ಮತ್ತೆ ಆರಂಭವಾಗಿರುವ ಬಿಬಿಎಂಪಿಯ ವಾರ್ಡ್ ಮರು ವಿಂಗಡಣೆ ಹಗ್ಗ-ಜಗ್ಗಾಟದ ಪರಿಣಾಮ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆ ಮುಗಿಯುವವರೆಗೆ ಪಾಲಿಕೆಯ ಚುನಾವಣೆ ಮುಂದೂಡುವ ಲಕ್ಷಣ ಕಂಡು ಬರುತ್ತಿದೆ.
ವಿಶ್ವನಾಥ್ ಮಲೇಬೆನ್ನೂರು
ಬೆಂಗಳೂರು (ಜೂ.21): ಮತ್ತೆ ಆರಂಭವಾಗಿರುವ ಬಿಬಿಎಂಪಿಯ ವಾರ್ಡ್ ಮರು ವಿಂಗಡಣೆ ಹಗ್ಗ-ಜಗ್ಗಾಟದ ಪರಿಣಾಮ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆ ಮುಗಿಯುವವರೆಗೆ ಪಾಲಿಕೆಯ ಚುನಾವಣೆ ಮುಂದೂಡುವ ಲಕ್ಷಣ ಕಂಡು ಬರುತ್ತಿದೆ. ಬಿಬಿಎಂಪಿಯ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡು 32 ತಿಂಗಳಾಗಿದ್ದು, ಮುಂಬರುವ ಸೆ.10ಕ್ಕೆ ಬರೋಬ್ಬರಿ ಮೂರು ವರ್ಷ ಪೂರ್ಣಗೊಳ್ಳಲಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಬಿಬಿಎಂಪಿಯ ವಾರ್ಡ್‌ಗಳ ಮರು ವಿಂಗಡಣೆ, ಮೀಸಲಾತಿ ಕಾರಣಗಳನ್ನು ಮುಂದೊಡ್ಡಿ ಪಾಲಿಕೆ ಚುನಾವಣೆಯನ್ನು ಮುಂದೂಡಿಕೊಂಡು ಬರಲಾಗಿತ್ತು.
ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದ ನಾಯಕರು ಅಧಿಕಾರಕ್ಕೆ ಬಂದ ತಕ್ಷಣ ಬಿಬಿಎಂಪಿ ಚುನಾವಣೆ ನಡೆಸುವುದಾಗಿ ಹೇಳಿದ್ದರು. ಆದರೀಗ ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸದ್ಯಕ್ಕೆ ಬಿಬಿಎಂಪಿ ಚುನಾವಣೆ ನಡೆಸುವ ಗೋಜಿಗೆ ಹೋಗುತ್ತಿಲ್ಲ. ಕಳೆದ ಸೋಮವಾರ ವಾರ್ಡ್ ಮರು ವಿಂಗಡಣೆ ಆಕ್ಷೇಪಿಸಿ ನಡೆದಿರುವ ಅರ್ಜಿ ಬಗ್ಗೆ ಹೈಕೋರ್ಚ್‌ನಲ್ಲಿ ನಡೆದ ವಿಚಾರಣೆ ವೇಳೆ ಸರ್ಕಾರದ ಅಡ್ವೋಕೇಟ್ ಜನರಲ್ ವಾರ್ಡ್ ಮರು ವಿಂಗಡಣೆಯಲ್ಲಿ ಕಂಡು ಬಂದಿರುವ ಲೋಪಗಳನ್ನು ಸರಿಪಡಿಸಲು ಕಾಲಾವಕಾಶ ಕೋರಿರುವ ಮನವಿಗೆ ಹೈಕೋರ್ಚ್ 12 ವಾರ ಅವಕಾಶ ನೀಡಿದೆ.
ಹೈನೋದ್ಯಮ ಅಭಿವೃದ್ಧಿಗೆ ಸರ್ಕಾರ ಕ್ರಮಕೈಗೊಳ್ಳಲಿ: ಎಚ್.ಡಿ.ಕುಮಾರಸ್ವಾಮಿ ಸಲಹೆ
ಕನಿಷ್ಠ ಐದು ತಿಂಗಳು ಬೇಕು: ಬಿಬಿಎಂಪಿಯ ವಾರ್ಡ್ ಮರು ವಿಂಗಡಣೆ ಅಂತಿಮ ರೂಪಕ್ಕೆ ಬರಲು ಯಾವುದೇ ಅಡೆತಡೆಗಳು ಎದುರಾಗದಿದ್ದರೆ, ಕನಿಷ್ಠ ಐದು ತಿಂಗಳು ಬೇಕಾಗಲಿದೆ. ಈಗಾಗಲೇ ಸರ್ಕಾರ ವಾರ್ಡ್‌ಗಳ ಮರು ವಿಂಗಡಣೆಗೆ 12 ವಾರ ಕಾಲಾವಕಾಶ ಪಡೆದುಕೊಂಡಿದೆ. ಈ ಅವಧಿಯಲ್ಲಿ ವಾರ್ಡ್ ಮರು ವಿಂಗಡಣೆಗೆ ರಾಜ್ಯ ಸರ್ಕಾರ ಅಧಿಕಾರಿಗಳನ್ನು ನಿಯೋಜಿಸಿ ಸಮಿತಿ ರಚಿಸಬೇಕು. ಸಮಿತಿಯ ವಾರ್ಡ್ ಮರು ವಿಂಗಡಣೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ವಾರ್ಡ್ ಮರು ವಿಂಗಡಣೆಯ ಕರಡು ರಾಜ್ಯಪತ್ರ ಹೊರಡಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಪಡೆಯಬೇಕು. ಈ ಪ್ರಕ್ರಿಯೆಗೆ ಕನಿಷ್ಠ 30 ದಿನ ನೀಡಬೇಕಿದೆ. ಅದಾದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಬೇಕು.
ನಂತರ ಮೀಸಲಾತಿ ನಿಗದಿಪಡಿಸಿ ಆಕ್ಷೇಪಣೆ ಆಹ್ವಾನಿಸಬೇಕು. ಆಕ್ಷೇಪಣೆ ಸಲ್ಲಿಕೆಗೆ ಕನಿಷ್ಠ ಎರಡು ವಾರ ಸಾರ್ವಜನಿಕರಿಗೆ ಸಮಯ ನೀಡಬೇಕು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಐದು ತಿಂಗಳು ಬೇಕಾಗುತ್ತದೆ. ಇಷ್ಟಾಗುವಷ್ಟರಲ್ಲಿ ಲೋಕಸಭಾ ಚುನಾವಣೆ ತಯಾರಿಗೆ ರಾಜಕೀಯ ಪಕ್ಷಗಳಿಗೆ ಆರು ತಿಂಗಳು ಉಳಿಯಲಿದೆ. ಇಂತಹ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆ ಬಗ್ಗೆ ರಾಜಕೀಯ ಪಕ್ಷಗಳು ಪಾಲಿಕೆ ಚುನಾವಣೆ ಎದುರಿಸಲು ಸಜ್ಜಾಗುವುದು ಅನುಮಾನವಾಗಿದೆ.
ಒಂದು ವೇಳೆ ಚುನಾವಣೆ ನಡೆಸಿ ಆಡಳಿತ ಪಕ್ಷಕ್ಕೆ ಸೋಲಾದರೆ, ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಸಾಹಸಕ್ಕೆ ಆಡಳಿತ ಪಕ್ಷ ಕೈ ಹಾಕುವುದು ಅನುಮಾನವಾಗಿದೆ. ಹಾಗಾಗಿ, ಈ ವರ್ಷ ಬಿಬಿಎಂಪಿ ಚುನಾವಣೆ ನಡೆಯುವುದು ಗ್ಯಾರಂಟಿ ಇಲ್ಲ ಎನ್ನಲಾಗುತ್ತಿದೆ. ಈ ಬೆಳವಣಿಗೆ ಗಮನಿಸಿದರೆ, ವ್ಯವಸ್ಥಿತವಾಗಿ ಬಿಬಿಎಂಪಿಯ ಚುನಾವಣೆಯನ್ನು ಲೋಕಸಭಾ ಚುನಾವಣೆವರೆಗೆ ಮುಂದೂಡುವ ತಂತ್ರಗಾರಿಕೆ ಕಂಡು ಬರುತ್ತಿದೆ. ಈ ಹಿಂದೆ ಬಿಜೆಪಿ ಮಾಡಿದ ತಂತ್ರವನ್ನೇ ಇದೀಗ ಕಾಂಗ್ರೆಸ್ ಮುನ್ನೆಡೆಸಿಕೊಂಡು ಹೋಗುತ್ತಿದೆ ಎಂಬ ಮಾತುಗಳು ಬಿಬಿಎಂಪಿ ಆವರಣದಲ್ಲಿ ಕೇಳಿ ಬರುತ್ತಿವೆ.
ವಾರ್ಡ್ ಹೆಚ್ಚಳ ಖಚಿತ: 198ರಿಂದ 243ಕ್ಕೆ ವಾರ್ಡ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಇದೀಗ ಕಾಂಗ್ರೆಸ್ ಸರ್ಕಾರ ಮತ್ತೆ ವಾರ್ಡ್ ಮರು ವಿಂಗಡಣೆ ಮಾಡಲು ಮುಂದಾಗಿದೆ. 2011ರ ಜನಗಣತಿಯ ನಗರದ ಜನಸಂಖ್ಯೆಗಿಂತ ನಗರದ ಮತದಾರರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಮತದಾರ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ವಾರ್ಡ್ ಮರು ವಿಂಗಡಣೆ ಮಾಡಲು ಚಿಂತನೆ ನಡೆಸಲಾಗಿದೆ. ಮೂಲಗಳ ಮಾಹಿತಿ ಪ್ರಕಾರ ವಾರ್ಡ್ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಬಿಬಿಎಂಪಿ ಕಾಯ್ದೆಯಲ್ಲಿ ಸದ್ಯ 250 ವಾರ್ಡ್ ರೂಪಿಸುವುದಕ್ಕೆ ಮಾತ್ರ ಅವಕಾಶವಿದೆ. ಅಗತ್ಯ ಬಿದ್ದರೆ, ಕಾಯ್ದೆಗೆ ತಿದ್ದುಪಡಿ ತಂದು 250ಕ್ಕಿಂತ ಹೆಚ್ಚಿನ ವಾರ್ಡ್‌ಗಳನ್ನು ರೂಪಿಸುವ ಸಾಧ್ಯತೆ ಇದೆ.
ಸಂಸದ ಡಿ.ಕೆ.ಸುರೇಶ್ಗೆ ನೋವು, ಬೇಸರ, ಆತಂಕ ಕಾಡುತ್ತಿದೆಯಾ!
ರಾಜಕೀಯ ಉದ್ದೇಶದಿಂದ ಹೆಚ್ಚಿನ ಸ್ಥಾನ ಗೆಲ್ಲಬೇಕೆಂಬ ಏಕೈಕ ಉದ್ದೇಶದಿಂದ ಅಂದಿನ ಬಿಜೆಪಿ ಸರ್ಕಾರ ಬಿಬಿಎಂಪಿಯನ್ನು 243 ವಾರ್ಡ್‌ಗಳಾಗಿ ಮರು ವಿಂಗಡಣೆ ಮಾಡಿದೆ. ಇದು ನಗರದ ಸಮಗ್ರ ಅಭಿವೃದ್ಧಿ ಅಡ್ಡಿಯಾಗಲಿದೆ. ಹೀಗಾಗಿ, ವಾರ್ಡ್‌ಗಳನ್ನು ಪುನರ್ ವಿಂಗಡಣೆ ಮಾಡುವುದು ಅನಿವಾರ್ಯವಾಗಿದೆ. ಆರ್ಥಿಕ, ಸಾಮಾಜಿಕ ದೃಷ್ಟಿಕೋನದಲ್ಲಿ ವಾರ್ಡ್ ಪುನರ್ ವಿಂಗಡಣೆ ಮಾಡಬೇಕಾಗಲಿದೆ.
-ಪಿ.ಆರ್.ರಮೇಶ್, ಮಾಜಿ ಮೇಯರ್.