ಕೂಡಲಸಂಗಮಶ್ರೀಗೆ ಕಾಂಗ್ರೆಸ್‌ ನಾಯಕರಿಂದ ಬೆದರಿಕೆ: ರಾತ್ರಿ ವೇಳೆ ಕುಡಿದು ಫೋನ್ ಮಾಡಿ ಹಿಂಸೆ ಕೊಡ್ತಾರಂತೆ!

Published : Apr 04, 2023, 02:06 PM IST
ಕೂಡಲಸಂಗಮಶ್ರೀಗೆ ಕಾಂಗ್ರೆಸ್‌ ನಾಯಕರಿಂದ ಬೆದರಿಕೆ: ರಾತ್ರಿ ವೇಳೆ ಕುಡಿದು ಫೋನ್ ಮಾಡಿ ಹಿಂಸೆ ಕೊಡ್ತಾರಂತೆ!

ಸಾರಾಂಶ

ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್‌ ನಾಯಕರು ಮದ್ಯಪಾನ ಮಾಡಿ ರಾತ್ರಿ ವೇಳೆ ಪಂಚಮಸಾಲಿ ಪೀಠದ ಅಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಕರೆ ಮಾಡಿ ಅಗೌರವದಿಂದ ಮಾತನಾಡಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಆರೋಪಿಸಿದ್ದಾರೆ.

ಬೆಂಗಳೂರು (ಏ.4) : ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್‌ ನಾಯಕರು ಮದ್ಯಪಾನ ಮಾಡಿ ರಾತ್ರಿ ವೇಳೆ ಪಂಚಮಸಾಲಿ ಪೀಠದ ಅಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಕರೆ ಮಾಡಿ ಅಗೌರವದಿಂದ ಮಾತನಾಡಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌(Arvind bellad) ಆರೋಪಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರು ಮದ್ಯಪಾನ ಮಾಡಿ ರಾತ್ರಿ ಸ್ವಾಮೀಜಿಗೆ ಕರೆ ಮಾಡಿ ಅಗೌರವದಿಂದ ಮಾತನಾಡುವ ಮುಖಾಂತರ ಪಂಚಮಸಾಲಿ ಸಮಾಜಕ್ಕೆ ಅಗೌರವ ತರುವ ಕೆಲಸ ಮಾಡಿದ್ದಾರೆ. ಸ್ವಾಮೀಜಿ ಅವರ ಮನಸ್ಸನ್ನು ಬಹಳ ನೋಯಿಸಿದ್ದಾರೆ ಎಂದು ದೂರಿದರು.

ಕೆಲವರ ಒತ್ತಡ ತಾಳಲಾರದೇ ಕಣ್ಣೀರಿಟ್ಟ ಶ್ರೀಗಳು: ಸಂಗಮೇಶ ಬಬಲೇಶ್ವರ ಆರೋಪ

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌(CC Patil) ಮಾತನಾಡಿ, ಕಾಂಗ್ರೆಸ್‌ನ ಕೆಲ ನಾಯಕರು ಮದ್ಯಪಾನ ಮಾಡಿ ಮಧ್ಯರಾತ್ರಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ(Basava Jaya Mrityunjaya Swamiji)ಗೆ ಕರೆ ಮಾಡಿ ಹಿಂಸೆ ನೀಡಿದ್ದಾರೆ. ನಮ್ಮನ್ನು ಕೇಳದೆ ಏಕೆ ಮೀಸಲಾತಿ ಒಪ್ಪಿಕೊಂಡಿರಿ ಎಂದು ಮಾನಸಿಕ ಕಿರುಕಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಸ್ವಾಮೀಜಿಗೆ ಭದ್ರತೆ ನೀಡಿ: ಸಿಎಂ ಸೂಚನೆ

ಪಂಚಮಸಾಲಿ ಪೀಠದ ಅಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಸೂಕ್ತ ಪೊಲೀಸ್‌ ಭದ್ರತೆ ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಮತ್ತು ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ಅವರ ಮನವಿ ಮೇರೆಗೆ ಮುಖ್ಯಮಂತ್ರಿಗಳು ಸ್ವಾಮೀಜಿಗಳ ಭದ್ರತೆಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶ್ರೀಗಳ ಮುಂದೆ ಅಸಭ್ಯವಾಗಿ ವರ್ತನೆ ಮಾಡಿಲ್ಲ: ಕಾಶಪ್ಪನವರ

ಬೆಳಗಾವಿ : ಕೆಲವರು ಕೂಡಲಸಂಗಮದ ಶ್ರೀಗಳಿಗೆ ನಾನು ಜೋರು ಮಾಡಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಶ್ರೀಗಳ ಮುಂದೆ ಅಸಭ್ಯವಾಗಿ ವರ್ತನೆ ಮಾಡಿಲ್ಲ. ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಡೆಯನ್ನು ವಿರೋಧ ವ್ಯಕ್ತಪಡಿಸುತ್ತೇನೆ ಎಂದು ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ(Vijayananda kasheppanavar) ಹೇಳಿದರು.

ನಗರದ ಚನ್ನಮ್ಮ ವೃತ್ತದಲ್ಲಿ ಸೋಮವಾರ ಪಂಚಮಸಾಲಿಗೆ ಸರ್ಕಾರ ನೀಡಿರುವ 2ಡಿ ಮೀಸಲಾತಿ ಗೆಜೆಟ್‌ ಪತ್ರಕ್ಕೆ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಪಂಚಮಸಾಲಿ ಮುಖಂಡರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಅವರು, ಹಿಂದುಳಿದ ಆಯೋಗದ ಮಧ್ಯಂತರ ವರದಿಯಿಂದ ಮೀಸಲಾತಿ ನೀಡಿದ್ದಾರೆ. ಮಧ್ಯಂತರ ವರದಿಯಿಂದ ಮೀಸಲಾತಿ ಕೊಡುವುದಕ್ಕೆ ಬರುವುದಿಲ್ಲ. ಕಾನೂನಿನಲ್ಲಿ ಆ ಅವಕಾಶವಿಲ್ಲ. ಆದರೆ, ಇವರು ಮೀಸಲಾತಿ ನೀಡಿದ್ದಾರೆ. ಇದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಮೀಸಲಾತಿ ವಿಚಾರದಲ್ಲಿ ನಮ್ಮ ಶ್ರೀಗಳಿಗೆ ಒತ್ತಾಯ ಮಾಡಿ ಪ್ರತಿಭಟನೆ ಕೈಬಿಡುವಂತೆ ಮಾಡಿದ್ದಾರೆ. ಯಾರು ಎಂಬುವುದು ಮುಂದೊಂದು ದಿನ ಹೇಳುತ್ತೇನೆ ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಸರ್ಕಾರದ ಆದೇಶವನ್ನು ನಾವು ಒಪ್ಪುವುದಿಲ್ಲ. ಬಿಜೆಪಿ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಧೋರಣೆಯನ್ನು ನಾವೆಲ್ಲರೂ ಖಂಡಿಸಬೇಕು. ಮುಂದೆ ಸರ್ಕಾರ ಬದಲಾಗುತ್ತದೆ. ನಮಗೆ ನ್ಯಾಯ ಸಿಗುತ್ತೆ. ಕಳೆದ ಎರಡೂವರೆ ವರ್ಷಗಳಿಂದ ಹೋರಾಟ ಮಾಡಿದ್ದರೂ ನಮಗೆ ಸೂಕ್ತ ನ್ಯಾಯ ಸಿಕ್ಕಿಲ್ಲ. ಕಳೆದ ಮಾ.27ರಂದು 2 ಸುತ್ತೋಲೆ ಹೊರಡಿಸಿದ್ದಾರೆ ಇದು ಖಂಡನೀಯ. 2ಡಿ ಮೀಸಲಾತಿಯಲ್ಲಿ 52 ಜಾತಿಗಳಿವೆ. ಎಲ್ಲರಿಗೂ ಸೇರಿಸಿ ಘೋಷಣೆ ಮಾಡಿದ್ದಾರೆ. ಪಂಚಮಸಾಲಿ ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿ ಕೇಳಿದ್ದೆವು. ಕೇವಲ ಶೇ.2 ಮೀಸಲಾತಿ ಹೆಚ್ಚಳ ಮಾಡುವ ನಾಟಕ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮತ್ತೊಬ್ಬರ ಮೀಸಲಾತಿ ಕಸಿದುಕೊಳ್ಳುವ ಕೆಟ್ಟವರು ಲಿಂಗಾಯತರಲ್ಲ. ಕೆಲವು ರಾಜಕೀಯ ಕುತಂತ್ರಗಳು ನಾಟಕ ಮಾಡಿದ್ದಾರೆ. ವಿಜಯೋತ್ಸವ ಆಚರಣೆ ಮಾಡುತ್ತೇವೆ ಎನ್ನುತ್ತಾರೆ. ನಾವು ಇದನ್ನು ಒಪ್ಪುವುದಿಲ್ಲ ವಿಜಯೋತ್ಸವ ಮಾಡುವುದಿಲ್ಲ. ಸ್ವಾಮೀಜಿ ದುಃಖದಿಂದ ಕಣ್ಣೀರು ಹಾಕಿದ್ದಾರೆ. ಅವರಿಗೆ ಸಂತೋಷ ಆಗಿಲ್ಲ. ಸ್ವಾಮೀಜಿ ನಮ್ಮ ಜತೆ ಇದ್ದಾರೆ. ಮುಂದೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಪಂಚಮಸಾಲಿ ಹೋರಾಟಕ್ಕೆ ಎಂ.ಬಿ.ಪಾಟೀಲ ಬೆಂಬಲ

ಮಾಜಿ ಸಚಿವ ವಿನಯ ಕುಲಕರ್ಣಿ, ಕಾಶಪ್ಪನವರ ಕುಡಿದು ಸ್ವಾಮೀಜಿ ಬಗ್ಗೆ ಮಾತನಾಡಿದ್ದಾರೆ ಎಂಬ ಸಿ.ಸಿ.ಪಾಟೀಲ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಅವರು, ಸಿ.ಸಿ.ಪಾಟೀಲ ಬಗ್ಗೆ ವಾಗ್ದಾಳಿ ನಡೆಸಿದರು. ಇವರು ಕುಡಿಯೋದಿಲ್ಲವಾ? ಸಿ.ಸಿ. ಪಾಟೀಲರ ಮನೆಯಲ್ಲಿ ದಿನಾಲೂ ಬೊಮ್ಮಾಯಿ ಏನು ಮಾಡುತ್ತಾರೆ ಚೆಕ್‌ ಮಾಡಿ ಎಂದರು.

ಅಪಹಾಸ್ಯವಾಗಿ ಮಾತನಾಡುವುದು ಯಾವುದೇ ನಾಯಕರಿಗೆ ಗೌರವ ತರುವಂತದಲ್ಲ. ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಚೆಲ್ಲಾಟ ಆಡಿದೆ. ಈ ಮೀಸಲಾತಿ ಚುನಾವಣೆ ಸಲುವಾಗಿ ಮಾಡಿರುವ ಕುತಂತ್ರ. ನಾವು ವಿಜಯೋತ್ಸವ ಆಚರಣೆ ಮಾಡುವುದಿಲ್ಲ, ಇದನ್ನು ತಿರಸ್ಕರಿಸುತ್ತೇವೆ.

- ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕರು, ಹುನಗುಂದ ಮತಕ್ಷೇತ್ರ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ