ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಪಂಚಮಸಾಲಿ ಸಮುದಾಯ 2ಎ ಮೀಸಲಾತಿ ಕೇಳಿದರೆ 2ಸಿ, 2ಡಿ ಎಂಬ ಹೊಸ ಪ್ರವರ್ಗ ಸೃಷ್ಟಿಸಿದ್ದು ಸಂವಿಧಾನ ಬಾಹಿರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸುವರ್ಣ ವಿಧಾನಸೌಧ (ಡಿ.13): ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಪಂಚಮಸಾಲಿ ಸಮುದಾಯ 2ಎ ಮೀಸಲಾತಿ ಕೇಳಿದರೆ 2ಸಿ, 2ಡಿ ಎಂಬ ಹೊಸ ಪ್ರವರ್ಗ ಸೃಷ್ಟಿಸಿದ್ದು ಸಂವಿಧಾನ ಬಾಹಿರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಶೂನ್ಯವೇಳೆಯಲ್ಲಿ ಉತ್ತರಿಸಿದ ಅವರು, ಯಾರನ್ನು ಸಮಾಧಾನ ಪಡಿಸಲು ಬೊಮ್ಮಾಯಿ ಇದನ್ನು ಮಾಡಿದರೋ ಗೊತ್ತಿಲ್ಲ. ನನ್ನ ಪ್ರಕಾರ ಇದು ರಾಜಕೀಯಕ್ಕಾಗಿ ಮಾಡಿದ ಆದೇಶ. ಮುಸ್ಲಿಂ ಸಮುದಾಯವನ್ನು ನಮ್ಮ ವಿರುದ್ಧ, ಹಿಂದೂಗಳ ವಿರುದ್ಧ ಎತ್ತಿಕಟ್ಟಲು 2ಎ ಪ್ರವರ್ಗದಡಿ ಮುಸ್ಲಿಮರಿಗಿದ್ದ ಶೇ.4ರಷ್ಟು ಮೀಸಲಾತಿ ರದ್ದು ಮಾಡಿ 2ಸಿ, 2ಡಿ ಪ್ರವರ್ಗ ಸೃಷ್ಟಿಮಾಡುವ ನಿರ್ಧಾರ ಮಾಡಿದರು ಎಂದರು.
ಈ ಆದೇಶದ ವಿರುದ್ಧ ಕೆಲವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ನ್ಯಾಯಾಲಯದ ಮುಂದಿನ ತೀರ್ಮಾನದವರೆಗೆ ತಮ್ಮ ಸರ್ಕಾರದ ಆದೇಶವನ್ನು ಅನುಷ್ಠಾನಗೊಳಿಸುವುದಿಲ್ಲ. 2002ರ ಮೀಸಲಾತಿಯಲ್ಲಿ ನಾವು ಯಾವುದೇ ಬದಲಾವಣೆ ಮಾಡುವುದಿಲ್ಲ. 2ಎ ಅಡಿ ಬರುವ ಯಾವುದೇ ಸಮುದಾಯವನ್ನು ಕೈಬಿಡುವುದಿಲ್ಲ, ಹೊಸದಾಗಿ ಯಾರನ್ನೂ ಸೇರಿಸುವುದೂ ಇಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ. ಈಗ ಪ್ರತಿಪಕ್ಷದಲ್ಲಿ ಕೂತು ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡಿ ಎಂದು ನಾಟಕ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ದರ್ಶನ್‌ಗೆ ಜಾಮೀನು ಸಿಗುತ್ತಾ?: ಇಂದು ಮಧ್ಯಾಹ್ನ ಹೈಕೋರ್ಟ್ ತೀರ್ಪು
ಪಂಚಮಸಾಲಿ ಹೋರಾಟ ನಿರಾಣಿಯಿಂದ ಸೃಷ್ಟಿ: ಪಂಚಮಸಾಲಿ 2ಎ ಹೋರಾಟ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುರುಗೇಶ ನಿರಾಣಿಗೆ ಸಚಿವ ಸ್ಥಾನ ಸಿಗದಿದ್ದಕ್ಕಾಗಿ ಹುಟ್ಟಿಕೊಂಡಿದ್ದು ಎಂದು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಇದಕ್ಕೆ ಹಣಮಂತ ನಿರಾಣಿ, ಡಾ.ಧನಂಜಯ ಸರ್ಜಿ ಮತ್ತಿತರ ಬಿಜೆಪಿ ಸದಸ್ಯರು, ಈ ಹೋರಾಟ 30 ವರ್ಷಗಳ ಹಿಂದಿನಿಂದ ಇದೆ. ಯಾರನ್ನೂ ಮಂತ್ರಿ ಮಾಡಲು ಹುಟ್ಟಿಕೊಂಡಿದ್ದಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ, ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಧ್ಯಪ್ರವೇಶಿಸಿ, ಮುಖ್ಯಮಂತ್ರಿಗಳು ಬಹಳ ಬುದ್ಧಿವಂತರು. ಈ ರೀತಿ ದಾರಿತಪ್ಪಿಸಿ ನಮ್ಮನ್ನೇ ಇಬ್ಬಾಗ ಮಾಡುತ್ತಿದ್ದಾರೆ ಎನ್ನುವುದು ನಮ್ಮ ಸದಸ್ಯರ ಹೇಳಿಕೆ. ಹಿಂದೆ ಹಾಗಾಗಿದೆ ಹೀಗಾಗಿದೆ ಎನ್ನುವುದು ಬಿಡಿ. ಈಗ ನೀವು ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡುತ್ತೀರಾ ಇಲ್ಲವಾ ಅದನ್ನು ಹೇಳಿ ಎಂದು ಆಗ್ರಹಿಸಿದರು. ಅದಕ್ಕೆ ಮುಖ್ಯಮಂತ್ರಿ ಅವರು, ನಾನು ಮುರುಗೇಶ ನಿರಾಣಿ ಸೇರಿ ಯಾರ ಹೆಸರನ್ನೂ ಹೇಳುವುದಿಲ್ಲ. ಹಾಗಾದರೆ ನೀವೇ ಹೇಳಿ ನಾರಾಯಣಸ್ವಾಮಿ, 2002ರಲ್ಲೇ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗಗಳನ್ನು ವಿಭಾಗ ಮಾಡಲಾಯಿತಲ್ಲ.
1991ರ ಪೂಜಾ ಸ್ಥಳ ಕಾಯ್ದೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ: ಮಂದಿರ, ಮಸೀದಿ ಸರ್ವೇಗೆ ಸುಪ್ರೀಂ ತಡೆ
ಆವಾಗಲೇ ಯಾಕೆ ಈ ಹೋರಾಟ ಹುಟ್ಟಿಕೊಳ್ಳಲಿಲ್ಲ. ಈ ಹೋರಾಟ ಹುಟ್ಟಿಕೊಂಡಿದ್ದು 2021-22ರಲ್ಲಿ. ಅಲ್ಲಿಯವರೆಗೆ ಯಾಕೆ ಇರಲಿಲ್ಲ ನೀವೇ ಹೇಳಿ ಎಂದು ಪ್ರಶ್ನಿಸಿದರು. ನಾನು 40 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಯಾವ್ಯಾವಾಗ ಏನೇನು ಆರ್ಥಿಕ, ಸಾಮಾಜಿಕ ಚಳವಳಿಗಳು ನಡೆದಿವೆ ಎಂಬುದು ನನಗೂ ಗೊತ್ತು ಎಂದು ಬಿಜೆಪಿಯವರಿಗೆ ತಿರುಗೇಟು ನೀಡಿದರು. ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಶೂನ್ಯವೇಳೆ ಮುಗಿದಿದ್ದಾಗಿ ಪ್ರಕಟಿಸಿದರು. ಇದಕ್ಕೆ ಆಕ್ಷೇಪಿಸಿ, ಸಿಎಂ ಉತ್ತರ ಸಮರ್ಪಕವಾಗಿಲ್ಲ ಎಂದು ದೂರಿ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸಭಾಪತಿಗಳು ಕಲಾಪವನ್ನು ಮುಂದೂಡಿದರು.