
ನವದೆಹಲಿ (ಮೇ.08) ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ಗೆ ಕೇರಳದ ಗೆಲುವು ಆಕ್ಸಿಜನ್ ನೀಡಿತ್ತು. ಆದರೆ ದಕ್ಷಿಣ ಭಾರತದಲ್ಲಿ ಪಾರುಪತ್ಯ ಸಾಧಿಸಲು ಕುತಂತ್ರ ಬುದ್ಧಿ ತೋರಿದ ಕಾಂಗ್ರೆಸ್‌ಗೆ ಸಂಕಷ್ಟಗಳು ಎದುರಾಗಿದೆ. ತಮಿಳುನಾಡು ರಾಜಕೀಯದಲ್ಲಿ ಕಡ್ಡಿ ಅಲ್ಲಾಡಿಸಿದ ಕಾಂಗ್ರೆಸ್‌ಗೆ ದೇಶದ ರಾಜಕಾರಣದಲ್ಲಿ ತೀವ್ರ ಪೆಟ್ಟು ಬಿದ್ದಿದೆ. ತಮಿಳುನಾಡಿನಲ್ಲಿ ವಿಜಯ್ ಜೊತೆ ಸೇರಿ ಸರ್ಕಾರದ ಭಾಗವಾಗಲು ಬಯಸಿದ ಕಾಂಗ್ರೆಸ್‌ಗೆ ಡಿಎಂಕೆ ಶಾಕ್ ಕೊಟ್ಟಿದೆ. ಕಾಂಗ್ರೆಸ್ ಜೊತೆಗಿನ ಮೈತ್ರಿ ಅಂತ್ಯಗೊಂಡಿದೆ ಎಂದು ಡಿಎಂಕೆ ಸಂಸದೆ ಕನ್ನಿಮೋಳಿ ಕರುಣಾನಿಧಿ ಹೇಳಿದ್ದಾರೆ. ಇಷ್ಟೇ ಅಲ್ಲ ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದರ ಜೊತೆಗೆ ನಮಗೆ ಆಸನ ಬೇಡ, ಪ್ರತ್ಯೇಕ ಆಸನ ನೀಡುವಂತೆ ಪತ್ರ ಬರೆದಿದ್ದಾರೆ.
ತಮಿಳುನಾಡಿನಲ್ಲಿ 4 ಸ್ಥಾನ ಗೆದ್ದ ಕಾಂಗ್ರೆಸ್ ಡಿಎಂಕೆ ಹಾಗೂ ಇಂಡಿಯಾ ಒಕ್ಕೂಟದ ಮೈತ್ರಿಯ ಆಶಯಗಳನ್ನು ಮುರಿದು ನೇರವಾಗಿ ಟಿವಿಕೆ ಪಕ್ಷಕ್ಕೆ ಬೆಂಬಲ ಸೂಚಿಸಿತ್ತು. ಇದು ಡಿಎಂಕೆ ಪಾರ್ಟಿಯನ್ನು ಕೆರಳಿಸಿದೆ. ಕಾಂಗ್ರೆಸ್ ಪಕ್ಷ ಡಿಎಂಕೆ ಜೊತೆ ನಿಶ್ಚಿತಾರ್ಥ ಮಾಡಿ ಟಿವಿಕೆ ಜೊತೆ ಮದುವೆಯಾಗಲು ಬಯಸುತ್ತಿದೆ ಎಂದು ನಾಯಕರು ತೀವ್ರವಾಗಿ ಟೀಕಿಸಿದ್ದರು. ಇದರ ಬೆನ್ನಲ್ಲೇ ಸಂಸದೆ ಕನ್ನಿಮೋಳಿ ಕರುಣಾನಿಧಿ ಲೋಕಸಭಾ ಸ್ವೀಕರ್ ಓಂ ಬಿರ್ಲಾಗೆ ಪತ್ರ ಬರೆದು ವಿಶೇಷ ಮನವಿ ಮಾಡಿದ್ದಾರೆ
ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಕನ್ನಿಮೋಳಿ ಪತ್ರ ಬರೆದಿದ್ದಾರೆ. ಈ ಪತ್ರದ ಆರಂಭದಲ್ಲೇ ಕನ್ನಿಮೋಳಿ ಆಸನ ವ್ಯವಸ್ಥೆ ಬದಲಾವಣೆಗೆ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣಗಳನ್ನು ತಿಳಿಸಿದ್ದಾರೆ. ಡಿಎಂಕೆ ಪಕ್ಷದ ಸಂಸತ್ ಸದಸ್ಯರ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಈ ಮೂಲಕ ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ. ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆಗಿನ ಮೈತ್ರಿ ಅಂತ್ಯಗೊಳಿಸಲಾಗಿದೆ. ಮೈತ್ರಿ ಅಂತ್ಯಗೊಂಡಿರುವ ಕಾರಣ ಡಿಎಂಕೆ ಸಂಸದರು ಕಾಂಗ್ರೆಸ್ ಸಂಸದರ ಜೊತೆಗೆ ಕುಳಿತುಕೊಳ್ಳುವುದು ಸೂಕ್ತವಲ್ಲ. ಹೀಗಾಗಿ ಡಿಎಂಕೆ ಸದಸ್ಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕೆಂದು ಕನ್ನಿಮೋಳಿ ಮನವಿ ಮಾಡಿದ್ದಾರೆ.
ಕೇರಳದಲ್ಲಿ ಅಧಿಕಾರ ಹಿಡಿಯುವ ಖುಷಿಯಲ್ಲಿರುವ ಕಾಂಗ್ರೆಸ್ ತಮಿಳುನಾಡಿನಲ್ಲಿ ಸರ್ಕಾರದ ಭಾಗವಾಗಲು ರಣತಂತ್ರ ಮಾಡಿತ್ತು. ಆದರೆ ಈ ರಣತಂತ್ರ ದೇಶದ ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಭಾರಿ ಹೊಡೆತ ನೀಡಿದಂತಿದೆ. ಕಾಂಗ್ರೆಸ್ ನಡೆಯಿಂದ ಇಂಡಿಯಾ ಮೈತ್ರಿಕೂಟಕ್ಕೆ ತೀವ್ರ ಹಿನ್ನಡೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.