
ಆಪರೇಷನ್ ಕಮಲದ ಕುರಿತು ಶಾಸಕ ವಿಜಯಾನಂದ ಕಾಶಪ್ಪನವರ್ ಮಾಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂ. ಬಿ. ಪಾಟೀಲ್, ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಂಡಿದ್ದಾರೆ. “ನಾವು 140 ಶಾಸಕರೊಂದಿಗೆ ಬಲವಾದ ಸ್ಥಿತಿಯಲ್ಲಿ ಇದ್ದೇವೆ. 85 ಮಂದಿ ಶಾಸಕರನ್ನು ಕೇವಲ ಹೀಗೇ ತಾವು ಸೆಳೆಯುತ್ತಾರೆ ಅನ್ನೋದು ಸಾದ್ಯವೇ? ಶಾಸಕರೇನು ಹುಣಸೆ ಬೀಜ ಅಲ್ಲಾ. 140 ಶಾಸಕರು ಇದ್ದೇವೆ, 85 ಶಾಸಕರು ಸಿಗ್ತಾರಾ ಅವರೇನು ಹುಣಸೇ ಬೀಜಾನಾ..? ಕಳೆದ ಸಾರಿ 10-15 ಜನ ಕಡಿಮೆ ಇತ್ತು ಏನೊ ಮಾಡಿ ಸಾಧನೆ ಮಾಡಿದ್ರು, ಇದೆಲ್ಲಾ ಊಹಾಪೋಹಾ ನಡೆಯುತ್ತಿದೆ. ವಿಜಯಾನಂದ ಕಾಶಪ್ಪನಪ್ಪರು ಯಾವ ರೀತಿ ಹೇಳಿದ್ದಾರೊ ಅವರನ್ನೆ ಕೇಳಿ. ಪ್ರಯತ್ನ ಪಡ್ತಿದ್ದಾರೆ ಎಂದು ಹೇಳಿರಬಹುದು ಅವರು ಯಾಕೆ ಸುಳ್ಳು ಹೇಳ್ತಾರೆ..? ಅಪರೇಷನ್ ಕಮಲ ಅಸಾಧ್ಯವಾದ ಮಾತು. ಬಿಜೆಪಿ, ಜೆಡಿಎಸ್ ನ 10-15 ಶಾಸಕರು ನಮ್ಮ ಕಾಂಗ್ರೆಸ್ ಕದ ಬಡೆಯುತ್ತಿದ್ದಾರೆ. ನಮ್ಮ ಕಡೆ ಬರ್ತಾರೆ,ಇಂತಹ ಸಮಯದಲ್ಲಿ ಅಪರೇಷನ್ ಕಮಲದ ಬಗ್ಗೆ ಮಾತಾಡ್ತಿದ್ದಿರಾ. ನಮ್ಮ ಪಕ್ಷದಲ್ಲಿ ಯಾವ ಕದನವು ನಡೆಯೋದಿಲ್ಲಾ. ಹೈಕಮಾಂಡ್ ತೀರ್ಮಾನ, ಸಿಎಂಗೆ , ನನಗೆ ಡಿಕೆಶಿವಕುಮಾರ್ ಎಲ್ಲರಿಗೂ ಅನ್ವಯಿಸುತ್ತೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಾನಂದ ಕಾಶಪ್ಪನವರ್ ಹೇಳಿರುವುದನ್ನು ಅವರಿಂದಲೇ ಕೇಳಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು. “ಅವರು ಪ್ರಯತ್ನವಾಗುತ್ತಿದೆ ಎಂದೇ ಹೇಳಿರಬಹುದು. ಅವರು ಸುಳ್ಳು ಹೇಳಲು ಏಕೆ ಹೋಗಬೇಕು? ಆದರೆ ಆಪರೇಷನ್ ಕಮಲ ಅಸಾಧ್ಯ,” ಎಂದು ಪಾಟೀಲ್ ಸ್ಪಷ್ಟಪಡಿಸಿದರು.
ಬಿಜೆಪಿ ಹಾಗೂ ಜೆಡಿಎಸ್‌ನ ಕೆಲವು ಶಾಸಕರು ಕಾಂಗ್ರೆಸ್ ಸಂಪರ್ಕಕ್ಕೆ ಬರುತ್ತಿದ್ದಾರೆ ಎಂಬ ಮಾತುಗಳು ಹಬ್ಬಿರುವ ಹಿನ್ನೆಲೆಯಲ್ಲಿ ಪಾಟೀಲ್ ಹೇಳಿದರು: “ಈ ಸಮಯದಲ್ಲಿ ಆಪರೇಷನ್ ಕಮಲದ ಕುರಿತು ಮಾತನಾಡುವುದು ಅಪ್ರಸ್ತುತ. ಬಿಜೆಪಿಯ 10-15 ಶಾಸಕರು ಈಗ ಕಾಂಗ್ರೆಸ್ ಪಕ್ಷದ ಸಂಪರ್ಕಕ್ಕೆ ಬರುವ ಯತ್ನದಲ್ಲಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಕದನ ನಡೆಯುತ್ತಿಲ್ಲ.”
ಹೈಕಮಾಂಡ್ ಕುರಿತು ಹೇಳಿಕೆ ನೀಡಿದ ಅವರು, “ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವು ಸಿಎಂಗೆ, ನನಗೆ, ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲರಿಗೂ ಅನ್ವಯಿಸುತ್ತದೆ. ಹೈಕಮಾಂಡ್‌ನಿಂದ ಸ್ಪಷ್ಟನೆ ನೀಡದ ವಿಷಯವಲ್ಲದೆ, ಸಿಎಂ ‘ನಾನು ಐದು ವರ್ಷ ಮುಂದುವರೆಯುತ್ತೇನೆ’ ಎಂದು ಹೇಳಿದ್ದು ತಪ್ಪೇನಲ್ಲ. ಹೈಕಮಾಂಡ್‌ಗೆ ಅಗತ್ಯವಿದ್ದರೆ ಅವರು ಸ್ಪಷ್ಟನೆ ನೀಡುತ್ತಾರೆ,” ಎಂದರು.
ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲ ಎನ್ನುವ ಸಿಎಂ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಪಾಟೀಲ್, “ಅವರು ಯಾವ ಅರ್ಥದಲ್ಲಿ ಹೇಳಿದ್ರೋ ಗೊತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಶಾಸಕರ ಬೆಂಬಲ ಸಿಎಂ ಬಳಿ ಇದೆ. ಅದರರ್ಥ ಇದು ಡಿ.ಕೆ. ಶಿವಕುಮಾರ್ ಅವರಿಗೆ ಬೆಂಬಲ ಇಲ್ಲ ಎಂಬುದಲ್ಲ. ಅವರಿಗೂ ಶಾಸಕರ ಬೆಂಬಲ ಇದೆ. ನಮ್ಮಲ್ಲಿ ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ,” ಎಂದು ಹೇಳಿದರು.
ಸುರ್ಜೆವಾಲ ಅವರು ಸಚಿವರ ಮೌಲ್ಯಮಾಪನ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಟೀಲ್, ನನಗೆ ಅದರ ವಿಚಾರ ಗೊತ್ತಿಲ್ಲ. ನಾನು ಯಾವುದೇ ರಿಪೋರ್ಟ್ ಕಾರ್ಡ್ ನೀಡಿಲ್ಲ. ಆದರೆ ನಾನು ಎಲ್ಲಾ ಮಾಹಿತಿ ಅವರಿಗೆ ಹೇಳುತ್ತಿದ್ದೇನೆ. ಅವರಿಗೆ ಎಲ್ಲ ಮಾಹಿತಿ ಗೊತ್ತಿರುತ್ತೆ ಎಂದರು. ಅನುದಾನದ ವಿಷಯದ ಕುರಿತು ಮಾತನಾಡಿದ ಅವರು, ಹಣ ಬಿಡುಗಡೆ ಮಾಡಲು ಸಿಎಂ ಅವರೆ. ಅವರು ನಮ್ಮ ಅಭಿಪ್ರಾಯ ಕೇಳಬಹುದು. ಬಿಜೆಪಿಯಲ್ಲೂ ಅವರ ಹೈಕಮಾಂಡ್ ಬಂದು ಸಭೆ ಮಾಡುತ್ತಾರಲ್ಲವಾ? ಎಂದು ಪ್ರಶ್ನಿಸಿದರು.
ಹುನಗುಂದದಲ್ಲಿ ಶನಿವಾರ ಮಾತನಾಡಿದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಬಿಜೆಪಿಯ ರಾಜಕೀಯ ತಂತ್ರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಬಿಜೆಪಿ ಹೈಕಮಾಂಡ್ ಕಾಂಗ್ರೆಸ್‌ನ 55 ಶಾಸಕರಿಗೆ ಟಾರ್ಗೆಟ್ ಲಿಸ್ಟ್ ತಯಾರಿಸಿದೆ. ಆ ಪಟ್ಟಿಯಲ್ಲಿ ನಾನೂ ಇರಬಹುದು. ಅವರ ಬೆದರಿಕೆಗೆ ನಾನು ಹೆದರುವಂತವನು ಅಲ್ಲ, ಬಗ್ಗುವವನು ಅಲ್ಲ. ಬಿಜೆಪಿಗರಿಗೆ ನನ್ನನ್ನು ಕೈಪಟ್ಟಿಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೆ ನಿಡಿದ್ದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೀಡಿರುವ “ಕಾಂಗ್ರೆಸ್‌ನಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳಿಂದ ಕುದುರೆ ವ್ಯಾಪಾರ ನಡೆಯುತ್ತಿದೆ” ಎಂಬ ಹೇಳಿಕೆಗೆ ಕಾಶಪ್ಪನವರ್ ತಿರುಗೇಟು ನೀಡಿದರು. “ಬಿಜೆಪಿಗರ ಬೆದರಿಕೆಗೆ ನಾನು ಬಗ್ಗಲ್ಲ. ಅವರು ಯಾವತ್ತೂ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. ಹಿಂಬಾಗಿಲಿನ ರಾಜಕಾರಣದಿಂದ, ಸಮ್ಮಿಶ್ರ ಸರ್ಕಾರದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಕಳೆದ ವರ್ಷ ಕೂಡ ದುಡ್ಡು ಕೊಟ್ಟು ಅಧಿಕಾರಕ್ಕೆ ಬಂದರು. ಅವರಿಗೆ ನಿಜವಾದ ಬಹುಮತ ಇರಲಿಲ್ಲ. ಜನತೆಗೆ ಇವೆಲ್ಲಾ ಗೊತ್ತಿದೆ,” ಎಂದರು.
ಬಿಜೆಪಿಗರು ಜನಮಧ್ಯದಲ್ಲಿ ಯಾವತ್ತೂ ಅಧಿಕಾರಕ್ಕೆ ಬರಲಾಗದು ಎಂದು ವಾಗ್ದಾಳಿ ಮುಂದುವರಿಸಿದ ಅವರು, “ಅದು ಅವರಿಗೆ ಈಗ ಸ್ಪಷ್ಟವಾಗಿದೆ. ಅದಕ್ಕಾಗಿಯೇ ಅವರು ಕುತಂತ್ರ ರಾಜಕಾರಣದ ಹಾದಿ ಹಿಡಿದಿದ್ದಾರೆ. ಇವತ್ತಿಗೂ ಅವರು ಅದೇ ತಂತ್ರದಲ್ಲಿ ಯಾರನ್ನಾದರೂ ಎತ್ತಿ ಕಟ್ಟಿ ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಸಿಬಿಐ, ಇಡಿ ದಾಳಿಗಳ ಮೂಲಕ ಶಾಸಕರಿಗೆ ಬೆದರಿಕೆ ಹಾಕುತ್ತಿದ್ದಾರೆ,” ಎಂದು ಆರೋಪಿಸಿದರು.
“ಬಿಜೆಪಿಗೆ ಕಾಂಗ್ರೆಸ್ ಶಾಸಕರು ಬರದೇ ಹೋದರೆ, ಇಡಿ ಅಥವಾ ಸಿಬಿಐ ದಾಳಿಯ ಹೆಸರಿನಲ್ಲಿ ಹೆದರಿಸುತ್ತಿದ್ದಾರೆ. ಆ ಕಾರಣಕ್ಕೆ ನಮ್ಮೆಲ್ಲರಿಗೂ, ನನ್ನನ್ನೂ ಸೇರಿ, ಯಾರಾದರೂ ಶಾಸಕರಿಗೆ ಸ್ವಲ್ಪ ಭಯವಿದೆ. ಆದರೆ, ನನಗೆ ಯಾರನ್ನೂ ಕಿತ್ಕೊಳ್ಳಲು ಸಾಧ್ಯವಿಲ್ಲ. ನನ್ನ ಮೇಲೆ ಇಡಿ ಮಾಡಲಿ, ಐಬಿ ಮಾಡಲಿ, ನಾನು ಸಜ್ಜಿದ್ದೇನೆ,” ಎಂದು ಹೇಳಿಕೆ ನೀಡಿದ್ದರು.
“ಬಿಜೆಪಿ ಈಗಾಗಲೇ ತಮ್ಮ ಏಜೆಂಟ್‌ಗಳನ್ನು ಶಾಸಕರ ಮನೆಗಳಿಗೆ ಕಳುಹಿಸಿ ಬೆದರಿಕೆ ಹಾಕುತ್ತಿದೆ. ‘ನಮ್ಮ ಕಡೆ ಬರದೇ ಇದ್ದರೆ, ಸಿಬಿಐ ಅಥವಾ ಇಡಿ ದಾಳಿ ಮಾಡಿಸಿ, ನಿಮ್ಮ ಅಕ್ರಮ ಆಸ್ತಿಗಳನ್ನು ಹೊರತೆಗೆದು ತೋರಿಸುತ್ತೇವೆ’ ಅಂತಾ ಹೇಳಿದ್ದಾರೆ. ಆದರೆ, ನಾನು ಬಗ್ಗಲ್ಲ, ಜಗ್ಗಲ್ಲ. ಆ ಪಟ್ಟಿಯಲ್ಲಿ ನಾನೂ ಇರಬಹುದು. ಆದರೆ ನಾನು ಅದರಿಂದ ಹೆದರುವವನಲ್ಲ ಎಂದು ಕಾಶಪ್ಪನವರ್ ಹೇಳಿದ್ದರು.
ಮೊನ್ನೆ ನೋಡಿರಬಹುದು ಬಳ್ಳಾರಿ ಶಾಸಕರು ಭರತ್ ರೆಡ್ಡಿ, ತುಕರಾಮ್, ನಾಗೇಂದ್ರ ಅವರ ಮೇಲೆ ಹೇಗೆ ದಾಳಿಯ ಪ್ರಯತ್ನ ಮಾಡಿದ್ರು. ಇವೆಲ್ಲಾ ಉದ್ದೇಶಪೂರ್ವಕ, ದ್ವೇಷದ ರಾಜಕಾರಣ, ಕುತಂತ್ರ ರಾಜಕಾರಣ. ಬಿಜೆಪಿಗೆ ಶಕ್ತಿ ಇದ್ದರೆ, ಧೈರ್ಯ ಇದ್ದರೆ, ಜನರ ಮಧ್ಯೆ ಬರಲಿ. 2028ಕ್ಕೆ ಜನರ ಎದುರಿನಲ್ಲಿ ಸ್ಪರ್ಧಿಸಲಿ,” ಎಂದು ಕಾಶಪ್ಪನವರ್ ಸವಾಲು ಹಾಕಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.