿಸುವ ರಾಹುಲ್ ಗಾಂಧಿ ಕರ್ನಾಟಕದ ಮಾಲೂರು ವಿಧಾಸಭಾ ಕ್ಷೇತ್ರದ ಬಗ್ಗೆ ಏಕೆ ಉಸಿರೊಡೆಯುವುದಿಲ್ಲ? ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ʼವೋಟ್ ಚೋರಿʼ ಎಂಬುದು ರಾಹುಲ್ ಗಾಂಧಿ ಅವರ ಹೊಸ ಕಾಲ್ಪನಿಕ ಕಥೆಯೇ ಸರಿ ಎಂದಿರುವ ಜೋಶಿ, ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕತ್ವವನ್ನು ಹೈಕೋರ್ಟ್ ಅನರ್ಹಗೊಳಿಸಿದ್ದಲ್ಲದೆ ಮರು ಮತ ಎಣಿಕೆಗೆ ಆದೇಶಿಸಿದೆ. ವಾಸ್ತವ ಹೀಗಿರುವಾಗ ಈಗ್ಯಾರು ʼವೋಟ್ ಚೋರಿ? ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.
ಕರ್ನಾಟಕದ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅತ್ಯಂತ ಕನಿಷ್ಠ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇಲ್ಲಿಯ ಮತದಾನ, ಮತ ಎಣಿಕೆಯಲ್ಲಿ ಲೋಪದೋಷವಾಗಿದೆ. ಹೀಗಾಗಿ ಪರಾಜಿತ ಅಭ್ಯರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದು, ಪೂರಕ ದಾಖಲೆಗಳನ್ನು ಸಲ್ಲಿಸಿದ್ದರು. ಹೈಕೋರ್ಟ್ ಇದೀಗ ಕಾಂಗ್ರೆಸ್ ಅಭ್ಯರ್ಥಿಯ ಶಾಸಕತ್ವ ಅನರ್ಹಗೊಳಿಸಿ ಮರು ಮತ ಎಣಿಕೆಗೆ ಆದೇಶಿಸಿದೆ. ಈಗೇನು ಹೇಳುತ್ತಾರೆ ಈ ʼವೋಟ್ ಚೋರಿʼಯ ಕಥಾ ನಾಯಕರು? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಮಾಲೂರು ಬಗ್ಗೆ ಏಕೆ ಮಾತನಾಡಲ್ಲ?: ಮಾತೆತ್ತಿದರೆ ʼವೋಟ್ ಚೋರಿʼ ಆರೋಪ ಮಾಡುವ ರಾಹುಲ್ ಗಾಂಧಿ ಈಗ ಮಾಲೂರು ವಿಧಾನಸಭಾ ಕ್ಷೇತ್ರದ ಬಗ್ಗೆ ಏಕೆ ಮಾತನಾಡಲಿಲ್ಲ? ಅಲ್ಲಿ ಕಾಂಗ್ರೆಸ್ ಪಕ್ಷವೇ ಗೆದ್ದಿದೆ. ಇಲ್ಲಿ ನಡೆದ ಚುನಾವಣಾ ದುಷ್ಕೃತ್ಯದ ಕಾರಣ ಎರಡು ದಿನಗಳ ಹಿಂದಷ್ಟೇ ಹೈಕೋರ್ಟ್ ಶಾಸಕತ್ವ ಅನರ್ಹಗೊಳಿಸಿ, ಹೊಸ ಮತ ಎಣಿಕೆಗೆ ಆದೇಶಿಸಲಾಗಿದೆ. ಇನ್ನಾದರೂ ರಾಹುಲ್ ಗಾಂಧಿ ಬುದ್ಧಿ ಕಲಿಯಲಿ ಎಂದು ಜೋಶಿ ಚಾಟಿ ಬೀಸಿದ್ದಾರೆ.
ಇವಿಎಂ ಆಧಾರಿತ 20ಕ್ಕೂ ಹೆಚ್ಚು ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತ ನಂತರ ಕಾಂಗ್ರೆಸ್ ಮತಯಂತ್ರ ಮತ್ತು ಚುನಾವಣಾ ಆಯೋಗದ ಮೇಲೆ ದೋಷಾರೋಪ ಮಾಡುತ್ತಿದ್ದು, ದೋಷ ಇರುವುದು ಇವಿಎಂ ಅಥವಾ ಚುನಾವಣಾ ಆಯೋಗದಲ್ಲಲ್ಲ. ಕಾಂಗ್ರೆಸ್ ಪಕ್ಷವೇ ದೋಷಪೂರಿತವಾಗಿದೆ. ನಿಜವಾದ ʼವೋಟ್ ಚೋರಿʼ ಕಾಂಗ್ರೆಸ್ಸೇ ಆಗಿದೆ ಎಂದು ಪ್ರಲ್ಹಾದ ಜೋಶಿ ನೇರ ಆರೋಪ ಮಾಡಿದ್ದಾರೆ.
ಭಾರತೀಯ ಚುನಾವಣಾ ಆಯೋಗವು ರಾಹುಲ್ ಗಾಂಧಿಯವರ ಆಧಾರರಹಿತ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಅಲ್ಲದೇ, ʼಯಾವುದೇ ಮತಗಳನ್ನು ಆನ್‌ಲೈನ್‌ನಲ್ಲಿ ಅಳಿಸಲಾಗುವುದಿಲ್ಲʼ ಎಂದು ಪುನರುಚ್ಛರಿಸಿದೆ. ರಾಹುಲ್‌ಗೆ ಚುನಾವಣಾ ಪ್ರಕ್ರಿಯೆ ಬಗ್ಗೆ ತಿಳಿದಿಲ್ಲವೇ? ಮತದಾರರನ್ನು ಆನ್‌ಲೈನ್‌ನಲ್ಲಿ ಅಳಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿಲ್ಲವೇ? ಎಂದು ಸಚಿವರು ಟೀಕಿಸಿದ್ದಾರೆ.
ʼವೋಟ್ ಚೋರಿʼ ಆರೋಪದಲ್ಲಿ ರಾಹುಲ್ ಗಾಂಧಿ ಅವರು ಉಲ್ಲೇಖಿಸಿದ ಆಳಂದ ವಿಧಾನಸಭೆ ಕ್ಷೇತ್ರವೂ ಕಾಂಗ್ರೆಸ್ ಆಡಳಿತದ ಕರ್ನಾಟಕ ವ್ಯಾಪ್ತಿಯಲ್ಲಿದೆ. ಈ ಕ್ಷೇತ್ರದಲ್ಲಿ ಗೆದ್ದಿರುವುದು ಸಹ ಕಾಂಗ್ರೆಸ್ ಅಭ್ಯರ್ಥಿಯೇ. ಇಲ್ಲಿ ʼಮತದಾರರನ್ನು ಆನ್‌ಲೈನ್‌ನಲ್ಲಿ ಅಳಿಸಲಾಗಿದೆʼ ಎಂಬ ರಾಹುಲ್ ಹೇಳಿಕೆ ನಿಜಕ್ಕೂ ನಗೆಪಾಟಿಲು ಎಂದು ಸಚಿವ ಜೋಶಿ ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ʼವೋಟ್ ಚೋರಿʼ ಆರೋಪಗಳ ವಿಫಲ ಪ್ರಯತ್ನದ ನಂತರ ಅದು ಸುಳ್ಳೆಂಬುದು ಸಾಬೀತಾಗಿದೆ. ಕಾಂಗ್ರೆಸ್ ನಕಲಿ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದೆ ಎಂಬುದು ಇದೀಗ ಸ್ಪಷ್ಟವಾಗಿದೆ. ರಾಹುಲ್ ಗಾಂಧಿ ಇನ್ನಾದರೂ ಹಿಂದಿನ ತಪ್ಪುಗಳಿಂದ ಬುದ್ಧಿ ಕಲಿಯಲಿ ಎಂದು ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.