
ವಿಜಯಪುರ (ನ.25): ಪಕ್ಷದ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮ್ಮನ್ನು ಭೇಟಿಯಾಗಿ ನಾಟಕ ಮಾಡುವ ಅಗತ್ಯ ಇಲ್ಲ ಎಂದು ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಟಾಚಾರಕ್ಕೆ ಬಂದು ಹಾರ ಹಾಕುವುದಾಗಲಿ, ನಾಟಕೀಯವಾಗಿ ಮಾಧ್ಯಮಗಳ ಮುಂದೆ ಪೋಸ್ ಕೊಡುವುದಾಗಲಿ ಬೇಡ. ನಾವು ಪಕ್ಷ ನಿಷ್ಠರಿದ್ದೇವೆ, ಲೋಕಸಭೆಯಲ್ಲಿ ಶ್ರಮಿಸುತ್ತೇವೆ. ಮೋದಿ ಗೆಲುವು ನಮಗೆ ಮುಖ್ಯ. ಇದಕ್ಕೆ ದೇವರು-ತಾಯಿ ಸಾಕ್ಷಿ ಎಂದು ತಿಳಿಸಿದರು.
ಮಾಜಿ ಸಚಿವರಾದ ಸುನಿಲ್ ಕುಮಾರ್, ರಮೇಶ್ ಜಾರಕಿಹೊಳಿ, ವಿ.ಸೋಮಣ್ಣ, ಶಾಸಕ ಬೆಲ್ಲದ್ ನಾವೆಲ್ಲ ಒಂದಾಗಿ ಮೋದಿ ಗೆಲುವಿಗೆ ನಿರ್ಧರಿಸಿದ್ದೇವೆ. ಸೋಮಣ್ಣ ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬುದು ಸುಳ್ಳು. ಡಿ.6 ರವರೆಗೆ ಹೈಕಮಾಂಡ್ ಸೋಮಣ್ಣರಿಗೆ ಏನಾದರೂ ಹೇಳಬಹುದು ಎಂದರು. ವಿಜಯೇಂದ್ರ ಅವರು ನಮ್ಮ ಮನೆಗೆ ಬಂದು ಎಲ್ಲ ಸರಿಯಾಗಿದೆ ಎಂದು ಹೇಳುವುದು ಬೇಡ. ನನ್ನನ್ನು ಪಕ್ಷದಿಂದ ಹೊರಹಾಕುವಲ್ಲಿ ಅವರ ಪಾತ್ರವೇನು ಎಂಬುದೂ ಗೊತ್ತಿದೆ. ಮಂತ್ರಿ ಮಾಡದೆ ನನ್ನನ್ನು ತುಳಿಯುವ ಪ್ರಯತ್ನವಾಗಿದೆ.
ಡಿಕೆಶಿ ಸಿಬಿಐ ಕೇಸ್ ವಾಪಸ್, ಇವರೆಲ್ಲಾ ಸಂವಿಧಾನ ಉಳಿಸುವ ಕಾನೂನು ರಕ್ಷಕರಾ?: ಎಚ್‌ಡಿಕೆ
ನಮ್ಮದೇ ಸರ್ಕಾರ ಇದ್ದಾಗ ವಿಜಯಪುರ ಅಭಿವೃದ್ಧಿಗೆ ನೀಡಿದ್ದ ₹125 ಕೋಟಿ ಹಣ ವಾಪಸ್ ಪಡೆದಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಾನು ನೀಡಿದ ಪತ್ರಗಳನ್ನು ವಿಜಯೇಂದ್ರ ತನ್ನ ಬಳಿ ಇಟ್ಟುಕೊಂಡಿರುವುದು ಎಲ್ಲವೂ ಗೊತ್ತಿದೆ. ವಿಜಯೇಂದ್ರ ಮಾಡಿರುವ ಕೆಲಸಗಳ ಎಲ್ಲ ಮಾಹಿತಿ ನನ್ನ ಬಳಿ ಇದೆ ಎಂದರು. ವಿಜಯೇಂದ್ರ ಈ ಹಿಂದೆ ನನಗೆ ಏನೆಲ್ಲ ಮಾಡಿದ್ದಾರೆ ಎಂಬುದು ಗೊತ್ತಿದೆ. ಅಧಿಕಾರ ಇದ್ದಾಗ ಎಲ್ಲದಕ್ಕೂ ಅಡ್ಡಗಾಲು ಹಾಕಿದ್ದರು. ನಗರ, ಜಿಲ್ಲೆಗೆ ಬಂದ ಅನುದಾನ ವಾಪಸ್ ಪಡೆದಿದ್ದರು. ಈಗ ಅವರು ಬಂದು ಭೇಟಿಯಾಗಿ, ಸರಿ ಮಾಡೋಣ ಅಂದರೆ ಅದೆಲ್ಲ ಆಗಲ್ಲ. ಲೋಕಸಭೆ ಚುನಾವಣೆ ಮುಗಿದ ನಂತರ ಎಲ್ಲ ನಿರ್ಧಾರ ಆಗಲಿದೆ. ಆಗ ಎಲ್ಲವೂ ಗೊತ್ತಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.