ನನ್ನ ಮೈಯಲ್ಲಿ ಹರಿಯುತ್ತಿರುವುದು ಪಂಚಮಸಾಲಿ ರಕ್ತ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

By Kannadaprabha NewsFirst Published Mar 27, 2024, 9:17 AM IST
Highlights

ನಾನು ಪಂಚಮಸಾಲಿ, ನನ್ನ ಮತ್ತು ನನ್ನ ಮಗನ ಮೈಯಲ್ಲಿ ಇರುವುದು ರಾಣಿ ಕಿತ್ತೂರು ಚನ್ನಮ್ಮನ ರಕ್ತ, ಪಂಚಮಸಾಲಿ ರಕ್ತ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
 

ಬೆಳಗಾವಿ (ಮಾ.27): ನಾನು ಪಂಚಮಸಾಲಿ, ನನ್ನ ಮತ್ತು ನನ್ನ ಮಗನ ಮೈಯಲ್ಲಿ ಇರುವುದು ರಾಣಿ ಕಿತ್ತೂರು ಚನ್ನಮ್ಮನ ರಕ್ತ, ಪಂಚಮಸಾಲಿ ರಕ್ತ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅತ್ಯಂತ ಅಭಿಯಾನ ,ಸ್ವಾಭಿಮಾನದಿಂದ ಹೇಳುತ್ತೇನೆ. ನಾನು ಪಂಚಮಸಾಲಿ ಎಂದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪಂಚಮಸಾಲಿ ಅಲ್ಲ. ಬಣಜಿಗ ಎಂಬ ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಹುಶಃ ನಿರಾಣಿ ಅಣ್ಣನವರು ಎಲ್ಲೋ ಒಂದು ಕಡೆ ನಿರಾಸೆ ಆಗಿದ್ದಾರೆ. ಅವರಿಗೆ ಬುದ್ಧಿ ಭ್ರಮಣೆ ಆಗಿದೆ ಎಂದು ನಿರಾಣಿಗೆ ತಿರುಗೇಟು ನೀಡಿದರು.

ನಾವು ಬಸವಣ್ಣನವರ ತತ್ವ ನಂಬಿದವರು, ಅಂಬೇಡ್ಕರ್‌ ಮಾರ್ಗದರ್ಶನದ ಸಂವಿಧಾನ ಒಪ್ಪಿಕೊಂಡವರು. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ನಾನು ನನ್ನ ಮಗ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದೇವೆ. 2ಎ ಮೀಸಲಾತಿಗಾಗಿ ನಾನು ನನ್ನ ಇಡೀ ಕುಟುಂಬವೇ ಹೋರಾಟ ಮಾಡಿದೆ ಎಂದರು. ಈ ಚುನಾವಣೆ ಬೆಳಗಾವಿ ಜಿಲ್ಲೆಯ ಜನರ ಸ್ವಾಭಿಮಾನದ ಪ್ರಶ್ನೆ. ಇದು ನಮ್ಮ ನೆಲ ಜಲದ ಹೋರಾಟ ಹಾಗೂ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಬೆಳಗಾವಿ ಜನತೆ ಸ್ವಾಭಿಮಾನಿಗಳು, ಈ ಕ್ಷೇತ್ರದ ಮನೆ ಮಗ ಮೃಣಾಲ್ ಹೆಬ್ಬಾಳ್ಕರ್‌ಗೆ ಆಶೀರ್ವಾದ ಮಾಡಲಿದ್ದಾರೆ ಎಂದು ತಿಳಿಸಿದರು.

ಸಾಮಾನ್ಯವಾಗಿ ಮಾತನಾಡುವಂತೆ ರಾಜಕೀಯ ಅಂದುಕೊಂಡಷ್ಟು ಸುಲಭವಲ್ಲ. 24 ಗಂಟೆ ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸಬೇಕಾಗುತ್ತದೆ. ನಮ್ಮ ಮಕ್ಕಳು ವಿದೇಶದಲ್ಲಿ ಓದಿದ್ದಾರೆ. ವಿದೇಶದಲ್ಲೇ ನೌಕರಿ ಪಡೆದು, ಅಲ್ಲೆ ಉಳಿದುಕೊಳ್ಳಬಹುದಿತ್ತು. ಆದರೆ, ನಮ್ಮ ದಾರಿಯಲ್ಲೇ ಬಂದು ಸಮಾಜ ಸೇವೆ ಮಾಡುತ್ತಿದ್ದಾರೆ. ಬೆಳಗಾವಿ ಕ್ಷೇತ್ರದ ಅಭ್ಯರ್ಥಿ, ನನ್ನ ಮಗ ಮೃಣಾಲ್ ಹೆಬ್ಬಾಳ್ಕರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಇಬ್ಬರು ವಿದ್ಯಾವಂತರು. ಬುದ್ದಿವಂತರಿದ್ದಾರೆ, ಪ್ರಭುದ್ಧರಿದ್ದಾರೆ ಎಂದರು.

ಶೃಂಗೇರಿಯಲ್ಲಿ ‘ಬಿ’ ಫಾರಂಗೆ ಪೂಜೆ ಮಾಡಿಸಿದ ಎಚ್‌.ಡಿ.ರೇವಣ್ಣ

ಇಬ್ಬರಿಗೂ ಇನ್ನೂ ಚಿಕ್ಕ ವಯಸು ಎನ್ನುವ ವಿರೋಧ ಪಕ್ಷಗಳ ಆಕ್ಷೇಪದ ಕುರಿತು ಸುದ್ದಿಗಾರರಿಗೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ದೇಶದ ಗಡಿ ಕಾಯುವ ಸೈನಿಕರನ್ನು ಆಯ್ಕೆ ಮಾಡುವಾಗ 16ನೇ ವಯಸ್ಸನ್ನು ನಿಗದಿಪಡಿಸಲಾಗಿದೆ. ಅಲ್ಲದೆ, 18ನೇ ವಯಸ್ಸಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. ನನ್ನ ಮಗನಿಗೆ 31 ವರ್ಷ, ಪ್ರಿಯಾಂಕಾಗೂ 27 ವರ್ಷ ವಯಸ್ಸಾಗಿದೆ. ಚುನಾವಣೆಗೆ ನಿಲ್ಲಲು ಇಬ್ಬರು ಅರ್ಹರು ಎಂದರು. ನಾವೆಲ್ಲ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಅಪಸ್ವರ ಇರುವುದೇ ಬಿಜೆಪಿಯಲ್ಲಿ. ಈ ಮಾತನ್ನು ಸ್ವತಃ ಬಿಜೆಪಿಯವರೇ ಹೇಳುತ್ತಿದ್ದಾರೆ. ಇದು ಸ್ವಾಭಿಮಾನದ ಪ್ರಶ್ನೆ, ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

click me!