
ಬೆಂಗಳೂರು(ಸೆ.24): ಅನಿವಾರ್ಯತೆ ಇಲ್ಲದಿದ್ದರೆ ರಾಜ್ಯಪಾಲರಿಗೆ ಉತ್ತರ ಕೊಡುವುದಿಲ್ಲ. ಎಲ್ಲದಕ್ಕೂ ಉತ್ತರಿಸಬೇಕೆಂದೇನೂ ಇಲ್ಲ, ಯಾವುದಕ್ಕೆ ಉತ್ತರ ಕೊಡಬೇಕೋ ಅದಕ್ಕೆ ಕೊಡುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ 30 ವರ್ಷದ ರಾಜಕೀಯ ಜೀವನದಲ್ಲಿ ಪ್ರತಿನಿತ್ಯ ಸರ್ಕಾರದ ಕಾರ್ಯದ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿದ್ದ ಸಂದರ್ಭಗಳೇ ಇಲ್ಲ. ಆದರೆ ಈಗ ಪ್ರತಿದಿನ ಪತ್ರ ಬರೆದು ಮಾಹಿತಿ ಕೊಡಿ ಅನ್ನುತ್ತಿದ್ದಾರೆ. ಮುಂದೇನು ಮಾಡಬೇಕೆಂದು ಸಂಪುಟದಲ್ಲಿ ಮತ್ತು ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡಿ ಏನು ತೀರ್ಮಾನಿಸಲಾಗುವುದು ಎಂದು ಹೇಳಿದರು.
ನಾಗಮಂಗಲ ಗಲಾಟೆ ವೇಳೆ ಪಾಕ್ ಪರ ಘೋಷಣೆ ಕೂಗಿದ ಬಗ್ಗೆ ಮಾಹಿತಿ ಇಲ್ಲ: ಗೃಹ ಸಚಿವ
ಯಾವಾಗಲಾದರೂ ಒಮ್ಮೆ ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಅಥವಾ ಕಾನೂನು ಸುವ್ಯವಸ್ಥೆಯ ವಿಚಾರ ಇದ್ದರೆ ಗೃಹ ಸಚಿವರು ಹೋಗಿ ರಾಜ್ಯಪಾಲರಿಗೆ ವಿವರಿಸುತ್ತಾರೆ. ಸಂಬಂಧಪಟ್ಟ ಸಚಿವರನ್ನು ಕರೆಸಿ ಕೇಳುವುದಕ್ಕೆ ರಾಜ್ಯಪಾಲರಿಗೆ ಹಕ್ಕು ಇದೆ. ಆದರೆ, ದಿನನಿತ್ಯ ಪತ್ರ ಬರೆದು, ಪತ್ರದ ಮುಖಾಂತರ ಮಾಹಿತಿ ಕೊಡಿ ಅಂತ ಕೇಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು.
ಮುಖ್ಯಮಂತ್ರಿಯವರಿಗೆ ಒಂದು ಮಾನ ದಂಡ, ಕುಮಾರಸ್ವಾಮಿಯವರಿಗೆ ಇನ್ನೊಂದು ಮಾನದಂಡ ಮಾಡಲಾಗುವುದಿಲ್ಲ. ಇವರಿಗೆ ನೋಟಿಸ್ ನೀಡಿದ್ದೀರಿ ಎಂದಾದರೆ ಅವರಿಗೂ ನೋಟಿಸ್ ನೀಡಬೇಕು. ಈ ಬಗ್ಗೆಯೂ ರಾಜ್ಯಪಾಲರನ್ನು ಪ್ರಶ್ನಿಸಿದ್ದೇವೆ ಎಂದು ಅವರು ಹೇಳಿದರು.
ರಾಜ್ಯಪಾಲರಿಂದ ಪಕ್ಷ ರಾಜಕಾರಣ: ಕೃಷ್ಣ
ಬೆಂಗಳೂರು: ರಾಜ್ಯಪಾಲರು ಪಕ್ಷ ರಾಜಕಾರಣ ಮಾಡುತ್ತಿದ್ದು, ದಾಖಲಾತಿಗಳು ರಾಜಭವನದಿಂದಲೇ ಸೋರಿಕೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಪಾಲರು ಸಂವಿಧಾನ ಪ್ರಕಾರ ಕೆಲಸ ಮಾಡಬೇಕು. ಆದರೆ, ರಾಜ್ಯದಲ್ಲಿಕಾರ್ಯನಿರ್ವಹಿಸು ತ್ತಿರುವ ರಾಜ್ಯಪಾಲರು ಪಕ್ಷಾತೀತವಾಗಿ ಕೆಲಸ ಮಾಡುವ ಬದಲು ಸಂವಿಧಾನ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ದಾಖಲಾತಿಗಳು ರಾಜ್ಯ ಸರ್ಕಾರ ಸೋರಿಕೆ ಮಾಡಿದೆ ಎಂಬುದಾಗಿ ಆರೋಪಿಸಿದ್ದರು. ಆದರೆ, ಮುಖ್ಯಮಂತ್ರಿಗಳು ಅದನ್ನು ಪರಿಶೀಲಿಸಿದಾಗ ರಾಜಭವನದಿಂದಲೇ ಸೋರಿಕೆಯಾಗಿರುವುದು ಗೊತ್ತಾಗಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.