
ಭದ್ರಾವತಿ (ಫೆ.15): ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಅವರು ನಗರದ ನ್ಯೂಟೌನ್ ತಾಲೂಕು ಗೊಲ್ಲ ಯಾದವ ಸಂಘದಿಂದ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ದೇವಸ್ಥಾನ ಲೋಕಾರ್ಪಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತ ಅಭಿವೃದ್ಧಿ ರಾಷ್ಟ್ರವಾಗಲು ಪ್ರತಿಯೊಬ್ಬರ ಪ್ರಯತ್ನ ಮುಖ್ಯ. ದೇಶದ ಅಭಿವೃದ್ಧಿ ಪ್ರತಿಯೊಬ್ಬರ ಜವಾಬ್ದಾರಿ. ಇಂದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ.100ನೇ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗಬೇಕು ಎಂದರು.
ದೇವಾಲಯದ ಜಾಗದ ವಿಚಾರದಲ್ಲಿ ವಿಐಎಸ್ಎಲ್ ಕಾರ್ಖಾನೆ ಆಡಳಿತದಿಂದ ತೊಂದರೆ ಉಂಟಾದರೆ ಸಮಸ್ಯೆ ನಿವಾರಣೆಗಾಗಿ ಪ್ರಯತ್ನಸುವೆ ಎಂದು ಭರವಸೆ ನೀಡಿದರು. ಮಹಿಳೆಯರ ಕುರಿತು ಕುವೆಂಪು ರಚಿಸಿರುವ ಮನೆಮನೆಗೆ ದೀಪ ನೀನು ಎಂಬ ಕವನದ ಸಾಲುಗಳು ಮಹಿಳೆಯರ ಮಹತ್ವ ತಿಳಿಸುತ್ತದೆ. ಕಾಲ ಬದಲಾದಂತೆ ಇಂದು ಮಹಿಳೆ ಯರು ಎಲ್ಲಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ಮಹಿಳೆಯರಿಗೆ ಶಿಕ್ಷಣ ನೀಡಿದರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಾಧಕರಾಗಿ ರಾರಾಜಿಸಲಿದ್ದಾರೆ. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂಬ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಶೇ.34ರಷ್ಟು ಮೀಸಲಾತಿ ನೀಡಿದ್ದಾರೆ ಎಂದರು.
ನಗರಸಭೆ ಹಿರಿಯ ಸದಸ್ಯ ಬಿ.ಕೆ. ಮೋಹನ್ ಮಾತನಾಡಿ, ದೇಶದಲ್ಲಿ ಹೆಚ್ಚು ಆಡಳಿತ ನಡೆಸಿರುವ ಸಮಾಜವೆಂದರೆ ಯಾದವ ಸಮಾಜ. ತಾಲೂಕಿನಲ್ಲಿ ಯಾದವ ಸಮಾಜ ದವರು ಒಗ್ಗೂಡಬೇಕು. ಯಾದವ ಸಮಾಜ ಶ್ರೀಮಂತರ ಸಮಾಜವಲ್ಲ, ಬದಲಾಗಿ ನಂಬಿಕಸ್ಥರ ಸಮಾಜ. ರಾಜಕಾರಣ ಬೇರೆ ಸಮಾಜದ ಕೆಲಸಗಳು ಬೇರೆ. ಆದ್ದರಿಂದ ಸಮಾಜದ ಬೆಳವಣಿಗೆಗಾಗಿ ಯಾದವರು ಒಗ್ಗೂಡುವುದು ಮುಖ್ಯ ಎಂದರು. ಇತರ ಸಮಾಜಗಳಿಗೆ ಹೋಲಿಕೆ ಮಾಡಿದಾಗ ಯಾದವ ಸಮಾಜದಲ್ಲಿ ಸಂಘಟನೆಯ ಕೊರತೆ ಕಾಣುತ್ತದೆ. ಇದು ದುರಂತ ಸಂಗತಿ. ಮೊದಲು ಸಮಾಜ, ನಂತರ ಕುಟುಂಬ ಮತ್ತು ವ್ಯಕ್ತಿಗಳು ಎಂಬುದನ್ನು ಎಲ್ಲರು ಅರಿತುಕೊಳ್ಳಬೇಕು.
ಬಂಜಾರ ಸಮಾಜದ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಮಧು ಬಂಗಾರಪ್ಪ
ನೀವು ಒಗ್ಗಟ್ಟು ಪ್ರದರ್ಶಿಸಿದರೆ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಯಾದವ ಮಹಾಸಂಸ್ಥಾನದ ಯಾದವಾನಂದ ಸ್ಮಾಮೀಜಿ, ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಉಪಾಧ್ಯಕ್ಷೆ ಬಿ.ಪಿ.ಸರ್ವಮಂಗಳ ಭೈರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಮುಖಂಡರಾದ ಎಸ್.ಎಸ್ ಜ್ಯೋತಿ ಪ್ರಕಾಶ್, ಮಂಗೋಟೆ ರುದ್ರೇಶ್, ಗೊಲ್ಲ-ಯಾದವ ಸಂಘದ ಜಿಲ್ಲಾಧ್ಯಕ್ಷ ಆಂಜನಪ್ಪ, ತಾಲೂಕು ಗೊಲ್ಲ-ಯಾದವ ಸಂಘದ ಅಧ್ಯಕ್ಷ ವೆಂಕಟೇಶಪ್ಪ ಮೊಳಕಾಲ್ಮೂರು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.