ವಿಪಕ್ಷ ಶಕ್ತಿ ಪ್ರದರ್ಶನ: ಬಿಜೆಪಿ ವಿರುದ್ಧ ಪರ್ಯಾಯ ಶಕ್ತಿಗೆ ಕೆಸಿಆರ್‌ ಯತ್ನ

By Kannadaprabha NewsFirst Published Jan 19, 2023, 10:02 AM IST
Highlights

ಕೆಸಿಆರ್‌ ‘ರಾಷ್ಟ್ರೀಯ’ ಶಕ್ತಿಪ್ರದರ್ಶನ ನಡೆಸಿದ್ದು, ಹೊಸ ಪಕ್ಷ ಸ್ಥಾಪನೆ ನಂತರ ಮೊದಲ ಬೃಹತ್‌ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೇಜ್ರಿವಾಲ್‌, ಅಖಿಲೇಶ್‌, ಪಿಣರಾಯಿ ಭಾಗಿಯಾಗಿದ್ದಾರೆ. ಬಿಜೆಪಿ ವಿರುದ್ಧ ಪರ್ಯಾಯ ಶಕ್ತಿ ರೂಪಿಸಲು ಈ ಯೋಜನೆ ಎಂದು ತಿಳಿದುಬಂದಿದೆ. 

ಖಮ್ಮಂ (ತೆಲಂಗಾಣ): ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಹೆಸರನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಎಂದು ಬದಲಾಯಿಸಿದ ಬಳಿಕ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್‌ ಮೊದಲ ಬಾರಿಗೆ ಬೃಹತ್‌ ಸಾರ್ವಜನಿಕ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಸೇರಿದಂತೆ ಹಲವು ವಿಪಕ್ಷ ನಾಯಕರು ಭಾಗಿಯಾಗಿದ್ದಾರೆ. ಈ ಮೂಲಕ ಕೇಂದ್ರದಲ್ಲಿ ಬಿಜೆಪಿ ವಿರುದ್ಧ ‘ರಾಷ್ಟ್ರೀಯ’ ಪರ್ಯಾಯ ಶಕ್ತಿಯನ್ನು ರೂಪಿಸಲು ಯೋಜಿಸಲಾಗಿದೆ.

ಸಭೆಯ ವೇಳೆ ಬಿಜೆಪಿ (BJP) ವಿರುದ್ಧ ಹರಿಹಾಯ್ದ ಕೆಸಿಆರ್‌ (KCR), ದೇಶದಲ್ಲಿ ‘ಮೇಕ್‌ ಇನ್‌ ಇಂಡಿಯಾ’ (Make in India) ಎಂಬುದು ‘ಜೋಕ್‌ ಇನ್‌ ಇಂಡಿಯಾ’ ಎಂಬಂತಾಗಿದೆ. ಎಲ್ಲಾ ರಾಜ್ಯಗಳಲ್ಲೂ ಚೀನಾದ (China) ಮಾರುಕಟ್ಟೆಗಳಿವೆ. ದೇಶದಲ್ಲಿ ಉಂಟಾಗಿರುವ ಎಲ್ಲಾ ಅಂತಾರಾಜ್ಯ ನೀರಿನ ಸಮಸ್ಯೆಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ (Congress) ಕಾರಣವಾಗಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. ಒಂದು ವೇಳೆ ಬಿಆರ್‌ಎಸ್‌ ಅಧಿಕಾರಕ್ಕೆ ಬಂದರೆ ಅಗ್ನಿಪಥ ಯೋಜನೆಯನ್ನು (Agnipath Yojana) ರದ್ದು ಮಾಡುವ ಭರವಸೆ ನೀಡಿದ್ದಾರೆ.

Latest Videos

ಇದನ್ನು ಓದಿ: ತಿಂಗಳಲ್ಲಿ 1 ವಾರ ಕೆಸಿಆರ್‌ ಇನ್ನು ದಿಲ್ಲಿಯಲ್ಲಿ ಬಿಡಾರ

ಪಿಣರಾಯಿ ವಿಜಯನ್‌ ಮಾತನಾಡಿ, ‘ಬಿಜೆಪಿ ವಿರುದ್ಧ ಹೊಸ ಪ್ರತಿರೋಧ ಶಕ್ತಿಯನ್ನು ನಿರ್ಮಾಣ ಮಾಡಬೇಕಿದೆ. ಬಿಜೆಪಿ ದೇಶದ ಮೂಲ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದೆ. ಹಾಗಾಗಿ ಪರ್ಯಾಯ ಶಕ್ತಿ ನಿರ್ಮಾಣ ಮಾಡಲು, ಜಾತ್ಯತೀತತೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಮುಂದಡಿ ಇಟ್ಟಿದ್ದೇವೆ’ ಎಂದರು.

ಅರವಿಂದ್‌ ಕೇಜ್ರಿವಾಲ್‌ ಮಾತನಾಡಿ, ‘ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಹೊರಗಿಡಲು ದೇಶದ ಜನರಿಗೆ ಅವಕಾಶವಿದೆ. ಎನ್‌ಡಿಎ ಸರ್ಕಾರ ದೇಶವನ್ನು ಬದಲಾಯಿಸಲು ಬಂದಿಲ್ಲ ಎಂಬುದು ಜನರಿಗೆ ಅರ್ಥವಾಗಿದೆ’ ಎಂದರು.

ಇದನ್ನೂ ಓದಿ: ಟಿಆರ್‌ಎಸ್‌ ಈಗ ಅಧಿಕೃತವಾಗಿ ಬಿಆರ್‌ಎಸ್‌, ರಾಜ್ಯ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ!

‘2024ರ ಲೋಕಸಭಾ ಚುನಾವಣೆಗೆ 400 ದಿನಗಳು ಬಾಕಿ ಇದ್ದು, 401ನೇ ದಿನ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ’ ಎಂದು ಅಖಿಲೇಶ್‌ ಯಾದವ್‌ ಪ್ರಹಾರ ನಡೆಸಿದರು.
ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕರ್ನಾಟಕದಲ್ಲಿ ಪಂಚರತ್ನ ಯಾತ್ರೆಯಲ್ಲಿರುವ ಕಾರಣ ಸಮಾರಂಭದಲ್ಲಿ ಭಾಗಿ ಆಗಲಿಲ್ಲ.
ಇನ್ನು ಸಭೆಯಲ್ಲಿ ಕೆಸಿಆರ್‌ ಅವರ ಬೆಂಬಲಿಗರು ಹಿಂದಿಯಲ್ಲಿ ಘೋಷಣೆಗಳನ್ನು ಕೂಗುವ ಮೂಲಕ ‘ಕೆಸಿಆರ್‌ ರಾಷ್ಟ್ರೀಯ ನಾಯಕ, ಬಿಆರ್‌ಎಸ್‌ ರಾಷ್ಟ್ರೀಯ ಪಕ್ಷ’ ಎಂದು ಘೋಷಿಸುವ ಯತ್ನ ನಡೆಸಿದರು.

ಕಾಂಗ್ರೆಸ್‌ ಪಕ್ಷಕ್ಕೆ ಡಬಲ್‌ ಶಾಕ್‌
ಜಮ್ಮು/ಚಂಡೀಗಢ: ಕಾಂಗ್ರೆಸ್‌ ಪಕ್ಷಕ್ಕೆ ಒಂದೇ ದಿನ ಎರಡು ಆಘಾತಗಳು ಎದುರಾಗಿದೆ. ಪಂಜಾಬ್‌ನ ಮಾಜಿ ಶಾಸಕ ಮನ್‌ಪ್ರೀತ್‌ ಬಾದಲ್‌ ಹಾಗೂ ಪಕ್ಷದ ಕಾಶ್ಮೀರ ವಕ್ತಾರೆ ದೀಪಿಕಾ ಪುಷ್ಕರ್‌ ನಾಥ್‌ ಅವರು ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. ಮನ್‌ಪ್ರೀತ್‌ ಬಾದಲ್‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
‘ಪಂಜಾಬಲ್ಲಿ ಪರಿಸ್ಥಿತಿ ಕೈ ಮೀರಿದೆ. ಪಂಜಾಬ್‌ ಕಾಂಗ್ರೆಸ್‌ನ ಕೈಯಿಂದ ಜಾರಿದೆ. ಈ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಿರುವ ಏಕೈಕ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಒಳಜಗಳದಲ್ಲಿ ಮುಳುಗಿರುವ ಪಕ್ಷವೊಂದರಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಪಂಜಾಬ್‌ ಮಾತ್ರವಲ್ಲ, ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಒಳಜಗಳದಲ್ಲಿ ಮುಳುಗಿದೆ’ ಎಂದು ಮನ್‌ಪ್ರೀತ್‌ ಬಾದಲ್‌ ಆರೋಪಿಸಿದ್ದಾರೆ. ರಾಜೀನಾಮೆ ನೀಡಿದ ಬಳಿಕ ಮನ್‌ಪ್ರೀತ್‌ ಬಾದಲ್‌ ಕೇಂದ್ರ ಸಚಿವ ಪಿಯೂಶ್‌ ಗೋಯಲ್‌ ಹಾಜರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮನ್‌ಪ್ರೀತ್‌ ಬಾದಲ್‌ ರಾಜೀನಾಮೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ಪಂಜಾಬ್‌ ಕಾಂಗ್ರೆಸ್‌ ಮೇಲೆ ಆವರಿಸಿದ್ದ ಮೋಡ (ಬಾದಲ್‌) ಸರಿದಿದೆ’ ಎಂದು ಹೇಳಿದೆ.

ಇದನ್ನೂ ಓದಿ: ಕೆಸಿಆರ್‌ ಹೊಸ ಪಕ್ಷದ ಪೋಸ್ಟರ್‌ನಲ್ಲಿ ಅರ್ಧ ಕಾಶ್ಮೀರವೇ ನಾಪತ್ತೆ, ಬಿಜೆಪಿ ಟೀಕೆ!

ದೀಪಿಕಾ ಗುಡ್‌ಬೈ:
ಅತ್ಯಾಚಾರಿಗಳಿಗೆ ರಕ್ಷಣೆ ನೀಡಿರುವ ಆರೋಪ ಹೊತ್ತಿರುವ ಕಾಂಗ್ರೆಸ್‌ ಮಾಜಿ ಸಚಿವ ಲಾಲ್‌ಸಿಂಗ್‌ಗೆ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗಿಯಾಗುವುದಕ್ಕೆ ಅವಕಾಶ ನೀಡಿರುವ ಕ್ರಮ ವಿರೋಧಿಸಿ ರಾಜ್ಯ ಕಾಂಗ್ರೆಸ್‌ ವಕ್ತಾರೆ ದೀಪಿಕಾ ಪುಷ್ಕರ್‌ನಾಥ್‌ ರಾಜೀನಾಮೆ ನೀಡಿದ್ದಾರೆ. 2018ರಲ್ಲಿ ನಡೆದ ಅತ್ಯಾಚಾರದ ಆರೋಪಿಗಳನ್ನು ರಕ್ಷಿಸುವ ಸಲುವಾಗಿ ಇಡೀ ಜಮ್ಮು ಕಾಶ್ಮೀರವನ್ನು ಲಾಲ್‌ಸಿಂಗ್‌ ಭಾಗ ಮಾಡಿದ್ದಾರೆ. ಹಾಗಾಗಿ ಸಿದ್ಧಾಂತಗಳ ಆಧಾರದಲ್ಲಿ ನಾನು ಪಕ್ಷದಲ್ಲಿ ಮುಂದುವರೆಯಲು ಬಯಸುವುದಿಲ್ಲ ಎಂದು ದೀಪಿಕಾ ಪುಷ್ಕರ್‌ನಾಥ್‌ ಹೇಳಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಹೊಸ ರಾಷ್ಟ್ರೀಯ ಪಕ್ಷ ‘BRS’ ಉದಯ: ತೆಲಂಗಾಣ ಸಿಎಂ KCR ಜತೆ ಮಾಜಿ ಸಿಎಂ ಎಚ್‌ಡಿಕೆ ಭಾಗಿ..!

 

click me!