ದಾವಣಗೆರೆ (ಸೆ.19): ಮೈಸೂರು ಭಾಗದಲ್ಲಿ ಈಗಾಗಲೇ ನಾನು ಪ್ರವಾಸ ಆರಂಭಿಸಿದ್ದು, ರಾಜ್ಯದಲ್ಲಿ 135ರಿಂದ 140 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಯಡಿಯೂರಪ್ಪ ಪ್ರವಾಸಕ್ಕೆ ಯಾವುದೇ ನಾಯಕರ ಒಪ್ಪಿಗೆ ಬೇಕಿಲ್ಲ ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ ಯಡಿಯೂರಪ್ಪ ಈ ಹೇಳಿಕೆ ನೀಡಿದ್ದಾರೆ. ತಮ್ಮ ರಾಜ್ಯ ಪ್ರವಾಸಕ್ಕೆ ಸಂಬಂಧಿಸಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮೈಸೂರು ಕಡೆ ನನ್ನ ಪ್ರವಾಸ ಈಗಾಗಲೇ ಶುರುವಾಗಿದೆಯಲ್ಲಪ್ಪ ಎಂದರು.
ವಿಜಯೇಂದ್ರ ಚುನಾವಣೆಗೆ ನಿಲ್ಲುವ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಬಿಎಸ್‌ವೈ
ರಾಜ್ಯದೆಲ್ಲೆಡೆ ನಿರಂತರ ಓಡಾಟ ಮಾಡುತ್ತೇನೆ. ನಾನಾಗಲಿ, ರಾಜ್ಯಾಧ್ಯಕ್ಷರಾಗಲಿ ಸಂಘಟನೆ ಬಲಪಡಿಸುವ ಕೆಲಸ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ 135-140 ಸೀಟು ಗೆಲ್ಲುವುದೇ ನಮ್ಮೆಲ್ಲರ ಸಂಕಲ್ಪ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು, ಪಕ್ಷ ಸಂಘಟನೆಗಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಜೊತೆಗೆ ಚರ್ಚಿಸಿ, ಪ್ರವಾಸ ಮಾಡುತ್ತಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇನೆ. ಪಕ್ಷವನ್ನು ಮತ್ತಷ್ಟುಬಲಪಡಿಸಲು ಪ್ರಯತ್ನಿಸುತ್ತೇನೆ. ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ, ಕೋರ್ ಕಮಿಟಿ ಸಭೆ, ರಾಜ್ಯ ಕಾರ್ಯಕಾರಿಣಿಯಲ್ಲೂ ಈ ಬಗ್ಗೆ ಚರ್ಚಿಸಲಿದ್ದೇವೆ. ಕಾರ್ಯಕಾರಣಿಯಲ್ಲಿ ಪಕ್ಷವನ್ನು ಬಲಪಡಿಸುವ ಬಗ್ಗೆ, ಮುಂದೆ ಮತ್ತೆ ಅಧಿಕಾರಕ್ಕೆ ತರುವ ದೃಷ್ಟಿಯಿಂದ ಯಾವ ರೀತಿ ಕೆಲಸ ಮಾಡಬೇಕೆಂಬ ಬಗ್ಗೆ ಚರ್ಚಿಸಲಿದ್ದೇವೆ ಎಂದು ವಿವರಿಸಿದರು.