
ಹುಬ್ಬಳ್ಳಿ (ಮೇ.24): ರಾಜ್ಯ ಸರ್ಕಾರ ವಿವಿಧ 52 ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂಬುದು ಸಾಬೀತಾಗಿದೆ. ಇದು ಕಾಂಗ್ರೆಸ್‌ನ ತುಷ್ಟೀಕರಣದ ಪರಾಕಾಷ್ಟೆಯಾಗಿದೆ ಎಂದು ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಾಂಗ್ರೆಸ್ ಆಧುನಿಕ ಮುಸ್ಲಿಂ ಲೀಗ್ ಪಕ್ಷವಾಗಿ ಮಾರ್ಪಡುತ್ತಿದೆ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋರಿಕೆಗೆ ಕನ್ನಡ, ರೈತ ಹಾಗೂ ಹಿಂದೂ ಹೋರಾಟಗಾರರ ಕೆಲವು ಪ್ರಕರಣಗಳನ್ನು ಸೇರಿಸಲಾಗಿದೆ. ಆದರೆ ದೇವಸ್ಥಾನ ಅಪವಿತ್ರಗೊಳಿಸಿದವರು, ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದವರು, ಗಲಭೆ ಸೃಷ್ಟಿಸಿದವರ ವಿರುದ್ಧದ ಗಂಭೀರ ಪ್ರಕರಣಗಳನ್ನು ವಾಪಸ್ ಪಡೆದಿರುವುದು ಸರ್ಕಾರದ ದುರುದ್ದೇಶವನ್ನು ಬಯಲಿಗೆಳೆಯುತ್ತದೆ ಎಂದು ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ನಡೆದ ಗಲಭೆ, ಹಲ್ಲೆ, ಕಲ್ಲುತೂರಾಟ ಹಾಗೂ ಬೆಂಗಳೂರಿನ ಗಲಭೆ ಪ್ರಕರಣಗಳನ್ನು ಕೈಬಿಡಲು ಸರ್ಕಾರ ಪ್ರಯತ್ನಿಸಿದ್ದು, ಈ ಬಗ್ಗೆ ನ್ಯಾಯಾಲಯವೇ ಪ್ರಶ್ನಿಸಿರುವುದು ಸರ್ಕಾರದ ನಿಲುವಿಗೆ ತೀವ್ರ ಚಾಟಿ ಬೀಸಿದಂತಾಗಿದೆ ಎಂದು ಹೇಳಿದರು.
ರೈತರ, ಕನ್ನಡಪರ ಹೋರಾಟಗಳ ಮೇಲೆ ಹಾಕಿರುವ ಕೇಸ್‌ಗಳನ್ನು ಹಿಂಪಡೆಯುವುದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ. ಆದರೆ ಗಲಭೆ ಸೃಷ್ಟಿಸಿ ಶಾಂತಿ ಕದಡಿದವರ ಮೇಲಿರುವ ಕೇಸ್‌ಗಳನ್ನು ಹಿಂಪಡೆಯುವುದು ಸರಿಯಲ್ಲ ಎಂದರು.
ರಾಜ್ಯ ಸರ್ಕಾರ ಕೇವಲ ಮುಸ್ಲಿಂ ಕಾಲನಿಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿದ್ದು, ಅಲ್ಪಸಂಖ್ಯಾತರ ಕಾಲೇಜು, ಶಾಲೆ ಹಾಗೂ ವಸತಿ ನಿಲಯಗಳ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡುತ್ತಿದೆ. ಇದು ಕಾಂಗ್ರೆಸ್‌ನ ಸ್ಪಷ್ಟ ತುಷ್ಟೀಕರಣ ನೀತಿಯ ಸಾಕ್ಷಿ ಎಂದು ಜೋಶಿ ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಇಂದು ಆಧುನಿಕ ಮುಸ್ಲಿಂ ಲೀಗ್ ಆಗಲು ಹೊರಟಿದೆ. ಅದರ ಚಿಂತನೆಗಳಲ್ಲಿ ಜಿನ್ನಾ ಮನೋಭಾವ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಟೀಕಿಸಿದರು.
ಎಸ್‌ಐಆರ್ ವಿಚಾರದಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಟೀಕಿಸಿದ ಅವರು, 'ರಾಹುಲ್ ಗಾಂಧಿ ಪ್ರತಿದಿನ ಒಂದೊಂದು ರೀತಿಯಲ್ಲಿ ಮಾತನಾಡುತ್ತಾರೆ. ಕೇರಳದಲ್ಲಿ ಸ್ವಾಗತಿಸುವ ನೀತಿ, ತಮಿಳುನಾಡಿನಲ್ಲಿ ಮೌನ, ಬೇರೆಡೆ ವಿರೋಧ – ಕಾಂಗ್ರೆಸ್ ದಿವಾಳಿ ರಾಜಕಾರಣದ ಉದಾಹರಣೆ. ರಾಹುಲ್ ಗಾಂಧಿ ನಿರಂತರ ಸೋಲಿನಿಂದ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದರೋಡೆಕೋರ ಕಾಂಗ್ರೆಸ್
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ₹10 ತೆರಿಗೆ ಇಳಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಏಕೆ ಇಳಿಸಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು. ಜನನ- ಮರಣ ಪ್ರಮಾಣ ಪತ್ರದ ಬೆಲೆಯನ್ನು 5ರಿಂದ 50ಕ್ಕೆ ರಾಜ್ಯ ಸರ್ಕಾರ ಏರಿಸಿದೆ. ಸತ್ತವರಿಂದಲೂ ಲೂಟಿ ಮಾಡುವ ದರೋಡೆಕೋರ ಸರ್ಕಾರವಿದು ಎಂದು ಕಿಡಿಕಾರಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತೈಲಬೆಲೆ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರು ಇಲ್ಲ-ಸಲ್ಲದ ಆರೋಪ ಮಾಡುತ್ತಾರೆ. ಪ್ರತಿಲೀಟರ್ ಪೆಟ್ರೋಲ್‌ಗೆ ಕೇಂದ್ರದ ತೆರಿಗೆ ₹3 ಇದ್ದರೆ, ರಾಜ್ಯ ಸರ್ಕಾರದ್ದು ₹27.8 ಆಗಿದೆ. ಡೀಸೆಲ್‌ಗೆ ಕೇಂದ್ರದ ತೆರಿಗೆ ಶೂನ್ಯ. ರಾಜ್ಯದ್ದು ₹14 ಇದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಪೆಟ್ರೋಲ್ ತೆರಿಗೆಯಲ್ಲಿ ₹10 ಇಳಿಸುವುದಾಗಿ ಭರವಸೆ ನೀಡಿದ್ದರು. ಅದನ್ನೇಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದಾಗಿ ಪ್ರತಿಯೊಂದು ವಸ್ತುವಿನ ಬೆಲೆಯನ್ನೂ ಏರಿಸಿದೆ. ಜನನಮರಣ ಪ್ರಮಾಣ ಪತ್ರದ ಮೇಲೂ ಏರಿಸಿಕೊಂಡಿದೆ ಎಂದು ಟೀಕಿಸಿದರು.
ಇಂಧನ ಸಮಸ್ಯೆ ಇಲ್ಲ
ಪೆಟ್ರೋಲ್- ಡೀಸೆಲ್ ಲಭ್ಯತೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಮಧ್ಯಪ್ರಾಚ್ಯದ ಅವಲಂಬನೆ ಕಡಿಮೆ ಮಾಡಿ ಈಗ 42 ಮೂಲಗಳಿಂದ ಇಂಧನ ತರಿಸಲಾಗುತ್ತಿದೆ. ವೆಚ್ಚ ಹೆಚ್ಚಾದರೂ ದೇಶದ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.