Council Election Karnataka : ರಾಜ್ಯದ ನಾಯಕರು ದಿಕ್ಕೆಡಿಸುವ ಕೆಲಸ ಮಾಡುತ್ತಿದ್ದಾರೆ : ವಿಶ್ವನಾಥ್

By Kannadaprabha NewsFirst Published Dec 4, 2021, 9:38 AM IST
Highlights
  • ಸ್ಥಳೀಯ ಸಂಸ್ಥೆಯಿಂದ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ಮತದಾರರು ಎಚ್ಚೆತ್ತುಕೊಳ್ಳಬೇಕು 
  • ಕ್ರಾಂತಿಕಾರಕ ತೀರ್ಮಾನದ ಮೂಲಕ ಉತ್ತಮ ಸಂದೇಶ ನೀಡಬೇಕು

 ಮೈಸೂರು (ಡಿ.04): ಸ್ಥಳೀಯ ಸಂಸ್ಥೆಯಿಂದ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ (Election) ಮತದಾರರು ಎಚ್ಚೆತ್ತುಕೊಂಡು ಕ್ರಾಂತಿಕಾರಕ ತೀರ್ಮಾನದ ಮೂಲಕ ಉತ್ತಮ ಸಂದೇಶ ನೀಡಬೇಕು. ಯಾರೂ ಕೂಡ ಆಮಿಷಗಳಿಗೆ ಬಲಿಯಾಗಿ ಮತ ಮಾರಾಟ ಮಾಡಿಕೊಳ್ಳಬೇಡಿ ಎಂದು ವಿಧಾನ ಪರಿಷತ್‌ (MLC Election) ಸದಸ್ಯ ಎಚ್‌. ವಿಶ್ವನಾಥ್‌ (H Vishwanath) ಕಿವಿಮಾತು ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದರಿಯಾಗಬೇಕಾದ ರಾಜ್ಯದ ನಾಯಕರು ದಿಕ್ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ (Election)  ಸ್ಪರ್ಧಿಸಿರುವ ಅಭ್ಯರ್ಥಿಗಳು ಕನಿಷ್ಠ 40 ಕೋಟಿಯಿಂದ 1,700 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದಾರೆ. ಅಂತಹವರು ನಮ್ಮ ಸಾರ್ವಭೌಮ ಸದನಕ್ಕೆ ಬರಲು ಅಪೇಕ್ಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ (Karnataka) ಹೊಸ ಕ್ರಾಂತಿಕಾರಕ ಹೆಜ್ಜೆಯನ್ನಿಡಬೇಕು. ಮೂರು ಪಕ್ಷದ ಮುಖಂಡರು ಉತ್ತಮ ಸಂದೇಶ ನೀಡಬೇಕು. ಇದನ್ನು ತಮಾಷೆಯಾಗಿ ಪರಿಗಣಿಸದೆ ಗಂಭೀರವಾಗಿ ಆಲೋಚಿಸಬೇಕು. ದುಡ್ಡು ತೆಗೆದುಕೊಂಡು ಮತ ಹಾಕಿ ಎಂಬ ಸಂದೇಶ ನೀಡಬಾರದು ಎಂದರು.

ಗ್ರಾಪಂ ಚುನಾವಣೆಯಲ್ಲಿ (Grama Panchayat Election) ಶೇ.98 ರಷ್ಟುಸದಸ್ಯರು ಸ್ವಂತ ಸಾಮರ್ಥ್ಯದಿಂದ ಆಯ್ಕೆ ಆಗಿರುತ್ತಾರೆ. ಯಾರ ನೆರಳೂ ಇಲ್ಲದೆ ಆಯ್ಕೆಯಾದವರು ಮತ ಚಲಾಯಿಸುತ್ತಾರೆ. ಅಂತಹ ಮತದಾರರನ್ನು ಹೊಂದಿದ ಚುನಾವಣೆಯ ಅಭ್ಯರ್ಥಿಗೆ 15 ಕೋಟಿ ಇದ್ದರೆ ಬನ್ನಿ ಅನ್ನೋದು ಸರಿಯೇ?. ಮತದಾರರೂ ಕೂಡ ಆಮಿಷಕ್ಕೆ ಬಲಿ ಆಗಬಾರದು. ಮರ್ಜಿಗೆ ಒಳಗಾಗದೆ ಮತ ಚಲಾಯಿಸಬೇಕು. ರಾಜ್ಯ ನಾಯಕರಾದ ಬಿ.ಎಸ್‌. ಯಡಿಯೂರಪ್ಪ(BS Yediyurappa ), ಸಿದ್ದರಾಮಯ್ಯ (Siddaramaiah), ಎಚ್‌.ಡಿ. ಕುಮಾರಸ್ವಾಮಿ(HD kumaraswamy) ಏನು ಸಂದೇಶ ನೀಡುತ್ತಿದ್ದಾರೆ? ಬರಿ ಕೆಲಸಕ್ಕೆ ಬಾರದ ಮಾತುಗಳನ್ನಾಡುತ್ತ, ನೀನು ಕಳ್ಳ, ಕುಡುಕ ಅಂತಾರೆ. ಇದು ಮುಖ್ಯಮಂತ್ರಿಗಳಾಗಿದ್ದವರು ಆಡುವ ಮಾತೆ ಎಂದು ಅವರು ಪ್ರಶ್ನಿಸಿದರು.

ನನ್ನ ಬಳಿ ಬಂದ ಕೆಲವು ಅಭ್ಯರ್ಥಿಗಳು ಬಜಾರ್‌ ಬಗ್ಗೆ ಕೇಳಿದರು. ಮೈಸೂರಿನಲ್ಲಿ (Mysuru) ಎಷ್ಟು ನಡೆಯುತ್ತಿದೆ ಸಾರ್‌ ಎಂದರು. ಇವರು ಕೇಳಿರುವುದನ್ನು ನೋಡಿದರೆ ನಾಯಕರು ವೋಟ್‌ ಬಜಾರ್‌ ಮಾಡಿದ್ದಾರೆ. ಮಂಡ್ಯದಲ್ಲಿ 50 ಸಾವಿರ, ಹಾಸನ (Hassan), ಕೊಡಗಿನಲ್ಲಿ 1 ಲಕ್ಷ ಅಂತಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಎಸ್‌ಟಿಎಸ್‌ ಆರೋಪ ಸರಿಯಲ್ಲ:  ಚುನಾವಣೆ ಸ್ಪರ್ಧಾಳುಗಳ ಬಗ್ಗೆ ವೈಯಕ್ತಿಕ ಆರೋಪ ಸರಿಯಲ್ಲ. ಜೆಡಿಎಸ್‌(JDS) ಅಭ್ಯರ್ಥಿಯ ಕುರಿತು ಒಬ್ಬ ಜವಾಬ್ದಾರಿಯುತ ಸಚಿವರಾಗಿ ಎಸ್‌.ಟಿ. ಸೋಮಶೇಖರ್‌ ಮಾತನಾಡಬಾರದಿತ್ತು. ಸ್ಪರ್ಧಿಗಳನ್ನು ರಾಜಕೀಯವಾಗಿ ವಿರೋಧಿಸಬೇಕೆ ಹೊರತು ವೈಯಕ್ತಿಕ ವಿಷಯ ಪ್ರಸ್ತಾಪಿಸಿ ಅಧೀರರನ್ನಾಗಿ ಮಾಡಬಾರದು ಎಂದರು.

ಸಿಎಂ ಬದಲಿಲ್ಲ: ರಮೇಶ್‌ ಜಾರಕಿಹೊಳಿ (Ramesh Jarkiholi) ಅಥವಾ ಬಸನಗೌಡ ಪಾಟೀಲ್‌ ಯತ್ನಾಳ್‌ ಯಾವ ಮಾತುಗಳನ್ನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraja bommai) ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ಮುಂದಿನ ಚುನಾವಣೆ ಅವರ ನೇತೃತ್ವದಲ್ಲಿಯೇ ನಡೆಯುತ್ತದೆ. ಇಂತಹ ಹೇಳಿಕೆ ಊಹಾಪೋಹವಷ್ಟೆ. ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ (Vishwanath) ಹಾಗೂ ಗೋಪಾಲಕೃಷ್ಣ ರಿಯಲ್‌ ಎಸ್ಟೇಟ್‌ ಗಿರಾಕಿಗಳು. ಅವರಿಬ್ಬರ ನಡುವೆ ಏನೇನು ವ್ಯವಹಾರ ನಡೆದಿದೆಯೋ ಗೊತ್ತಿಲ್ಲ. ದ್ವೇಷದ ರಾಜಕಾರಣಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದು ಅವರು ತಿಳಿಸಿದರು.

ಶಾಲೆ ಕುರಿತು ಆತುರದ ನಿರ್ಧಾರ ಬೇಡ

ಮನೆಯೇ ಮೊದಲ ಪಾಠಶಾಲೆ ಎನ್ನುತ್ತಾರೆ. ಈಗ ಓಮಿಕ್ರಾನ್‌ (omicron) ಸೋಂಕು ರಾಜ್ಯಕ್ಕೂ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಓಮಿಕ್ರಾನ್‌ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಶಾಲಾ, ಕಾಲೇಜುಗಳನ್ನು (School College) ತೆರೆದಿರುವುದರಿಂದ ಮಕ್ಕಳನ್ನು ದನಕರುಗಳಂತೆ ಆಟೋಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ. ರಾಜ್ಯದಲ್ಲಿ 1 ರಿಂದ 7ನೇ ತರಗತಿವರೆಗೆ ಸುಮಾರು 1.30 ಕೋಟಿ ಮಕ್ಕಳಿದ್ದಾರೆ. ಸ್ವಲ್ಪ ವ್ಯತ್ಯಾಸವಾದರೂ ಮಕ್ಕಳ ಮೇಲೆಯೇ ಪರಿಣಾಮ ಬೀರುತ್ತದೆ. ಆದ್ದರಿಂದ ಶಿಕ್ಷಣ ಸಚಿವರು (Education Minister) ಯಾವುದೇ ವಿಷಯ ಕುರಿತು ಆತುರದ ನಿರ್ಧಾರ ಕೈಗೊಳ್ಳಬಾರದು. ಓಮಿಕ್ರಾನ್‌ ವೇಗವಾಗಿ ಹರಡುತ್ತಿದೆ. ಕೊರೋನಾ (Corona) ಎರಡನೇ ಅಲೆಯನ್ನು ಕಣ್ಣಾರೆ ನೋಡಿದ್ದೇವೆ. ಮತ್ತೆ ಅಂತಹ ಸನ್ನಿವೇಶ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದರು.

ಸೌಜನ್ಯದ ಪಾಠ ಮೋದಿಯಿಂದ ಕಲಿಯಬೇಕು

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು (HD Devegowda) ಭೇಟಿ ಆಗಿರುವುದು ಸೌಜನ್ಯಯುತವಾದದ್ದು. ಅದನ್ನು ರಾಜಕೀಯ (Politics) ದೃಷ್ಟಿಯಿಂದ ನೋಡಬಾರದು. ಸಂವಿಧಾನದ ದಿನದಂದು ಕುಟುಂಬದ ರಾಜಕಾರಣ ಗೆದ್ದಲಿನಂತೆ ಕಾಡುತ್ತಿದೆ ಎಂದು ಮೋದಿ ಹೇಳಿದ್ದರು. ಅದನ್ನೇ ಕೆಲವರು ರಾಜಕಾರಣ ಮಾಡಿದರು. ಆದರೆ, ಇದೊಂದು ಸೌಜನ್ಯದ ಭೇಟಿ ಎಂಬುದಷ್ಟೇ ಮುಖ್ಯ. ರಾಜಕಾರಣದಲ್ಲಿ ಇರುವವರು ಎಲ್ಲರನ್ನೂ ಏಕವಚನದಲ್ಲಿ ಮಾತನಾಡುವುದಲ್ಲ. ಮೋದಿ ಅವರಿಂದ ಸೌಜನ್ಯ ಕಲಿಯಬೇಕಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೆಸರು ಹೇಳಿದೆ ಟೀಕಿಸಿದರು.

click me!