ಮುಂದಿನ ಬಾರಿಯೂ ಕಾಂಗ್ರೆಸ್‌ ಬರಲಿ ಅಂತ ಜನ ಹೇಳ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

Published : Nov 25, 2023, 04:45 AM IST
ಮುಂದಿನ ಬಾರಿಯೂ ಕಾಂಗ್ರೆಸ್‌ ಬರಲಿ ಅಂತ ಜನ ಹೇಳ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಆದರೆ, ಯೋಜನೆಗಳ ಜಾರಿ ಮತ್ತು ಅವುಗಳ ಯಶಸ್ಸಿನಿಂದ ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರಬೇಕೆಂದು ರಾಜ್ಯದ ಜನರು ಹರಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು (ನ.25): ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಆದರೆ, ಯೋಜನೆಗಳ ಜಾರಿ ಮತ್ತು ಅವುಗಳ ಯಶಸ್ಸಿನಿಂದ ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರಬೇಕೆಂದು ರಾಜ್ಯದ ಜನರು ಹರಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಾರಿಗೆ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಏರ್ಪಡಿಸಿದ್ದ ಶಕ್ತಿ ಯೋಜನೆಯ ಶತಕೋಟಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆ ಘೋಷಿಸಿದಾಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಗ್ಯಾರಂಟಿ ಜಾರಿಗೊಳಿಸಲಾಗದು, ಅದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದಿದ್ದರು. ಆದರೆ, ಅವರೆಲ್ಲರ ಟೀಕೆಗೂ ಮೀರಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ರಾಜ್ಯದ ಜನರು ನಮಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮುಂದಿನ ಬಾರಿಯೂ ನೀವೇ ಅಧಿಕಾರಕ್ಕೆ ಬರಬೇಕು ಎಂದು ಹಾರೈಸುತ್ತಿದ್ದಾರೆ. ಇದು ಬಿಜೆಪಿಯವರ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ ಎಂದರು.

ವೀಣಾ ಕಾಶಪ್ಪನವರಿಗೆ ರಾಜಕೀಯವಾಗಿ ಒಳ್ಳೆ ಭವಿಷ್ಯವಿದೆ: ಸಿಎಂ ಸಿದ್ದರಾಮಯ್ಯ

ಜಾತಿ-ಧರ್ಮ ಮೀರಿದ ಯೋಜನೆಗಳು: ರಾಜ್ಯದ ಮಹಿಳಾ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಪಡೆಯಲು ಗ್ಯಾರಂಟಿ ಯೋಜನೆಗಳನ್ನು ರೂಪಿಸಲಾಗಿದೆ. ನಾವು ರೂಪಿಸಿದ ಯೋಜನೆಗಳು ಜಾತಿ-ಧರ್ಮವನ್ನೂ ಮೀರಿದ್ದಾಗಿವೆ. ಶಕ್ತಿ ಯೋಜನೆಯಿಂದಾಗಿ ದೇವಸ್ಥಾನಗಳಿಗೆ ಆದಾಯ ಹೆಚ್ಚಾಗಿರುವುದೇ ಅದಕ್ಕೆ ಸಾಕ್ಷಿ ಎಂದು ಸಿದ್ದರಾಮಯ್ಯ ತಿಳಿಸಿದರು.

ಜನವರಿಯಲ್ಲಿ ಯುವನಿಧಿ ಯೋಜನೆಗೆ ಚಾಲನೆ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಎಲ್ಲ ಐದು ಗ್ಯಾರಂಟಿ ಯೋಜನೆಗಳಿಗಾಗಿ 36-38 ಸಾವಿರ ಕೋಟಿ ರು. ಖರ್ಚು ಅನುದಾನ ಮೀಸಲಿಡಲಾಗಿದೆ. ಮುಂದಿನ ವರ್ಷ 56-58 ಸಾವಿರ ಕೋಟಿ ರು. ಅನುದಾನ ನೀಡಲಾಗುವುದು. ಈ ಯೋಜನೆಗಳಿಂದಾಗಿ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 48ರಿಂದ 50 ಸಾವಿರ ರು. ಹಣ ನೀಡಿದಂತಾಗುತ್ತಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ, ಜನರು ನೀಡುವ ತೆರಿಗೆ ಹಣವನ್ನೇ ಅವರಿಗೆ ವಾಪಸು ನೀಡಲಾಗುತ್ತಿದೆ ಎಂದರು.

ಬಿಎಸ್‌ವೈಗೆ ಜವಾಬ್ದಾರಿಯಿಲ್ಲ: ರಾಜ್ಯದಲ್ಲಿ ಐದು ಬಾರಿ ಸಿಎಂ ಆಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಇತ್ತೀಚೆಗೆ ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿದ್ದಾರೆ. ಅವರು ಜವಾಬ್ದಾರಿಯಿಂದ ಮಾತನಾಡುತ್ತಾರೆ ಎಂದು ತಿಳಿದಿದ್ದೆ. ಆದರೆ, ಅವರಿಗೆ ಜವಾಬ್ದಾರಿಯೇ ಇಲ್ಲ ಎಂಬುದು ಈಗ ಗೊತ್ತಾಗುತ್ತಿದೆ. ರಾಜಕೀಯ ನಿವೃತ್ತಿ ಪಡೆದ ಮೇಲೂ ಅವರು ಸುಳ್ಳು ಹೇಳುತ್ತಿದ್ದಾರೆ. ಶಕ್ತಿ ಯೋಜನೆಯ ಶತಕೋಟಿ ಸಂಭ್ರಮವೇ ಗ್ಯಾರಂಟಿ ಯೋಜನೆ ಬಗ್ಗೆ ಅಪಪ್ರಚಾರ ಮಾಡಿದವರೆಲ್ಲರಿಗೂ ನೀಡಿದ ಉತ್ತರ ಎಂದು ಸಿದ್ದರಾಮಯ್ಯ ಹೇಳಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಶಾಸಕಿ ಸೌಮ್ಯ ರೆಡ್ಡಿ, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್‌.ವಿ. ಪ್ರಸಾದ್‌, ಕೆಎಸ್ಸಾರ್ಟಿಸಿ ಎಂಡಿ ಅನ್ಬುಕುಮಾರ್‌, ಬಿಎಂಟಿಸಿ ಎಂಡಿ ಸತ್ಯವತಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಎಂಡಿ ಎಸ್‌. ಭರತ್‌ ಇತರರಿದ್ದರು.

ಡಿಕೆಶಿ ಸಿಬಿಐ ಕೇಸ್ ವಾಪಸ್, ಇವರೆಲ್ಲಾ ಸಂವಿಧಾನ ಉಳಿಸುವ ಕಾನೂನು ರಕ್ಷಕರಾ?: ಎಚ್‌ಡಿಕೆ

ವಿಪಕ್ಷಗಳು ಟೀಕೆ ಬಿಟ್ಟು ಅಭಿನಂದಿಸಲಿ: ಚುನಾವಣೆಗೂ ಮುನ್ನ ಪ್ರಣಾಳಿಕೆ ಸಿದ್ಧಪಡಿಸುವ ಸಂದರ್ಭದಲ್ಲಿ ಶಕ್ತಿ ಯೋಜನೆ ಸೇರಿಸುವಂತೆ ಸಿದ್ದರಾಮಯ್ಯ ಅವರೇ ಹೇಳಿದ್ದರು. ಈಗ ಆ ಯೋಜನೆ ಯಶಸ್ವಿಯಾಗಿದ್ದು, 100 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡಿದ್ದ ವಿರೋಧ ಪಕ್ಷಗಳು, ಟೀಕೆ-ಟಿಪ್ಪಣಿಗಳನ್ನು ಬಿಟ್ಟು ಯೋಜನೆಗಳು ಯಶಸ್ವಿಗೊಂಡಿದ್ದಕ್ಕೆ ನಮ್ಮನ್ನು ಅಭಿನಂದಿಸಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದರಾಮಯ್ಯ ಹೆಲಿಕಾಪ್ಟರ್‌ ಪ್ರಯಾಣಕ್ಕೆ ರಾಜ್ಯದ ಬೊಕ್ಕಸದಿಂದ ಕೋಟ್ಯಂತರ ಖರ್ಚು!
ಅಂದು ಜ್ಯೋತಿಷಿ ಹೇಳಿದ್ದು 'The Devilʼ ಸಿನಿಮಾದಲ್ಲಿ ನಿಜವಾಯ್ತು, Darshan ರಿಯಲ್‌ ಲೈಫ್‌ನಲ್ಲಿ ಏನಾಗತ್ತೆ?