
ಚಿಕ್ಕಮಗಳೂರು (ಮಾ.04): ನಿಮಗೆ ತಾಕತ್ತು, ಧಮ್ ಇದ್ರೆ ಒಂದೇ ವೇದಿಕೆಗೆ ಬನ್ನಿ, ನಾವು ಕೊಡ್ತಾ ಇರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಹಾಗೂ ಜೆಡಿಎಸ್‌ಗೆ ಸವಾಲ್ ಹಾಕಿದ್ದಾರೆ. ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂಬಾಗಲಿನಿಂದ ಅಧಿಕಾರಕ್ಕೆ ಬಂದವರು, ಹಾಗಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿಯನ್ನು ಛೇಡಿಸಿದರು. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ನಾವುಗಳು ವಿಫಲವಾಗಿದ್ದೇವೆಂದು ಸುಳ್ಳು ಹೇಳುವ ಬಿಜೆಪಿಗೆ ನಾಚಿಕೆಯಾಗಬೇಕು.
ನಿಮಗೆ ಮಾನ ಮರ್ಯಾದೆ ಇಲ್ವಾ ಎಂದು ಪ್ರಶ್ನಿಸಿದ ಸಿಎಂ, ಸುಳ್ಳೇ ಬಿಜೆಪಿಯ ಮನೆ ದೇವರು ಎಂದು ಆಕ್ರೋಶ ವ್ಯಕ್ತಪಡಿಸಿದರು. 2008 ಹಾಗೂ 2018 ರಲ್ಲಿ ರಾಜ್ಯದಲ್ಲಿ ಬಿಜೆಪಿ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸಿ ಅಧಿಕಾರಕ್ಕೆ ಬಂದಿತು. ರಾಜ್ಯದಲ್ಲಿ ಮೊದಲ ಬಾರಿಗೆ ಆಪರೇಷನ್ ಕಮಲ ಜಾರಿಗೆ ತಂದಿದ್ದು ಬಿಜೆಪಿ ಎಂದು ಹೇಳಿದರು. ನಮ್ಮ ಪಕ್ಷ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿಯವರು ರಾಜಸ್ಥಾನದಲ್ಲಿ ಪ್ರಸ್ತಾಪ ಮಾಡಿ, ಇದು, ಸಾಧ್ಯವಿಲ್ಲ. ಅನುಷ್ಟಾನಕ್ಕೆ ಬಂದರೆ ರಾಜ್ಯ ದಿವಾಳಿಯಾಗಲಿದೆ ಎಂದಿದ್ದರು ಮಿಸ್ಟರ್ ಮೋದಿಜೀ, ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದೂ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತಂದಿದ್ದೇವೆ ಎಂದರು.
ದೇಶದ ಪ್ರತಿ ಮನೆಗೂ ನೀರು ನೀಡಲು ಜಲಜೀವನ್ ಯೋಜನೆ: ಸಂಸದ ಪ್ರಜ್ವಲ್ ರೇವಣ್ಣ
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ನಾಲ್ಕೂವರೆ ಕೋಟಿ ಫಲಾನುಭವಿಗಳಿಗೆ ಬಿಜೆಪಿ ನಿರಂತರವಾಗಿ ಅವಮಾನಿ ಸುತ್ತಿದೆ. ಒಂದು ಕಡೆ ಅವಮಾನಿಸುತ್ತಲೇ ಮತ್ತೊಂದು ಕಡೆ ವಿಪರೀತ ಸುಳ್ಳುಗಳನ್ನು ಹೇಳುತ್ತಿದೆ ಎಂದರು. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಬಿಜೆಪಿ ಬೆಂಬಲಿಗರು ಇಲ್ಲವೇ ಸಿ.ಟಿ.ರವಿ ? ಈ ಪ್ರಶ್ನೆಗೆ ಬಹಿರಂಗವಾಗಿ ಉತ್ತರಿಸಲು ಬಿಜೆಪಿಗೆ ಸವಾಲು ಹಾಕಿದ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಹಕ್ಕು. ಫಲಾನುಭವಿಗಳನ್ನು ಅವಮಾನಿಸುವುದನ್ನು ತಕ್ಷಣ ನಿಲ್ಲಿಸಿ ಎಂದು ಎಚ್ಚರಿಸಿದರು. ಬಿಜೆಪಿ ಯಾವಾಗಲೂ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತದೆ. ಆದರೆ, ಕಾಂಗ್ರೆಸ್, ಹಸಿವು ಮುಕ್ತ ಭಾರತ ನಿರ್ಮಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ನೀವು ಸ್ವತಂತ್ರ ಭಾರತದ ಇತಿಹಾಸ ನೋಡಿದರೆ ಹಸಿವು ಮುಕ್ತ ಭಾರತಕ್ಕಾಗಿ ಕಾಂಗ್ರೆಸ್ ಏನೆಲ್ಲಾ ಕಾರ್ಯಕ್ರಮಗಳನ್ನು ಜಾರಿ ಮಾಡಿತು ಎನ್ನುವ ಪಟ್ಟಿಯೇ ಸಿಗುತ್ತದೆ ಎಂದರು.
ಗ್ಯಾರಂಟಿ ನಿರಂತರ: ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ 5 ಗ್ಯಾರಂಟಿಗಳು ಐದು ವರ್ಷಗಳ ಕಾಲ ಇರುತ್ತದೆ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಪ್ರಸ್ತಾಪ ಮಾಡಿರುವುದನ್ನು ಉಲ್ಲೇಖಿಸಿದ ಸಿಎಂ, ಈ ಒಂದೇ ಅವಧಿ ಮಾತ್ರವಲ್ಲ, ಮುಂದಿನ ಬಾರಿಯೂ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ನಂತರದ ಅವಧಿಯಲ್ಲೂ ಅಧಿಕಾರದಲ್ಲಿ ರುತ್ತದೆ. ಹಾಗಾಗಿ ಈ ಗ್ಯಾರಂಟಿಗಳು ನಿರಂತರವಾಗಿ ಜಾರಿಯಲ್ಲಿರುತ್ತವೆ ಎಂದರು. ಬಡತನ ಇರುವವರೆಗೆ ಈ ಗ್ಯಾರಂಟಿಗಳು ಜಾರಿಯಲ್ಲಿರುತ್ತವೆ. ಮುಂದೆ ರಾಜ್ಯದಲ್ಲಿ ಯಾವತ್ತೂ ಕೂಡ ಬೇರೆ ಪಕ್ಷದವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.
ಸರ್ಕಾರದ ಸೌಲಭ್ಯದಿಂದ ಜನರ ಕುಂದು ಕೊರತೆ ನಿವಾರಣೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಶಾಸಕರಾದ ಟಿ.ಡಿ. ರಾಜೇಗೌಡ, ನಯನಾ ಮೋಟಮ್ಮ, ಶ್ರೀನಿವಾಸ್, ಆನಂದ್, ಕೋನರೆಡ್ಡಿ, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ. ನಿಂಗಯ್ಯ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣು ಗೋಪಾಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ಕುಮಾರ್ ಕಟಾರಿಯಾ, ಅನಿವಾಸಿ ಭಾರತೀಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.