
ವಿಧಾನಸಭೆ (ಡಿ.13) : ಎಸ್.ಎಂ.ಕೃಷ್ಣ ಅವರ ಮನೆ ಬಾಗಿಲು ಒದ್ದು ಒಳಹೋಗಿ ಹರಸಾಹಸಪಟ್ಟು ಸಚಿವ ಸ್ಥಾನ ಪಡೆದದ್ದು, ಈ ಮೂಲಕ ಮಂತ್ರಿಗಿರಿಯನ್ನು ಒದ್ದು ತೆಗೆದುಕೊಳ್ಳಬೇಕೆಂಬ ಜ್ಯೋತಿಷಿಯೊಬ್ಬರ ಸಲಹೆ ಪಾಲಿಸಿದ ಕುತೂಹಲದ ಪ್ರಸಂಗವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಮರಿಸಿದ ಪ್ರಸಂಗ ಸದನದಲ್ಲಿ ನಡೆಯಿತು.
ಗುರುವಾರ ಸದನದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕುರಿತು ಗುಣಗಾನ ಮಾಡುವ ವೇಳೆ ಡಿ.ಕೆ.ಶಿವಕುಮಾರ್ ಅವರು ಈ ವಿಚಾರ ಪ್ರಸ್ತಾಪಿಸಿದರು. ಎಸ್.ಎಂ.ಕೃಷ್ಣರೊಂದಿಗೆ ರಾಜಕೀಯವಾಗಿ ಗುರುತಿಸಿಕೊಂಡ ಬಳಿಕ ಪ್ರತಿಹಂತದಲ್ಲೂ ಅವರ ಬೆಂಬಲಕ್ಕೆ ನಾನು ನಿಂತಿದ್ದೆ. ರಾಜ್ಯಸಭಾ ಸದಸ್ಯರಾಗಿದ್ದ ಜಿ.ವೈ.ಕೃಷ್ಣನ್ ಬದಲಾಗಿ ಎಸ್.ಎಂ.ಕೃಷ್ಣ ಅವರಿಗೆ ರಾಜ್ಯಸಭಾ ಟಿಕೆಟ್ ನೀಡಬೇಕೆಂದು ನಾವು ಹಠ ಹಿಡಿದಿದ್ದೆವು.
ಎಸ್ಎಂ ಕೃಷ್ಣ ಸಾವು ನನಗೆ ದುಃಖ ತಂದಿಲ್ಲ, ಸಂತೋಷ ತಂದಿದೆ: ಸಂತಾಪ ಸಭೆಯಲ್ಲಿ ಡಿಕೆಶಿ ಭಾವುಕ ಮಾತು!
ಸದಸ್ಯ ಟಿ.ಬಿ.ಜಯಚಂದ್ರ ಜತೆ ದೆಹಲಿಗೆ ತೆರಳಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರನ್ನು ಭೇಟಿ ಮಾಡಿ ಮಾತುಕತೆಯನ್ನೂ ನಡೆಸಿ ಒಪ್ಪಿಸಿದ್ದೆವು ಎಂದು ಹೇಳಿದರು.ಪಾಂಚಜನ್ಯ ನಡೆಸಿ ಕಾಂಗ್ರೆಸ್ ಬಹುಮತ ಪಡೆದುಕೊಂಡು ಮುಖ್ಯಮಂತ್ರಿಯಾಗುವ ವೇಳೆಯೂ ಸಚಿವ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದನ್ನು ಪಟ್ಟಿ ಮಾಡಿದ್ದೆವು. ಅದರಲ್ಲಿ ನನ್ನ ಮತ್ತು ಟಿ.ಬಿ.ಜಯಚಂದ್ರ ಹೆಸರನ್ನು ಸೇರಿಸಲಾಗಿತ್ತು. ಆದರೆ, ಹೈಕಮಾಂಡ್ ಗೆ ಹೋಗಿ ಅಂತಿಮ ಪಟ್ಟಿ ಬಂದು ರಾಜ್ಯಪಾಲರಿಗೆ ಹೋದಾಗ ನಮ್ಮ ಹೆಸರು ಕೈಬಿಡಲಾಗಿತ್ತು.
ಇದು ಗೊತ್ತಾದಾಗ ನಾನು ಜ್ಯೋತಿಷಿ ದ್ವಾರಕನಾಥ್ ಅವರ ಬಳಿ ಸಚಿವ ಸ್ಥಾನ ಕೈತಪ್ಪಿರುವ ಬಗ್ಗೆ ಹೇಳಿದಾಗ, ಅವರು ‘ಒದ್ದು ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.ಅದರಂತೆ ನಾನು ಎಸ್.ಎಂ.ಕೃಷ್ಣ ಅವರ ಮನೆಗೆ ತೆರಳಿ ಬಾಗಿಲು ಒದ್ದು ಒಳ ಹೋಗಿ ಸಚಿವ ಸ್ಥಾನದಿಂದ ನಮ್ಮ ಹೆಸರು ಕೈತಪ್ಪಿದ ಬಗ್ಗೆ ಪ್ರಶ್ನಿಸಿದೆ. ನಡುರಾತ್ರಿ 2 ಗಂಟೆಯಿಂದ ಮುಂಜಾನೆ 6 ಗಂಟೆವರೆಗೆ ಇದೇ ವಿಚಾರವಾಗಿ ಅವರ ಜತೆಗೆ ಜಗಳ ನಡೆಯಿತು.
ಈ ವೇಳೆ ನಿಮ್ಮ ಜತೆ ಪ್ರತಿಹಂತದಲ್ಲೂ ನಿಂತಿದ್ದು, ಸಚಿವರಾಗದಿದ್ದರೆ ಮುಖ್ಯಮಂತ್ರಿಯಾಗಿ ನೀವು ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದೆ. ಅಂತಿಮವಾಗಿ ಎಸ್.ಎಂ.ಕೃಷ್ಣ ಅವರು ಹೈಕಮಾಂಡ್ ಜತೆ ಮಾತನಾಡಿ ರಾಜ್ಯಪಾಲರಿಗೆ ಕಳುಹಿಸಿದ ಪಟ್ಟಿಯನ್ನು ವಾಪಸ್ ಪಡೆದು ನಮ್ಮ ಹೆಸರು ಸೇರಿಸಿ ಕಳುಹಿಸಿಕೊಟ್ಟರು. ನಂತರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದೆ ಎಂದು ನೆನಪಿಸಿಕೊಂಡರು.
ನುಡಿ ನಮನ: ಚಾಣಾಕ್ಷತೆ, ಸತ್ಯ-ನಿಷ್ಠೆಯಲ್ಲಿ ಶ್ರೀಕೃಷ್ಣನ ಪ್ರತಿರೂಪ ನಮ್ ಕೃಷ್ಣ : ಡಿಕೆ ಶಿವಕುಮಾರ್
ಸಿಎಂ ಸ್ಥಾನವನ್ನೂ ಒದ್ದು ಕಿತ್ತುಕೊಳ್ತೀರಾ?ಸಚಿವ ಸ್ಥಾನದ ರೀತಿ ನೀವು ಮುಖ್ಯಮಂತ್ರಿ ಹುದ್ದೆಯನ್ನೂ ಕಿತ್ತುಕೊಳ್ತೀರಾ? ಮುಖ್ಯಮಂತ್ರಿ ಹುದ್ದೆಯನ್ನು ಯಾವಾಗ ಒದ್ದು ಕಿತ್ತುಕೊಳ್ತೀರಾ? ನಿಮ್ಮ ಜ್ಯೋತಿಷಿ ಇದಕ್ಕೆ ಯಾವಾಗ ಮುಹೂರ್ತ ಫಿಕ್ಸ್ ಮಾಡಿದ್ದಾರೆ?
ಆರ್.ಅಶೋಕ್, ಪ್ರತಿಪಕ್ಷ ನಾಯಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.