Jan Swaraj Yatra| ಸಿದ್ದು, ಡಿಕೆಶಿ ತಿಕ್ಕಾಟದ ಮಧ್ಯೆ ಸಿಎಂ ಆಗಲು ಪರಮೇಶ್ವರ್‌ ಯತ್ನ: ಶೆಟ್ಟರ್‌

By Kannadaprabha NewsFirst Published Nov 22, 2021, 7:13 AM IST
Highlights

*  ಪ್ರತಿಪಕ್ಷಗಳಿಗೆ ಎಂಎಲ್ಸಿ ಅಭ್ಯರ್ಥಿಗಳೇ ಇಲ್ಲ: ಜಗದೀಶ್‌ ಶೆಟ್ಟರ್‌ ಲೇವಡಿ
*  ಜನ ಸ್ವರಾಜ್‌ ಸಮಾರೋಪ
*  ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಟೀಕಾ ಪ್ರಹಾರ
 

ಬೆಂಗಳೂರು(ನ.22):  ವಿಧಾನ ಪರಿಷತ್‌ ಚುನಾವಣೆಗೆ(Vidhan Parishat Election) ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಹೀಗಾಗಿ, ನಾಮಪತ್ರ ಸಲ್ಲಿಕೆಗೆ ಎರಡು ದಿನ ಬಾಕಿ ಉಳಿದರೂ ಇದುವರೆಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ ಎಂದು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌(Jagadish Shettar) ಲೇವಡಿ ಮಾಡಿದ್ದಾರೆ.

ಭಾನುವಾರ ನಗರದ ಕೆಂಗೇರಿ ಬಳಿಯ ಸಾಯಿ ಪ್ಯಾಲೇಸ್‌ನಲ್ಲಿ ತಮ್ಮ ನೇತೃತ್ವದ ಜನ ಸ್ವರಾಜ್‌(JajSwaraj) ಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌(Congress) ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಜೆಡಿಎಸ್‌(JDS) ಈಗಾಗಲೇ ಅಸ್ತಿತ್ವ ಕಳೆದುಕೊಂಡಿದೆ. ಮುಂದೆ ಬಿಜೆಪಿಗೆ ಮಾತ್ರ ಭವಿಷ್ಯ ಇದೆ ಎಂದರು.

ಕಾಂಗ್ರೆಸ್‌ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ನಾಯಕತ್ವ ಸಹಿಸುವುದಕ್ಕೆ ಆಗುತ್ತಿಲ್ಲ. ಕಾಂಗ್ರೆಸ್‌ ಪಕ್ಷ ನಶಿಸುತ್ತಿದೆ. ಪಂಜಾಬ್‌(Punjab), ರಾಜಸ್ಥಾನದಲ್ಲಿ(Rajasthan) ಮಾತ್ರ ಕಾಂಗ್ರೆಸ್‌ ಅಧಿಕಾರದಲ್ಲಿ ಇದೆ. ಕಾಂಗ್ರೆಸ್‌ ಪಕ್ಷದವರು ಅಧಿಕಾರ ಪಡೆಯುವ ಭ್ರಮೆಯಲ್ಲಿದ್ದಾರೆ. ಆದರೆ, ಅದು ಸಾಕಾರವಾಗುವುದಿಲ್ಲ. ಬಿಜೆಪಿ ಮುಂದೆಯೂ ಅಧಿಕಾರಕ್ಕೆ ಬರುತ್ತದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ(Siddaramaiah) ವರ್ಸಸ್‌ ಡಿ.ಕೆ.ಶಿವಕುಮಾರ್‌(DK Shivakumar) ಎಂಬ ಸನ್ನಿವೇಶವಿದೆ. ಇವರ ನಡುವೆ ಡಾ. ಜಿ.ಪರಮೇಶ್ವರ್‌(G Parameshwara) ಮುಖ್ಯಮಂತ್ರಿಯಾಗಲು(Chief Minister) ಪ್ರಯತ್ನ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.

Karnataka Rain: 'ನಿಮ್ಮದು ಜನಸ್ವರಾಜ್ ಅಲ್ಲ, ಜನಬರ್ಬಾದ್ ಯಾತ್ರೆ'

ಬಿಜೆಪಿ ನೋಡಿ ಕಾಂಗ್ರೆಸ್‌ ಐಸಿಯುಗೆ: ಶೆಟ್ಟರ್‌

ವಿಪಕ್ಷ ಸ್ಥಾನದಲ್ಲೂ ಕೂರಲು ಸಾಧ್ಯವಾಗದೆ ಕಾಂಗ್ರೆಸ್‌ ಮುಳುಗುತ್ತಿರುವ ಹಡುಗಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಟೀಕಿಸಿದರು. ದೇಶದಲ್ಲಿ ಮೋದಿ, ರಾಜ್ಯದಲ್ಲಿ ಬೊಮ್ಮಾಯಿ(Basavaraj Bommai) ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಪಾರದರ್ಶಕವಾಗಿ, ಕಳಂಕರಹಿತ ಅಧಿ​ಕಾರ ನೀಡುತ್ತಿದೆ. ದೇಶದಲ್ಲಿ ಅತಿ ಹೆಚ್ಚಿನ ಸಂಸದರು, ಶಾಸಕರನ್ನು ಹೊಂದಿರುವಂತಹ ಪಕ್ಷ ಬಿಜೆಪಿ ಆಗಿದ್ದು, ಸುಮಾರು 45 ಸಾವಿರ ಸದಸ್ಯರು ಗ್ರಾಪಂ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ್ದಾರೆ. ದೇಶದಲ್ಲಿ 19 ಕೋಟಿ ಬಿಜೆಪಿ ಸದಸ್ಯತ್ವವನ್ನು ಹೊಂದಿರುವ ದಾಖಲೆ ಇದೆ. ಆದ್ದರಿಂದ ಬಿಜೆಪಿ ಪಕ್ಷದ ಈ ನಾಗಾಲೋಟವನ್ನು ಗಮನಿಸಿ 100 ವರ್ಷದ ಇತಿಹಾಸವುಳ್ಳ ಕಾಂಗ್ರೆಸ್‌ ಐಸಿಯು ಸೇರಿದ್ದು, ದೇಶದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಮಾತನಾಡಿ, ಕೆಲವು ರಾಜಕೀಯ ಪಕ್ಷಗಳು ಡಿಎನ್‌ಎ ಮೂಲಕವೇ ವಾರಸುದಾರಿಕೆ ಪಡೆದುಕೊಳ್ಳುತ್ತವೆ. ಕಾಂಗ್ರೆಸ್ಸಿಗೆ ಮೊದಲು ನೆಹರು. ಬಳಿಕ ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕ. ರಾಜ್ಯದಲ್ಲೂ ಒಂದು ರಾಜಕೀಯ ಪಕ್ಷವಿದೆ. ದೊಡ್ಡ ಗೌಡರು, ಸಣ್ಣ ಗೌಡರು, ಮರಿ ಗೌಡರು. ಡಿಎನ್‌ಎ ಮೂಲಕವೇ ಪಕ್ಷದ ಮಾಲಿಕತ್ವ ಹೊಂದುತ್ತಾರೆ. ಆದರೆ ಬಿಜೆಪಿಯಲ್ಲಿ ಕಾರ್ಯಕರ್ತರೇ ಮಾಲೀಕರು. ಧ್ವಜ ಕಟ್ಟಿದವನು ಬಿಜೆಪಿಯಲ್ಲಿ ಪ್ರಧಾನಿ ಆಗಬಹುದು. ವಾಜಪೇಯಿ, ಅಡ್ವಾಣಿ ಅವರ ಕುಟುಂಬದವರು ಯಾರಾದರೂ ಪಕ್ಷ ಮುನ್ನಡೆಸುತ್ತಿದ್ದಾರಾ? ಹಾಗೆಯೇ ಮುಂದೆ ನರೇಂದ್ರಮೋದಿ ಮತ್ತು ಅಮಿತ್‌ ಶಾ ಕುಟುಂಬ ಕೂಡ ರಾಜಕೀಯಕ್ಕೆ ಬರುವುದಿಲ್ಲ. ಇದನ್ನು ಬರೆದಿಟ್ಟುಕೊಳ್ಳಿ ಎಂದು ತಿಳಿಸಿದರು.

ಸಮಾರಂಭದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ರಾಜ್ಯದ ಸಚಿವರಾದ ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ, ಮುನಿರತ್ನ, ಶಾಸಕ ಎಸ್‌.ಆರ್‌.ವಿಶ್ವನಾಥ್‌, ವಿಧಾನಪರಿಷತ್‌ ಸದಸ್ಯ ತುಳಸಿ ಮುನಿರಾಜುಗೌಡ ಮತ್ತಿತರರು ಉಪಸ್ಥಿತರಿದ್ದರು.

Karnataka Politics| ನಾವೇನ್‌ ಕುಮಾರಸ್ವಾಮಿ ಕೇಳಿ ಕೆಲಸ ಮಾಡಬೇಕಾ?: ಆರಗ ಜ್ಞಾನೇಂದ್ರ

29 ಜಿಲ್ಲೆಗಳ ಪರ್ಯಟನೆ ಮುಗಿಸಿದ ಬಿಜೆಪಿ ಯಾತ್ರೆ

ಪಕ್ಷ ಸಂಘಟನೆ ಮತ್ತು ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಸೇರಿದಂತೆ ನಾಲ್ವರು ಹಿರಿಯ ಮುಖಂಡರ ನೇತೃತ್ವದಲ್ಲಿ ನಾಲ್ಕು ದಿನಗಳ ಕಾಲ ನಡೆದ ಜನಸ್ವರಾಜ್‌ ಯಾತ್ರೆ ಭಾನುವಾರ 5 ಜಿಲ್ಲೆಗಳಲ್ಲಿ ನಡೆದಿದ್ದು, ಒಟ್ಟಾರೆ 29 ಜಿಲ್ಲೆಗಳನ್ನು ತಲುಪಿದಂತಾಗಿದೆ. 

ಈ ವೇಳೆ ವಿರೋಧಪಕ್ಷಗಳಾದ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿರುವ ಬಿಜೆಪಿಗರು, ಕಾಂಗ್ರೆಸ್‌ ಮುಳುಗುತ್ತಿರುವ ಹಡಗಾಗಿದ್ದು ಯಾವುದೋ ಒಂದು ವಿಷಯಕ್ಕೆ ಸ್ವಲ್ಪ ರಾಜ್ಯದಲ್ಲಿ ಉಸಿರಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಜೊತೆಗೆ ಜೆಡಿಎಸ್‌ ಅನ್ನೂ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಆ ಪಕ್ಷದ್ದು ಕುಟುಂಬ ರಾಜಕಾರಣ ಎಂದು ಜರಿದಿದ್ದಾರೆ.
 

click me!