
ಹರಿಹರ[ಜ.16]: ಮುರುಗೇಶ್ ನಿರಾಣಿ ಸೇರಿ ಪಂಚಮಸಾಲಿ ಸಮಾಜದ ನಾಲ್ವರಿಗೆ ಸಚಿವ ಸ್ಥಾನದ ಬೇಡಿಕೆ ಇಟ್ಟವಿಚಾರವಾಗಿ ವಚನಾನಂದ ಶ್ರೀಗಳು ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ನಡುವೆ ಹೊತ್ತಿಕೊಂಡಿರುವ ಬೆಂಕಿಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತುಪ್ಪಸುರಿಯೋ ಕೆಲಸ ಮಾಡಿದ್ದಾರೆ. ವಾಲ್ಮೀಕಿ, ಭೋವಿ ಶ್ರೀಗಳು ವಚನಾನಂದ ಶ್ರೀಗಳಿಗೆ ಧೈರ್ಯ ತುಂಬಿದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಕೂಡ ಸ್ವಾಮೀಜಿಗಳ ಬೇಡಿಕೆ ಸರಿಯಾಗಿಯೇ ಇದೆ ಎಂದು ಸಮರ್ಥಿಸಿಕೊಂಡು ಬೆಂಬಲ ಸೂಚಿಸಿದ್ದಾರೆ. ಡಿ.ಕೆ.ಶಿವಕುಮಾರ್ ಬೆಂಬಲ ಸಿಕ್ಕ ಬೆನ್ನಲ್ಲೇ ಶ್ರೀಗಳು ಕೂಡ ತಮ್ಮ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಸಚಿವ ಸ್ಥಾನ ಕೇಳುವುದು ನಮ್ಮ ಹಕ್ಕು ಎಂದು ಮುಖ್ಯಮಂತ್ರಿಗೆ ತಿರುಗೇಟು ನೀಡಿದ್ದಾರೆ.
ನಗರ ಹೊರವಲಯದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ದಶಮಾನೋತ್ಸವ ಹಾಗೂ ವಚನಾನಂದ ಶ್ರೀಗಳ ದ್ವಿತೀಯ ಪೀಠಾರೋಹಣ ಸಮಾರಂಭದಲ್ಲಿ ಬುಧವಾರ ಪಾಲ್ಗೊಂಡಿದ್ದ ಡಿ.ಕೆ.ಶಿವಕುಮಾರ್ ತಮ್ಮ ಭಾಷಣದುದ್ದಕ್ಕೂ ಪಂಚಮಸಾಲಿ ಶ್ರೀಗಳ ನಡೆಯನ್ನು ಸಮರ್ಥಿಸಿಕೊಂಡರಲ್ಲದೆ ಯಡಿಯೂರಪ್ಪ ಹೆಸರೆತ್ತದೆ ಅವರನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಸಮಾಜ ಮತ್ತು ಗುರುಗಳು ಶ್ರಮಕ್ಕೆ ತಕ್ಕ ಫಲ ಕೇಳುವುದು ತಪ್ಪೇ ಎಂದು ಪ್ರಶ್ನಿಸಿದರು.
ತಪ್ಪಾಗಿದ್ರೆ ಹೊಟ್ಟೆಗೆ ಹಾಕೊಳ್ಳಿ: ಬಿಎಸ್‌ವೈ ಬಳಿ ಕ್ಷಮೆಯಾಚಿಸಿದ ಸ್ವಾಮೀಜಿ
ಚುನಾವಣೆ ಸಂದರ್ಭದಲ್ಲಿ ಮಠಗಳಿಗೆ ತೆರಳಿ ಶ್ರೀಗಳ ಪಾದಕ್ಕೆ ಬಿದ್ದು ನಮಗೆ ಸಹಕಾರ ಮತ್ತು ಬೆಂಬಲಿಸುವಂತೆ ಕೋರುತ್ತೇವೆ. ಅವರ ಬೆಂಬಲದಿಂದ ಅಧಿಕಾರಕ್ಕೆ ಬಂದವರು ಸೌಜನ್ಯದಿಂದ ಅವರ ಅಹವಾಲುಗಳನ್ನು ಕೇಳಬೇಕಿರುವುದು ಕರ್ತವ್ಯ. ಆದರೆ ಅಹವಾಲು ಮುಂದಿಡುವುದೇ ತಪ್ಪು ಎಂದು ಭಾವಿಸಿದರೆ ಹೇಗೆ?, ಯಾರಾದರೂ ಅಧಿಕಾರದಲ್ಲಿ ಇದ್ದವರನ್ನು ಕೇಳದೆ ಸೋತವರನ್ನು ಕೇಳಲು ಸಾಧ್ಯವೇ? ರಾಜ್ಯ ಆಳುವ ಅರಸನಿಗೆ ಪ್ರಜೆಗಳ ಮತ್ತು ಸಮಾಜದ ಅಂಕು-ಡೊಂಕು ತಿದ್ದುವ ಕೆಲಸ ಮಾಡುವಂತಹ ಶ್ರೀಗಳ ಮಾತನ್ನು ಶಾಂತಿಯಿಂದ ಕೇಳುವ ವ್ಯವಧಾನ ಇರಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾತಿನ ಚಾಟಿ ಬೀಸಿದರು ಡಿ.ಕೆ.ಶಿವಕುಮಾರ್.
ಒಳ್ಳೆಯ ಸಂದೇಶ ಅಲ್ಲ: ಡಿ.ಕೆ.ಶಿವಕುಮಾರ್ ಬೆನ್ನಲ್ಲೇ ಮಾತನಾಡಿದ ಶ್ರೀಗಳು, ಸಮಾಜದಿಂದ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸಿರುತ್ತೇವೆ. ಸಚಿವ ಸ್ಥಾನ ಕೇಳುವುದು ನಮ್ಮ ಹಕ್ಕು. ಸ್ವಾಮೀಜಿಗಳು ರಾಜಕಾರಣ ಮಾಡಬಾರದು ಎಂದು ಹೇಳುತ್ತೀರಿ. ಅಧಿಕಾರ ಬಂದಾಗ ಓಡೋಡಿ ಬಂದು ಕಾಲು ಹಿಡಿಯುತ್ತೀರಿ, ನೀವು ಪವರ್ಫುಲ್ ಆಗಲು ಸಮಾಜದ ಪವರ್ ಬೇಕು. ಸಮಾಜಕ್ಕೆ ಪವರ್ ಹಂಚಿ ಅಂದಾಗ ನಿಮಗೆ ಸಿಟ್ಟು ಬರುತ್ತದೆ, ಇದು ಒಳ್ಳೆಯ ಸಂದೇಶವಲ್ಲ ಎಂದು ಮುಖ್ಯಮಂತ್ರಿ ವಿರುದ್ಧ ತೀವ್ರ ಅಸಮಾಧಾನ ಹೊಹಾಕಿದರು.
ಸಮಾಜದ ನಾಲ್ವರಿಗೆ ಸಚಿವ ಸ್ಥಾನ ವಿಚಾರವಾಗಿ ಮೂರು ಬಾರಿ ಬೇಡಿಕೆ ಇಟ್ಟಾಗಲೂ ಮುಖ್ಯಮಂತ್ರಿಗಳು ಕಡೆಗಣಿಸಿದ್ದಾರೆ. ಹೀಗಾಗಿ ಮಂಗಳವಾರ ನೇರವಾಗಿ ಕೇಳಲಾಯಿತು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ಜತೆಗೆ, ‘ನಮ್ಮ ಸಮುದಾಯದ 13 ಮಂದಿ ಶಾಸಕರಿದ್ದಾರೆ. ನಿಮಗೆ ಅಧಿಕಾರ ಇಲ್ಲದಾಗ ನಮ್ಮ ಸಮುದಾಯದ ಶಾಸಕರು ಗೆದ್ದು ಶಕ್ತಿ ನೀಡಿದ್ದಾರೆ. ಈ ಪೀಠ ಎಲ್ಲರಿಗೂ ಶಕ್ತಿ ಕೊಡುತ್ತದೆ. ಭೋವಿ, ವಾಲ್ಮೀಕಿ ಗುರುಪೀಠದ ಶ್ರೀಗಳು ಜತೆಗಿದ್ದೇವೆ ಎಂದು ಹೇಳಿದ್ದಾರೆ. ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ’ ಎಂದು ತಿಳಿಸಿದರು.
‘ನಮ್ಮಿಂದಲೇ ನೀವು ಸಿಎಂ ಆಗಿರೋದು : ಸಚಿವ ಸ್ಥಾನ ನೀಡಲೇಬೇಕು ಎಂದ್ರು’
ಇದಕ್ಕೂ ಮೊದಲು ಮಧ್ಯಾಹ್ನ ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡಿದ ವಚನಾನಂದ ಶ್ರೀಗಳು, ಹರಜಾತ್ರೆಯ ಮೊದಲ ದಿನ ಸಮಾಜದ ನಾಲ್ವರಿಗೆ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕ್ರಮದ ವೇದಿಕೆಯಲ್ಲೇ ಬೇಸರ ತೋಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪರೋಕ್ಷವಾಗಿ ಕ್ಷಮೆ ಕೋರಿದ್ದರು. ‘ನನ್ನಿಂದ ಯಾವುದೇ ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ ಎಂದಿದ್ದರು. ಈ ಮೂಲಕ ಮೊದಲ ದಿನದ ಕಾರ್ಯಕ್ರಮದ ಘಟನೆಗೆ ಸಂಬಂಧಿಸಿ ಪರೋಕ್ಷವಾಗಿ ಕ್ಷಮೆ ಕೋರಿದ್ದರು.
ಸಮಾಜದಿಂದ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸಿರುತ್ತೇವೆ. ಸಚಿವ ಸ್ಥಾನ ಕೇಳುವುದು ನಮ್ಮ ಹಕ್ಕು. ಸ್ವಾಮೀಜಿಗಳು ರಾಜಕಾರಣ ಮಾಡಬಾರದು ಎಂದು ಹೇಳುತ್ತೀರಿ. ಅಧಿಕಾರ ಬಂದಾಗ ಓಡೋಡಿ ಬಂದು ಕಾಲು ಹಿಡಿಯುತ್ತೀರಿ, ನೀವು ಪವರ್ಫುಲ್ ಆಗಲು ಸಮಾಜದ ಪವರ್ ಬೇಕು. ಸಮಾಜಕ್ಕೆ ಪವರ್ ಹಂಚಿ ಅಂದಾಗ ನಿಮಗೆ ಸಿಟ್ಟು ಬರುತ್ತದೆ, ಇದು ಒಳ್ಳೆಯ ಸಂದೇಶವಲ್ಲ.
- ವಚನಾನಂದ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.