
ಬೆಂಗಳೂರು (ಜ.21): ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ರಾಜ್ಯ ಸಮಿತಿಯ ಮೊದಲ ಸಭೆಯಲ್ಲಿ ಹಲವು ಸಂಭಾವ್ಯ ಅಭ್ಯರ್ಥಿಗಳ ಹೆಸರು ಪ್ರಸ್ತಾಪವಾಗಿದ್ದು, ಈ ಅಭ್ಯರ್ಥಿಗಳ ಬಗ್ಗೆ ವೈಯಕ್ತಿಕ ಅಭಿಪ್ರಾಯ ತಿಳಿಸುವಂತೆ ಸಮಿತಿಯ ಎಲ್ಲ ಸದಸ್ಯರಿಗೆ ಸೂಚಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣಾ ಸಮಿತಿಯ ಮೊದಲ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ತಿಂಗಳ ಅಂತ್ಯದೊಳಗೆ ಕೇಂದ್ರ ಚುನಾವಣಾ ಸಮಿತಿಗೆ ರಾಜ್ಯದ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಅಖೈರುಗೊಳಿಸಿ ಶಿಫಾರಸು ಮಾಡಬೇಕಿದೆ. ಹಾಗಾಗಿ ಇವತ್ತಿನ ಸಭೆಯಲ್ಲಿ ದೆಹಲಿ ವೀಕ್ಷಕರ ಸಮ್ಮುಖದಲ್ಲಿ ಹಲವು ಸಂಭ್ಯಾವ್ಯ ಅಭ್ಯರ್ಥಿಗಳ ಹೆಸರು ಪ್ರಸ್ತಾಪವಾಗಿದೆ. ಸಮಿತಿ ಸದಸ್ಯರಿಗೆ ಪ್ರಸ್ತಾಪಿತ ಅಭ್ಯರ್ಥಿಗಳ ಬಗ್ಗೆ ವೈಯಕ್ತಿಕ ಅಭಿಪ್ರಾಯ ನೀಡಲು ಹೇಳಿದ್ದೇವೆ. ಅವರ ಅಭಿಪ್ರಾಯ ಬಂದ ಬಳಿಕ, ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಮತ್ತು ಆಕಾಂಕ್ಷಿತ ಅಭ್ಯರ್ಥಿಗಳ ಜೊತೆಗೂ ಚರ್ಚೆ ನಡೆಸುತ್ತೇವೆ ಎಂದರು.
ರಾಮನಗರದಲ್ಲಿ ರಾಮಮಂದಿರ ಕಟ್ಟಲು ಕಾಂಗ್ರೆಸ್ ಸರ್ಕಾರದಿಂದ ಆಗುವುದಿಲ್ಲ: ಸಿ.ಪಿ.ಯೋಗೇಶ್ವರ್
ಲೋಕಸಭಾ ಚುನಾವಣೆಗೆ ಸಚಿವರ ಸ್ಪರ್ಧೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಕೆಪಿಸಿಸಿಯಿಂದ ಸಿದ್ಧವಾದ ಸಭಾವ್ಯ ಅಭ್ಯರ್ಥಿಗಳ ಪಟ್ಟಿ ಸ್ಕ್ರೀನಿಂಗ್ ಕಮಿಟಿಗೆ ಹೋಗುತ್ತದೆ. ಅಲ್ಲಿಂದ ಕೇಂದ್ರ ಚುನಾವಣಾ ಸಮಿತಿಗೆ ರವಾನೆಯಾಗುತ್ತದೆ. ಕೇಂದ್ರ ಚುನಾವಣಾ ಸಮಿತಿಯು ಯಾರು ಸ್ಪರ್ಧಿಸಬೇಕು ಏನು ಎಂದು ಎಲ್ಲವನ್ನೂ ನಿರ್ಧಾರ ಮಾಡುತ್ತದೆ ಎಂದರು.
ಡಿಸಿಎಂ ಸೃಷ್ಟಿಗೆ ರಾಜಣ್ಣ ಪಟ್ಟು: ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ವಿಚಾರ ಸಿನಿಮೀಯ ರೀತಿಯಲ್ಲಿ ಚರ್ಚೆಯಾಗುತ್ತಿದೆ. ‘ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿಯ ಪ್ರಸ್ತಾಪ ಇಲ್ಲ’ ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಡಿಸಿಎಂ ಆಗ್ರಹ ವಿಚಾರವನ್ನು ತೆರೆಮರೆಗೆ ಸರಿಸಲು ಯತ್ನಿಸಿದ್ದಾರೆ. ಆದರೆ ಸಚಿವ ಕೆ.ಎನ್. ರಾಜಣ್ಣ ಡಿಸಿಎಂ ಆಗ್ರಹ ನಿರಂತರವಾಗಿ ಇರುತ್ತದೆ ಎಂದು ಪುನರುಚ್ಚರಿಸಿದ್ದಾರೆ.
ಹಿಂದೂಗಳ ಭಾವನೆಗೆ ಅಪಮಾನ ಮಾಡುವುದೇ ಕಾಂಗ್ರೆಸ್ ಸರ್ಕಾರದ ಸಂಸ್ಕೃತಿ: ಶಾಸಕ ಯತ್ನಾಳ್
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸುರ್ಜೇವಾಲ ಅವರು, ಹೆಚ್ಚುವರಿ ಡಿಸಿಎಂ ವಿಚಾರ ಪಕ್ಷದ ಮುಂದೆ ಇಲ್ಲ. ಜನರ ಬಳಿಗೆ ನಮ್ಮ ಆಡಳಿತವನ್ನು ತೆಗೆದುಕೊಂಡು ಹೋಗಬೇಕು ಜೊತೆಗೆ ಜನರನ್ನು ಆಡಳಿತದಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಲೋಕಸಭೆ ಚುನಾವಣೆಯಲ್ಲಿ ನಾವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಇದಕ್ಕೆ ಅಗತ್ಯ ತಯಾರಿ ಬಗ್ಗೆ ಮಾತ್ರ ಚರ್ಚೆಯಿದೆ. ಡಿಸಿಎಂ ಬಗ್ಗೆ ಇಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.