
ತುಮಕೂರು (ಫೆ.15): ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಹಾಲಿ ಸಂಸದ ಜಿ.ಎಸ್.ಬಸವರಾಜು ಅವರು ಮಾಜಿ ಸಚಿವ ಮಾಧುಸ್ವಾಮಿ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ಯಾವುದೇ ಕಾರಣಕ್ಕೂ ಬೆಂಬಲ ನೀಡಲ್ಲ ಎಂದಿರುವ ಬಸವರಾಜು, ಮಾಜಿ ಸಚಿವ ಸೋಮಣ್ಣ ಅವರ ಹೆಸರನ್ನು ನಾನು ಪ್ರಸ್ತಾಪಿಸಿದ್ದೇನೆ. ಸೋಮಣ್ಣ ತುಮಕೂರಿಗೆ ಹೊರಗಿನವರಲ್ಲ, ಅವರು ಒಳ್ಳೆಯ ಕೆಲಸಗಾರ ಎಂದು ಹೊಗಳಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿ, ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮೂರ್ನಾಲ್ಕು ಮಂದಿ ಆಕಾಂಕ್ಷಿಗಳಿದ್ದಾರೆ.
ಅವರಲ್ಲಿ ಹೆಚ್ಚಿನ ಅನುಭವ ಇರುವವರು ಸೋಮಣ್ಣ. ಹಾಗಾಗಿ ನಾನು ಅವರ ಹೆಸರು ಪ್ರಸ್ತಾಪಿಸಿದ್ದೇನೆ. ಸೋಮಣ್ಣ ಹೊರಗಿನವರಲ್ಲ, ತುಮಕೂರಿಗೆ ಸೇರಿದವರೇ ಆಗಿದ್ದಾರೆ. ಮೂರು ಬಾರಿ ತುಮಕೂರು ಜಿಲ್ಲಾ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. 2019ರ ಚುನಾವಣೆಯಲ್ಲಿ ನನ್ನ ಗೆಲುವಿಗೆ ಅವರು ಶ್ರಮಿಸಿದ್ದಾರೆ. ಅವರು ಈ ಕ್ಷೇತ್ರಕ್ಕೆ ಬಂದರೆ ಒಳ್ಳೆಯದು. ಸೋಮಣ್ಣ ಕೆಲಸಗಾರ, ಕೆಲಸಗಾರನಿಗೆ ಅವಕಾಶ ಕೊಡಬೇಕು. ಅವರು ಹೇಗೆ ಕೆಲಸ ಮಾಡಿದ್ದಾರೆಂದು ಬೆಂಗಳೂರಿನ ಗೋವಿಂದರಾಜು ನಗರವನ್ನು ಹೋಗಿ ಒಂದು ಸಲ ನೋಡಿ ಬನ್ನಿ ಎಂದರು.
ವೈಯಕ್ತಿಕವಾಗಿ ಅವರು ನನಗೆ ಹಿಡಿಸಲಿಲ್ಲ. ನಾನು ಆ ರೀತಿ ಮಾಡಿಲ್ಲ ಅಂತ ಮಾಧುಸ್ವಾಮಿ ಬಂದು ಸಾಯಿಬಾಬನ ಮುಂದೆ ಹೇಳಲಿ. ದೇವರ ಮುಂದೆ ನಾನು ಹೇಳುತ್ತೇನೆ. ಮಾಧುಸ್ವಾಮಿ ಉದ್ಧಟತನದ ವ್ಯಕ್ತಿ ಎಂದರು. ಮಾಧುಸ್ವಾಮಿ ಮಂತ್ರಿಯಾಗಿ ಎರಡು ದಿನ ಆಗಿತ್ತು. ಮೂರನೇ ದಿನಕ್ಕೆ ನಾನು ಅವರ ಆಫೀಸ್ ಗೆ ಹೋಗಿದ್ದೆ. 15, 20 ನಿಮಿಷ ಅವರ ಆಫೀಸ್ ನಲ್ಲಿ ಕಾದು ಕುಳಿತೆ. ನನ್ನ ಕಂಡರೂ ಮಾತನಾಡಿಸಲಿಲ್ಲ. ಆವತ್ತೇ ಕೊನೆ, ನಾನೆಂದೂ ಅವರ ಆಫೀಸ್ ಗೆ ಮತ್ತೆ ಹೋಗಲಿಲ್ಲ. ಒಬ್ಬ ಸೀನಿಯರ್ ಎಂ.ಪಿ ಅವರ ಕಚೇರಿಗೆ ಹೋದರೆ ಮಾತನಾಡಿಸಲಿಲ್ಲವೆಂದರೆ ಅವರು ಯಾವ ರೀತಿಯ ವ್ಯಕ್ತಿ ಎಂದು ನೀವೇ ತಿಳಿದುಕೊಳ್ಳಿ.
ಅರಣ್ಯ ವ್ಯಾಪ್ತಿಯಲ್ಲಿ ಇಲ್ಲದ ವಸತಿ ಪ್ರದೇಶ ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಕೃಷ್ಣ ಬೈರೇಗೌಡ
ನನ್ನ ಎಲ್ಲ ಸಮಸ್ಯೆ ಬಗೆಹರಿವ ವಿಶ್ವಾಸ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಈ ತಿಂಗಳ ಅಂತ್ಯದಲ್ಲಿ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಎಲ್ಲವನ್ನೂ ಬಗೆಹರಿಸುವ ವಿಶ್ವಾಸವಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರ ಭೇಟಿಯಿಂದ ಸಂತೋಷವಾಗಿದೆ. ನಾನು ಎರಡು ಅಥವಾ ಮೂರು ನಿಮಿಷ ಮಾತ್ರ ಭೇಟಿಗೆ ಅವಕಾಶ ಸಿಗಬಹುದು ಎಂದುಕೊಂಡಿದ್ದೆ. ಆದರೆ, ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆಗೆ ಅವಕಾಶ ನೀಡಿದರು. ನಿಮಗೇನು ಆಗಬೇಕು ಎಂದು ಕೇಳಿದರು. ಪಕ್ಷದಲ್ಲಿ ಕೆಲಸ ಮಾಡಬೇಕು. ನಿಮ್ಮ ನಾಯಕತ್ವದಲ್ಲಿ ಇರಬೇಕು ಎಂದಿದ್ದೇನೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯಸಭೆಗೆ ಆಯ್ಕೆ ಮಾಡುವಂತೆ ಪಕ್ಷದ ವರಿಷ್ಠರ ಬಳಿ ಮನವಿ ಮಾಡಿದ್ದೇನೆ. ಪಕ್ಷವು ಸೂಕ್ತ ಸಮಯದಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳುವ ವಿಶ್ವಾಸ ಇದೆ. ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ರಾಜ್ಯ ರಾಜಕೀಯ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.