ಇಡೀ ರಾಜ್ಯಾದ್ಯಂತ ಸುದ್ದಿಯಾಗಿದ್ದ ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಉಡುಪಿ, (ಫೆ.27): ಹೊನ್ನಾವರದ ಪರೇಶ ಮೇಸ್ತ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಬಿಜೆಪಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಕರಾವಳಿ ಭಾಗದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಸದ್ದು ಮಾಡಿದ ಹೊನ್ನಾವರದ ಪರೇಶ ಮೇಸ್ತ ಅನುಮಾನಾಸ್ಪದ ಸಾವಿನ ಬಗ್ಗೆ ನ್ಯಾಯ ಕೊಡಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಿಬಿಐಗೆ ಶಿಫಾರಸ್ಸು ಮಾಡಿತ್ತು, ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ, ಅವರಿಗೆ ತನಿಖೆ ನಡೆಸಲು ಏನು ಕಷ್ಟ? ಎಂದು ಕೆಪಿಸಿಸಿ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಪರೇಶ ಮೇಸ್ತ ಪ್ರಕರಣ: ಸಿಬಿಐ ತನಿಖೆ ಆರಂಭ
ಸಾವಿನ ಪ್ರಕರಣದಲ್ಲಿ ಬಿಜೆಪಿಯವರೇ ಭಾಗಿಯಾಗಿದ್ದಾರೆ ಅನ್ನುವ ಅನುಮಾನಗಳು ಇದ್ದು, ಈ ಪ್ರಕರಣವನ್ನು ಅವರು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವುದೇ ಸಾಕ್ಷಿಯಾಗಿದೆ. ನನ್ನ ಮೇಲೆ ಸಿಬಿಐ ತನಿಖೆ ಸೇರಿದಂತೆ ಉಳಿದೆಲ್ಲಾ ಪ್ರಕರಣಗಳನ್ನು ತುರ್ತಾಗಿ ಮಾಡುತ್ತೀರಿ, ಆದರೆ ಮೇಸ್ತ ಪ್ರಕರಣದಲ್ಲಿ ಏಕೆ ವಿಳಂಬ ಧೋರಣೆ ಎಂದರು.
2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಕೋಮುಗಲಭೆ ಸಂದರ್ಭದಲ್ಲಿ ಪರೇಶ್ ಮೇಸ್ತ ನಿಗೂಢವಾಗಿ ಸಾವನ್ನಪ್ಪಿದ್ದ. ಸಾವಿನ ಕುರಿತಂತೆ ಪರೇಶ್ ಮೇಸ್ತ ಪಾಲಕರು ಹಾಗೂ ಸಂಬಂಧಿತರು ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಈ ಪ್ರಕರಣ ರಾಜ್ಯಾದ್ಯಂತೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು.