ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ನಿಜ: ಸಚಿವ ಪರಮೇಶ್ವರ್‌

By Kannadaprabha News  |  First Published Mar 6, 2024, 5:17 AM IST

ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿರುವುದು ಸತ್ಯ. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ದ ವರದಿಯಲ್ಲಿ ಇದು ದೃಢಪಟ್ಟಿದ್ದರಿಂದ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು. 


ಬೆಂಗಳೂರು (ಮಾ.06): ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿರುವುದು ಸತ್ಯ. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ದ ವರದಿಯಲ್ಲಿ ಇದು ದೃಢಪಟ್ಟಿದ್ದರಿಂದ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿಯವರು ಬಿಡುಗಡೆ ಮಾಡಿದ ವರದಿಯನ್ನು ಅಧಿಕೃತ ಎನ್ನಲು ಬರುವುದಿಲ್ಲ. ಆದ್ದರಿಂದ ಗೃಹ ಇಲಾಖೆಯು ಎಫ್‌ಎಸ್‌ಎಲ್‌ ವರದಿ ಆಧಾರದಲ್ಲಿ ಪಾಕ್‌ ಪರ ಘೋಷಣೆ ಕೂಗಿದ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. 

ಎಫ್‌ಎಸ್‌ಎಲ್‌ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ನಾನು ಮೊದಲೇ ಹೇಳಿರಲಿಲ್ಲವೇ ಎಂದು ಅವರು ಪ್ರಶ್ನಿಸಿದರು. ಇದರಲ್ಲಿ ವರದಿ ಬಹಿರಂಗಪಡಿಸುವ ವಿಚಾರವೇನಿಲ್ಲ. ವರದಿ ಆಧಾರದಲ್ಲಿ ಮೂವರನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ. ಮೂವರು ಮಾತ್ರ ಭಾಗಿಯಾಗಿದ್ದಾರಾ ಅಥವಾ ಇನ್ನೂ ಹೆಚ್ಚಿನ ಜನರಿದ್ದಾರಾ ಎಂದು ಚರ್ಚೆಯಾಗುತ್ತಿದೆ. ತಪ್ಪು ಮಾಡಿದ್ದರೆ ಮುಲಾಜಿಲ್ಲದೇ ಬಂಧಿಸಲಾಗುವುದು ಎಂದು ನಾನು ಹೇಳಿದ್ದೆ. ಇದೀಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Tap to resize

Latest Videos

ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕುರಿತ ಎಫ್‌ಎಸ್‌ಎಲ್‌ ವರದಿ ಬಂದಿಲ್ಲ: ಪರಮೇಶ್ವರ್‌

ಸರ್ಕಾರಕ್ಕೆ ಮುಜುಗರವಾಗಿಲ್ಲ: ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮುಜುಗರವಾಗಿಲ್ಲ. ಈ ರೀತಿ ಕೂಗುವಂತೆ ಸರ್ಕಾರ ಅವರಿಗೆ ಪ್ರಾಯೋಜಕತ್ವ ನೀಡಿರಲಿಲ್ಲ. ಕೂಗಿದವರನ್ನು ಬಂಧಿಸಿರುವುದರಿಂದ ಸರ್ಕಾರದ ಕೆಲಸವನ್ನು ಹೊಗಳಬೇಕು ಎಂದು ಸಮರ್ಥಿಸಿಕೊಂಡರು. ಘಟನೆ ನಡೆದ ಮರುದಿನವೇ ಎಫ್ಎಸ್‌ಎಲ್‌ ವರದಿ ಬಂದಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆ ನೀಡಿದ್ದರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಗರಂ ಆದ ಪರಮೇಶ್ವರ್‌, ‘ಮುಖ್ಯಮಂತ್ರಿ, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಹೇಳಿಕೆ ನೀಡಿದರೆ ಮಾತ್ರ ಅದು ಅಧಿಕೃತ. ಸಚಿವರು ಹೇಳಿದರೆ ಅದು ಅಧಿಕೃತವಲ್ಲ. ಒಂದೊಮ್ಮೆ ಸಂಬಂಧಿಸಿದ ಇಲಾಖೆ ಸಚಿವರಾಗಿದ್ದರೆ ಮಾತ್ರ ಅಧಿಕೃತ ಹೇಳಿಕೆಯಾಗುತ್ತದೆ. ಈಗ ನಾನು ಹೇಳುವುದು ಅಧಿಕೃತ. ಹೇಳಿಕೆ ಕೊಟ್ಟವರನ್ನೇ ಹೋಗಿ ಕೇಳಿ’ ಎಂದು ಖಾರವಾಗಿ ಉತ್ತರಿಸಿದರು.

ಎನ್‌ಐಎಗೆ ಮಾಹಿತಿ: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದವರು ತನಿಖೆ ಆರಂಭಿಸಿದ್ದಾರೆ. ನಮಗೆ ಸಿಕ್ಕ ಮಾಹಿತಿಯನ್ನು ನಮ್ಮ ಪೊಲೀಸರು ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಎಲ್ಲ ಆಯಾಮದಲ್ಲೂ ಎನ್‌ಐಎನವರು ತನಿಖೆ ನಡೆಸುತ್ತಿದ್ದಾರೆ. ಭಯೋತ್ಪಾದನಾ ನಿಗ್ರಹ ದಳದವರೂ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಕಠಿಣ ಕ್ರಮ: ಗೃಹ ಸಚಿವ ಪರಮೇಶ್ವರ್‌

ಮಂಡ್ಯದಲ್ಲೂ ಪಾಕ್‌ ಜಿಂದಾಬಾದ್‌: ಹಳೆ ಕೇಸಲ್ಲಿ ಬಿಜೆಪಿಗ ಸೆರೆ: ಮಂಡ್ಯದಲ್ಲಿ ಬಿಜೆಪಿಯವರು 2022ರಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಆಗ ನಾವು ಅಧಿಕಾರದಲ್ಲಿ ಇರಲಿಲ್ಲ. ಹಳೆಯ ಪ್ರಕರಣವನ್ನು ಈಗ ಗಮನಿಸಿ ಎಫ್‌ಐಆರ್‌ ದಾಖಲಿಸಿದ್ದು, ಓರ್ವನನ್ನು ಬಂಧಿಸಲಾಗಿದೆ. ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ.

click me!