
ಮುಂಬೈ(ಜೂ.28): ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಇದೀಗ ಪ್ರಮುಖ ಘಟ್ಟ ತಲುಪಿದೆ. ಗುರುವಾರ(ಜೂ.30)ಕ್ಕೆ ವಿಶ್ವಾಸ ಮತ ಯಾಚನೆಗೆ ಮಹಾರಾಷ್ಟ್ರ ರಾಜ್ಯಪಾಲರು ಆದೇಶಿಸಿದ್ದಾರೆ. ಹೀಗಾಗಿ ಸಿಎಂ ಉದ್ಧವ್ ಠಾಕ್ರೆ ನೇೃತ್ವತ್ವದ ಮೈತ್ರಿ ಸರ್ಕಾರದ ಭವಿಷ್ಯ ಗುರುವಾಗ 11ಗಂಟೆಗೆ ನಿರ್ಧಾರವಾಗುವ ಸಾಧ್ಯತೆಗಳಿದೆ.
ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚನೆ ಮಾಡುವಂತೆ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಸೂಚನೆ ನೀಡುವ ಸಾಧ್ಯತೆಗಳಿವೆ. ಇದರ ಬೆನ್ನಲ್ಲಿಯೇ ರೆಬಲ್ ಶಾಸಕರು ಗುರುವಾರ ಮುಂಬೈಗೆ ಆಗಮಿಸುವ ಮಾತುಗಳು ಕೇಳಿಬಂದಿದೆ.
ಮಹಾರಾಷ್ಟ್ರ ಬಿಕ್ಕಟ್ಟಿನಿಂದ ಹೊರಬರಲು ಹೊಸ ಅಸ್ತ್ರ, ಅಖಾಡಕ್ಕಿಳಿದ ಉದ್ದವ್ ಠಾಕ್ರೆ ಪತ್ನಿ!
ಈಗಾಗಲೇ ತನ್ನ ಬಹುತೇಕ ಶಾಸಕರನ್ನು ಬಂಡಾಯದ ಕಾರಣದಿಂದಾಗಿ ಶಿವಸೇನೆ ಕಳೆದುಕೊಂಡಿರುವ ಕಾರಣ, ಉದ್ದವ್ ಠಾಕ್ರೆ ಸರ್ಕಾರ ವಿಶ್ವಾಸಮತ ಯಾಚನೆಯ ವೇಳೆ ಉರುಳುವುದು ನಿಶ್ಚಿತವಾಗಿದೆ.
ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಿಜೆಪಿಯ ದೇವೇಂದ್ರ ಫಡ್ನವಿಸ್, ರಾಜ್ಯಪಾಲರನ್ನು ಭೇಟಿಯಾಗಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸುವಂತೆ ಹೇಳಿದ್ದರು. ಅದಲ್ಲದೆ, 8 ಮಂದಿ ಪಕ್ಷೇತರ ಶಾಸಕರು ರಾಜ್ಯಪಾಲರಿಗೆ ಪತ್ರ ಬರೆದು ತಕ್ಷಣವೇ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಿ ಎಂದು ಆಗ್ರಹಪಡಿಸಿದ್ದರು.
ಉದ್ಧವ್ ಠಾಕ್ರೆ ನೇೃತ್ವದ ಮೈತ್ರಿ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸು ಸದ್ಯದ ಪ್ರಕಾರ ಕಷ್ಟ. ಕಾರಣ ಶಿವಸೇನೆ ಹಾಗೂ ಪಕ್ಷೇತರರು ಸೇರಿ ಒಟ್ಟು 50 ಶಾಸಕರು ಶಿಂದೆ ಬಣದಲ್ಲಿದ್ದಾರೆ. ಇವರ ಮತಗಳು ಮೈತ್ರಿ ಸರ್ಕಾರದ ವಿರುದ್ಧವಾಗಿದೆ. ಹೀಗಾಗಿ ಇನ್ನುಳಿದ ಕಾಂಗ್ರೆಸ್ ಹಾಗೂ ಎನ್‌ಸಿಪಿ ಮತಗಳಿಂದ ಸರ್ಕಾರ ಉಳಿಸಿಕೊಳ್ಳುವುದು ಅಸಾಧ್ಯವಾಗಿದೆ. ಹೀಗಾಗಿ ಗುರವಾರ ಉದ್ಧವ್ ಠಾಕ್ರೆ ಸರ್ಕಾರ ಪತನ ಬಹುತೇಕ ಖಚಿತವಾಗಿದೆ. ಆದರೆ ಗುರುವಾರಕ್ಕೂ ಮೊದಲು ಇನ್ನೇನು ರಾಜಕೀಯ ಬೆಳವಣಿಗೆ ಆಗಲಿದೆ ಅನ್ನೋ ಕುತೂಹಲವು ಗರಿಗೆದರಿದೆ.
ಸಿಎಂ ಉದ್ಧವ್ ಠಾಕ್ರೆಗೆ ಮತ್ತೊಂದು ಶಾಕ್, ಹೈಕೋರ್ಟ್ ಮೆಟ್ಟಿಲೇರಿದ ಅಕ್ರಮ ಆಸ್ತಿ ಪ್ರಕರಣ!
ಇತ್ತ ರಾಜ್ಯಪಾಲರನ್ನು ಭೇಟಿಯಾಗಿರುವ ಬಿಜೆಪಿ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸರ್ಕಾರ ವಿಶ್ವಾಸ ಮತ ಕಳೆದು ಕೊಂಡಿರುವುದು ಗೌಪ್ಯವಾಗಿರುವ ವಿಚಾರವಲ್ಲ, ಹೀಗಾಗಿ ವಿಶ್ವಾಸ ಮತ ಸಾಬೀತುಪಡಿಸಲು ಆಗ್ರಹಿಸಿದ್ದೇವೆ ಎಂದು ಫಡ್ನವಿಸ್ ಹೇಳಿದ್ದಾರೆ. ಸರ್ಕಾರ ಪತನ ಹಾಗೂ ಬಿಜೆಪಿ ಸರ್ಕಾರ ರಚನೆ ಕುರಿತು ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.
ಮಹಾರಾಷ್ಟ್ರ ರಾಜಕೀಯ ಮತ್ತೊಂದು ತಿರುವು ಪಡೆದಿದ್ದು, ಈವರೆಗೆ ಗುವಾಹಟಿ ಹೋಟೆಲ್‌ನಲ್ಲಿ ತೆರೆಮರೆ ರಾಜಕೀಯ ನಡೆಸುತ್ತಿದ್ದ ಬಂಡಾಯ ಶಿವಸೇನಾ ಮುಖಂಡ ಏಕನಾಥ ಶಿಂಧೆ ಮಂಗಳವಾರ ಹೋಟೆಲ್‌ನಿಂದ ಹೊರಬಂದು ಬಹಿರಂಗವಾಗಿ ಮಾತನಾಡಿದ್ದಾರೆ. ‘ನನಗೆ 50 ಶಾಸಕರ ಬೆಂಬಲ ಇದೆ. ಶೀಘ್ರ ಮುಂಬೈಗೆ ಮರಳುವೆ’ ಎಂದು ಘೋಷಿಸಿದ್ದಾರೆ. ಅಲ್ಲದೆ, ‘ಶಿವಸೇನೆಯು ನಮ್ಮ ಬಣದ 20 ಶಾಸಕರ ಜತೆ ಸಂಪರ್ಕದಲ್ಲಿದೆ ಎಂದು ಹೇಳುತ್ತಿದೆ. ಹಾಗಿದ್ದರೆ ಆ ಶಾಸಕರ ಹೆಸರನ್ನು ಬಹಿರಂಗಪಡಿಸಿ’ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸವಾಲು ಹಾಕಿದ್ದಾರೆ.
ಈ ನಡುವೆ, ಈವರೆಗೆ ಖಾರವಾಗಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಶಿಂಧೆ ಘೋಷಣೆ ಬೆನ್ನಲ್ಲೇ ಕೊಂಚ ಮೆತ್ತಗಾಗಿದ್ದಾರೆ ಹಾಗೂ ಮಾತುಕತೆಗೆ ಬರುವಂತೆ ಬಂಡಾಯ ಶಾಸಕರಿಗೆ ಆಹ್ವಾನ ನೀಡಿದ್ದಾರೆ. ‘ಒಂದು ಪಕ್ಷದ ಮುಖ್ಯಸ್ಥನಾಗಿ ಹಾಗೂ ಕುಟುಂಬದ ಮುಖ್ಯಸ್ಥನಾಗಿ ನಾನು ನಿಮ್ಮ ಕಾಳಜಿ ವಹಿಸಬೇಕು. ಮುಂಬೈಗೆ ಬಂದು ನನ್ನ ಜತೆ ಮುಖತಃ ಮಾತನಾಡಿ. ಏನು ಭಿನ್ನಾಭಿಪ್ರಾಯ ಇವೆಯೋ ಇತ್ಯರ್ಥ ಮಾಡಿಕೊಂಡು ಮುಂದೆ ಸಾಗೋಣ’ ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.