
ಬಾಗಲಕೋಟೆ (ಮಾ.09): ನಮ್ಮ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಸ್ಟ್ರಾಂಗ್ ಇದ್ದಾರೆ. ಖರ್ಗೆ ಅವರಿಗೆ ಇನ್ ಆ್ಯಂಡ್ ಔಟ್ ಎಲ್ಲವೂ ಗೊತ್ತಿದೆ. ನಮ್ಮವರು ಅಭಿಪ್ರಾಯ ಹೇಳಿದ್ರೆ ಅದನ್ನು ಮಾಧ್ಯಮಗಳು ಎರಡೂ ಮಾಡಿ ಇಡ್ತಾರೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂಗೆ ಪವರ್ ಇದೆ ಬಜೆಟ್ ಮಂಡಿಸ್ತಾರೆ. ಅವರು ಉತ್ತರ ಕೊಡ್ತಾರೆ. ಅಧಿಕಾರದಲ್ಲಿ ಇದ್ದವರು ತಮ್ಮ ತಮ್ಮ ಅಭಿಪ್ರಾಯ ಹೇಳ್ತಾರೆ. ಅಧಿಕಾರ ಇಲ್ಲದೇ ಇರುವ ಪಕ್ಷದವರನ್ನು ನೋಡಿದ್ದೀರಾ, ಅಧ್ಯಕ್ಷರನ್ನ ತೆಗೆಯಬೇಕು, ಅಧ್ಯಕ್ಷ ಹಂಗ ಮಾಡ್ತಾನೆ, ಹಿಂಗ ಮಾಡ್ತಾನೆ ಅಂತಿದ್ದಾರೆ. ಇಂತಹ ಹೀನಾಯ ಪಕ್ಷ ನಮ್ಮ ವಿಪಕ್ಷವಿದೆ. ವಿಪಕ್ಷಕ್ಕಿಂತ ನಾವು ಬಹಳ ಉತ್ತಮವಾಗಿದ್ದೇವೆ. ನಮ್ಮ ಸರ್ಕಾರ ಗಟ್ಟಿ ಸರ್ಕಾರ, ಏನೋ ಅಭಿಪ್ರಾಯ ಹೇಳಿರಬಹುದು. ನಮ್ಮ ಸಿಎಂ ತುಂಬ ಸ್ಟ್ರಾಂಗ್ ಇದ್ದಾರೆ ಎನೂ ತೊಂದರೆಯಿಲ್ಲ. ನಮ್ಮ ಸರ್ಕಾರ ಇರುತ್ತೆ ಎಂದು ಸಚಿವರು ತಿಳಿಸಿದರು.
ಬಜೆಟ್ ಹಿಗ್ಗಿದಂತೆ ಸಾಲವೂ ಏರಿಕೆ ಆಗ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಸಿದ್ದರಾಮಯ್ಯ ಎಲ್ಲ ವರ್ಗ, ಸಮಾಜಗಳನ್ನು ಒಳಗೊಂಡಂತೆ ಆರ್ಥಿಕ ಚೌಕಟ್ಟಿನಲ್ಲಿ ಬಜೆಟ್ ಮಂಡನೆ ಮಾಡಿದ್ದಾರೆ, ಆರ್ಥಿಕ ಚೌಕಟ್ಟು ದಾಟಿ ಸಾಲ ಮಾಡುವಂತದ್ದು ಆಗಿಲ್ಲ. ಎಲ್ಲವೂ ತರ್ಕಬದ್ಧವಾದ ಬಜೆಟ್ ಇದಾಗಿದೆ. ಶಾಸಕರಿಗೆ ₹8 ಸಾವಿರ ಕೋಟಿ ತೆಗೆದಿಡುವ ಮೂಲಕ ಕ್ಷೇತ್ರದಲ್ಲಿ ಶಾಸಕರು ಕೊಟ್ಟಿರುವ ಮಾತು ಈಡೇರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದ ಅವರು, ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಕೊಡುವ ಮೂಲಕ ಇಲ್ಲಿನ ಜನರ ಬೇಡಿಕೆ ಈಡೇರಿಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಒಂದೇ ಹಂತದಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಯುಕೆಪಿ ಯೋಜನೆಗಳ ಪ್ರಕರಣಗಳಲ್ಲಿ ಕೋರ್ಟ್ ವೇಗವಾಗಿ ಇತ್ಯರ್ಥಗೊಳಿಸಲು ಅವಕಾಶ ಮಾಡಿಕೊಡಲಾಗಿದೆ. ಇನ್ನು ಹೆಚ್ಚಿನ ಅನುದಾನಕ್ಕೆ ಕೇಂದ್ರ ಸರ್ಕಾರದ ಪತ್ರ ಬರೆಯಲಾಗಿದೆ. ಬಜೆಟ್‌ನಲ್ಲಿ ಮಂಡನೆ ಆಗದಿದ್ರೂ ₹170 ಕೋಟಿ ಮುಧೋಳ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ₹19 ಕೋಟಿ ವೆಚ್ಚದಲ್ಲಿ ಮುಧೋಳದಲ್ಲಿ ತಾಯಿ, ಮಕ್ಕಳ ಆಸ್ಪತ್ರೆಗೆ ಅನುಮೋದನೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ಭರಪೂರ ಅನುದಾನ ನೀಡಲಾಗಿದೆ. ಅಭಿವೃದ್ಧಿ ಕೆಲಸದಲ್ಲಿ ನಮ್ಮ ಸರ್ಕಾರ ಹಿಂದೆ ಸರಿಯಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಗ್ಯಾರಂಟಿ ಅನುದಾನ ಕಡಿತ ಮಾಡಲಾರದೇ ಬಜೆಟ್ ಒದಗಿಸಿದ್ದಾರೆ. ಸಿದ್ದರಾಮಯ್ಯ ಅವರ ಬುದ್ಧಿವಂತಿಕೆಯಿಂದ ಮಾಡಿರುವ ಅದ್ಭುತ ಬಜೆಟ್ ಇದಾಗಿದೆ ಎಂದರು.
ತೊಗರಿ ರೈತರ ಹಿತಾಸಕ್ತಿ ಕಾಪಾಡಲು ನಮ್ಮ ಸರ್ಕಾರ ಬದ್ಧ: ಡಿಸಿಎಂ ಡಿ.ಕೆ.ಶಿವಕುಮಾರ್
ಬಾಗಲಕೋಟೆ ವಿವಿ ರದ್ದು ಮಾಡ್ತಿರುವ ವಿಚಾರ ಪ್ರಸ್ತಾಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ, ವಿವಿ ಕೊಡಬೇಕಾದ್ರೆ ಒಂದಿಂಚು ಭೂಮಿ, ಅನುದಾನ ಕೊಡಲ್ಲ ಅಂದಿದ್ರು. ಏನೂ ಕೊಡೊದಿಲ್ಲ ನೀವೇ ವಿವಿ ನಡೆಸಬೇಕು ಅಂತೇಳಿದ್ರು. ಅಂತಹ ವಿವಿಗಳು ನಮ್ಮ ಕಾಲೇಜುಗಳಿಗಿಂತ ಕೀಳಾಗಿವೆ. ಏನೂ ಮೂಲಭೂತ ಸೌಲಭ್ಯ ಕೊಡದೇ ವಿವಿ ನೀಡಿದ್ರೆ ಹೇಗೆ? ನಮ್ಮ ಬಾಗಲಕೋಟೆ ಜಿಲ್ಲೆಗೆ ಬಂದ ವಿವಿ ನಾವೇಕೆ ಬಿಟ್ಟು ಕೊಡಬೇಕೆಂಬುದು ನಮಗೂ ಇದೆ. ಸೋಮವಾರ, ಮಂಗಳವಾರ ಜಿಲ್ಲೆಯ ಎಲ್ಲ ಶಾಸಕರುಗಳು ಸೇರಿ ಕ್ಯಾಬಿನೆಟ್ ಸಬ್ ಕಮಿಟಿ ಸದಸ್ಯರನ್ನು ಆಹ್ವಾನಿಸಿ ಮಾತನಾಡಿ, ಭೇಟಿ ಮಾಡಿ ಮನವರಿಕೆ ಮಾಡಿಕೊಡುವ ಮೂಲಕ ನಮ್ಮ ವಿವಿ ಉಳಿಸಿಕೊಳ್ಳುವ ಪ್ರಾಮಾಣಿಕ ಕೆಲಸ ಜಿಲ್ಲೆಯ ಎಲ್ಲ ಶಾಸಕರು ಮಾಡ್ತೀವಿ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.