
ಚಾಮರಾಜನಗರ : ಜನರು ಕಾಂಗ್ರೆಸ್ ಪಕ್ಷಕ್ಕೆ ಐದು ವರ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ಮುಂದಿನ ಚುನಾವಣೆ ಗೆದ್ದು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸದ್ಯಕ್ಕೆ ನವೆಂಬರ್ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ ಎಂದು ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಆಯೋಜಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ನಮಗೆ ಐದು ವರ್ಷ ಅಧಿಕಾರ ನೀಡಿದ್ದಾರೆ. ಅದರಂತೆ ನಾವು ಅಧಿಕಾರ ನಡೆಸುತ್ತಿದ್ದೇವೆ. ಮುಂದಿನ ವರ್ಷದ ಬಜೆಟನ್ನು ನಾನೇ ಮಂಡಿಸುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮತ್ತೆ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಎಲ್ಲಿಯ ತನಕ ಜನರ ಆಶೀರ್ವಾದ ಇರುತ್ತೆ, ಅಲ್ಲಿ ತನಕ ನಾನೇ ಸಿಎಂ ಆಗಿರುತ್ತೇನೆ. 2028ರ ಚುನಾವಣೆಯಲ್ಲಿ ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ವಿಚಾರವನ್ನು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡೋಣ ಎಂದು ತಿಳಿಸಿದರು.
ಅಲ್ಲದೆ, ಎರಡೂವರೆ ವರ್ಷ ಆದ ಮೇಲೆ ಸಂಪುಟ ಪುನಾರಚನೆ ಮಾಡೋಣ ಅಂದಿದ್ದೆ, ಆ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದಕ್ಕೆ ಎಲ್ಲರೂ ಕ್ರಾಂತಿ ಅಂತ ತಿಳಿದುಕೊಂಡಿದ್ದರು. ಆದರೆ, ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ನಾನು ಮೌಢ್ಯಗಳಲ್ಲಿ ನಂಬಿಕೆ ಇಟ್ಟಿಲ್ಲ. ನನಗೆ ಚಾಮರಾಜನಗರ, ಮೈಸೂರು ಎಲ್ಲವೂ ಒಂದೇ, ಇಲ್ಲಿಗೆ ಬಂದಾಗ ನನಗೆ ಅಧಿಕಾರ ಗಟ್ಟಿಯಾಗಿದೆ. ಮೂಢನಂಬಿಕೆಗಳಲ್ಲಿ ನನಗೆ ನಂಬಿಕೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯದಿಂದ ಕೇಂದ್ರಕ್ಕೆ ಹೆಚ್ಚಿನ ಜಿಎಸ್ಟಿ ನೀಡುತ್ತೇವೆ. ಆದರೆ ಅನುದಾನ ಕೊಡುವ ವಿಚಾರದಲ್ಲಿ ಮಾತ್ರ ಸರಿಯಾಗಿ ಹಂಚಿಕೆ ಆಗುತ್ತಿಲ್ಲ. ಹೆಚ್ಚಿನ ಅನುದಾನ ಕೊಡಿ ಎಂದು ನಾನು ಕೇಳುತ್ತೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.