ವರುಣ ಕ್ಷೇತ್ರಕ್ಕೆ ನಾನು ನೆಪಮಾತ್ರ. ನನ್ನ ಕಾರ್ಯಕರ್ತರು, ಮುಖಂಡರು, ಪಕ್ಷದ ಶಕ್ತಿಯೇ ದೊಡ್ಡದು ಎಂದು ಸಚಿವ ಹಾಗೂ ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.
ಮೈಸೂರು (ಏ.14): ವರುಣ ಕ್ಷೇತ್ರಕ್ಕೆ ನಾನು ನೆಪಮಾತ್ರ. ನನ್ನ ಕಾರ್ಯಕರ್ತರು, ಮುಖಂಡರು, ಪಕ್ಷದ ಶಕ್ತಿಯೇ ದೊಡ್ಡದು ಎಂದು ಸಚಿವ ಹಾಗೂ ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾವ ಮುಖಂಡರು ಚಿಕ್ಕವರಲ್ಲ. ದೊಡ್ಡವರೂ ಅಲ್ಲ. ಎಲ್ಲಕ್ಕಿಂತ ಪಕ್ಷ ಮತ್ತು ಕಾರ್ಯಕರ್ತರು ದೊಡ್ಡವರು. ಪ್ರಚಾರಕ್ಕೆ ಯಾರು ಬರುತ್ತಾರೆ, ಯಾರು ಬರಲ್ಲ ಎಂಬ ಚರ್ಚೆ ಅನಗತ್ಯ. ಎಲ್ಲರೂ ಸೇರಿಯೇ ನನ್ನನ್ನು ಈ ಕ್ಷೇತ್ರದಲ್ಲಿ ಗೆಲ್ಲಿಸುತ್ತಾರೆ. ನಾನೇನೂ ಇಲ್ಲಿ ಶಾಶ್ವತ ಅಲ್ಲ. 75 ವರ್ಷವಾದ ಮೇಲೆ ನಮ್ಮ ಪಕ್ಷದಲ್ಲಿ ಯಾವ ಸ್ಥಾನ ಸಿಗುತ್ತದೆ ಎಂಬುದು ನನಗೆ ಗೊತ್ತು. ಹಾಗಂತ ಇದು ಕೊನೆ ಚುನಾವಣೆ, ರಾಜಕೀಯ ನಿವೃತ್ತಿ ಅಂತಾ ಏನೂ ಇಲ್ಲ. ನಮ್ಮ ಪಕ್ಷದ ವ್ಯವಸ್ಥೆಗಳು ಇರುವ ರೀತಿ ನಾವು ಇರಬೇಕು ಎಂದರು.
ಸಿದ್ದರಾಮಯ್ಯ ನಾನು ಇಬ್ಬರು ಒಂದೇ ಗರಡಿಯಲ್ಲಿ ಪಳಗಿದವರು. ಅವರು ಎಂಥದೆ ನಾಯಕರಾದರೂ ಕೂಡ ಅವರು ಇಲ್ಲಿ ನನ್ನಂತೆಯೇ ಒಬ್ಬ ಅಭ್ಯರ್ಥಿ ಅಷ್ಟೆ. ಪಕ್ಷದೊಳಗೆ ಯಾರೋ ಚಿಕ್ಕಪುಟ್ಟದಾಗಿ ಇಲ್ಲ ಸಲ್ಲದ್ದು ಮಾತಾಡುತ್ತಾರೆ. ಅದನ್ನು ದೊಡ್ಡದು ಮಾಡಬೇಡಿ ಎಂದು ಅವರು ಕೋರಿದರು. ನಾಳೆಯಿಂದ ವರುಣ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸುತ್ತೇನೆ. ಪ್ರತಿ ಹಳ್ಳಿ- ಹಳ್ಳಿಯನ್ನೂ ಸುತ್ತುತ್ತೇನೆ. 17 ರಂದು ವರುಣ ಕ್ಷೇತ್ರಕ್ಕೆ, 19 ರಂದು ಚಾಮರಾಜನಗರ ಕ್ಷೇತಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಇಂದು ಸಂಜೆಯೊಳಗೆ ಗೋವಿಂದರಾಜನಗರ ಟಿಕೆಟ್ ಸಮಸ್ಯೆ ಬಗೆಹರಿಯುತ್ತದೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಸೋಲಿಸುವ ಉದ್ದೇಶದಿಂದ ನನ್ನನ್ನು ಕಣಕ್ಕಿಳಿಸಿದ್ದಾರೆ: ಸಚಿವ ವಿ.ಸೋಮಣ್ಣ
ಮುಖ್ಯಮಂತ್ರಿ ಅರ್ಹತೆ ಇರುವ ಸೋಮಣ್ಣರನ್ನು ಗೆಲ್ಲಿಸೋಣ: ಮುಖ್ಯಮಂತ್ರಿಯಾಗುವ ಅರ್ಹತೆ ಇರುವ ಚಾಮರಾಜನಗರ ಮತ್ತು ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣರನ್ನು ಎಲ್ಲರು ಒಟ್ಟಾಗಿ ಗೆಲ್ಲಿಸೋಣ ಎಂದು ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ಹೇಳಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊನೆಯ ಹಂತದವರೆಗೂ ನನ್ನ ಹೆಸರು ಚಾಲ್ತಿಯಲ್ಲಿತ್ತು.
ನಾನು ಸಹ ಆಕಾಂಕ್ಷಿಯಾಗಿದ್ದೆ, ಆದರೆ, ಬಿಜೆಪಿ ವರಿಷ್ಠರು ಚಿಂತನೆ ನಡೆಸಿ ವಿ.ಸೋಮಣ್ಣರನ್ನು ಚಾಮರಾಜನಗರ ಮತ್ತು ವರುಣಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಆದ್ದರಿಂದ, ವರಿಷ್ಠರ ಅಭಿಲಾಷೆಯಂತೆ ಸೋಮಣ್ಣ ಅವರನ್ನು ಬಹುಮತದಿಂದ ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟರನ್ನು ಸೋಲಿಸಬೇಕಾಗಿದೆ. ಇವರೊಬ್ಬ ವಿಫಲ ಶಾಸಕ, ಕ್ಷೇತ್ರದಲ್ಲಿ ಯಾವುದೆ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ತಮ್ಮ ಸ್ವಹಿತಾಸಕ್ತಿ ಕಾಪಾಡಿಕೊಂಡಿದ್ದಾರೆ. ಆದ್ದರಿಂದ ಇವರನ್ನು ಸೋಲಿಸಬೇಕಾಗಿದೆ ಎಂದರು.
ಸೋಮಣ್ಣ ಅಭಿವೃದ್ಧಿಯ ಹರಿಕಾರ, ಅವರು ಪ್ರತಿನಿಧಿಸುತ್ತಿದ್ದ ಗೋವಿಂದರಾಜನಗರ ಇಂದು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಅಂತಹ ಕಾರ್ಯಗಳು ಚಾಮರಾಜನಗರದಲ್ಲೂ ಆಗಬೇಕಾಗಿದೆ. ಮೈಸೂರು, ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರೊಬ್ಬ ಉತ್ತಮ ಅಭ್ಯರ್ಥಿ ಎಂದರು. ಬಿಜೆಪಿ ಮತ್ತೇ ಅಧಿಕಾರಕ್ಕೆ ಬಂದರೆ ಚಾಮರಾಜನಗರ ಮತ್ತು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸೋಮಣ್ಣ ಗೆಲುವು ಸಾಧಿಸಿದರೆ ಪ್ರಬಲ ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಾರೆ. ಅವರ ಜಾತಕದ ಪ್ರಕಾರ ಅವರು ಉನ್ನತ ಸ್ಥಾನಕ್ಕೇರುವ ಎಲ್ಲಾ ಲಕ್ಷಣಗಳು ಇವೆ. ಆದ್ದರಿಂದ, ಎಲ್ಲರು ಒಟ್ಟಾಗಿ ಸೋಮಣ್ಣರನ್ನು ಗೆಲ್ಲಿಸಬೇಕಾಗಿದೆ ಎಂದರು.
ಬಡವರ ವಿರೋಧಿ ಬಿಜೆಪಿ ಸರ್ಕಾರ ಕಿತ್ತೊಗೆಯಿರಿ: ಶಾಸಕ ಯತೀಂದ್ರ
ಬಿಜೆಪಿ ಸರ್ಕಾರ ಜಾರಿಗೊಳಿಸಿದ ಮೀಸಲಾತಿಯಿಂದಾಗಿ ದಲಿತರು, ಪರಿಶಿಷ್ಟವರ್ಗದವರು, ಲಿಂಗಾಯಿತರು, ಒಕ್ಕಲಿಗರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದರಿಂದ ವರುಣಾದಲ್ಲಿ ಸಿದ್ದರಾಮಯ್ಯ ಸೋಲುತ್ತಾರೆ. ಆದ್ದರಿಂದ, ಚಾಮರಾಜನಗರ ಮತ್ತು ವರುಣಾ ಎರಡು ಕಡೆ ವಿ.ಸೋಮಣ್ಣ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.