''ಬಿಜೆಪಿಯಿಂದ 55 ಕಾಂಗ್ರೆಸ್ ಶಾಸಕರಿಗೆ ಗಾಳ : ಇದು ‘ಆಪರೇಷನ್‌ ಕೈ-ಕೈ’ ಅಲ್ಲ, ‘ಕಮಲ’'

Kannadaprabha News   | Kannada Prabha
Published : Jul 13, 2025, 06:32 AM IST
Kashappanavar

ಸಾರಾಂಶ

ರಾಜ್ಯದಲ್ಲಿ ಆಪರೇಷನ್‌ ಕಮಲಕ್ಕೆ ಯತ್ನ ನಡೆಯುತ್ತಿದೆ. ಬಿಜೆಪಿಯ ಹೈಕಮಾಂಡ್‌ 55 ಕಾಂಗ್ರೆಸ್ ಶಾಸಕರ ಹೆಸರನ್ನು ಲಿಸ್ಟ್ ಮಾಡಿದೆ. ಈ ಕಾಂಗ್ರೆಸ್‌ ಶಾಸಕರ ಮನೆಗಳಿಗೆ ಬಿಜೆಪಿ ಏಜೆಂಟರನ್ನೂ ಕಳಿಸಲಾಗುತ್ತಿದೆ.

ಬಾಗಲಕೋಟೆ : ‘ರಾಜ್ಯದಲ್ಲಿ ಆಪರೇಷನ್‌ ಕಮಲಕ್ಕೆ ಯತ್ನ ನಡೆಯುತ್ತಿದೆ. ಬಿಜೆಪಿಯ ಹೈಕಮಾಂಡ್‌ 55 ಕಾಂಗ್ರೆಸ್ ಶಾಸಕರ ಹೆಸರನ್ನು ಲಿಸ್ಟ್ ಮಾಡಿದೆ. ಈ ಕಾಂಗ್ರೆಸ್‌ ಶಾಸಕರ ಮನೆಗಳಿಗೆ ಬಿಜೆಪಿ ಏಜೆಂಟರನ್ನೂ ಕಳಿಸಲಾಗುತ್ತಿದೆ. ಬಿಜೆಪಿ ಸೇರಿ, ಇಲ್ಲದಿದ್ದರೆ ನಿಮ್ಮ ಮೇಲೆ ಸಿಬಿಐ, ಇ,ಡಿ.ದಾಳಿ ಮಾಡಿಸುವುದಾಗಿ ಏಜೆಂಟರ ಮೂಲಕ ನಮ್ಮ ಶಾಸಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ, ನನ್ನನ್ನೂ ಸೇರಿ ನಮ್ಮೆಲ್ಲಾ ಕಾಂಗ್ರೆಸ್‌ ಶಾಸಕರಿಗೆ ಭಯ ಇದೆ’ ಎಂದು ಹುನಗುಂದ ಕಾಂಗ್ರೆಸ್‌ ಶಾಸಕ ವಿಜಯಾನಂದ ಕಾಶಪ್ಪನವರ ಹೊಸ ಬಾಂಬ್‌ ಸಿಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಹುನಗುಂದದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕಾಂಗ್ರೆಸ್‌ನಲ್ಲಿ ಡಿಕೆಶಿ ಮತ್ತು ಸಿದ್ದು ಬಣದಿಂದ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಕಾಶಪ್ಪನವರ, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಬಿಜೆಪಿ ಹೈಕಮಾಂಡ್‌ ಹತ್ತಿರ ಕಾಂಗ್ರೆಸ್‌ನ 55 ಶಾಸಕರ ಟಾರ್ಗೆಟ್ ಲಿಸ್ಟ್ ಇದೆ. ಅದರಲ್ಲಿ ನಾನು ಇದ್ದರೂ ಇರಬಹುದು. ಕಾಂಗ್ರೆಸ್‌ನ 55 ಮಂದಿ ಶಾಸಕರ ಪಟ್ಟಿಯನ್ನು ಬಿಜೆಪಿಗರು ಮಾಡಿದ್ದಾರೆ. ಆ 55 ಶಾಸಕರಿಗೆ ಸಿಬಿಐ, ಇ.ಡಿ.(ಜಾರಿ ನಿರ್ದೇಶನಾಲಯ) ದಾಳಿ ನಡೆಸುವ ಬೆದರಿಕೆ ಹಾಕುತ್ತಿದ್ದಾರೆ. ಈಗಾಗಲೇ ಬಿಜೆಪಿಯವರು ಆ ಶಾಸಕರ ಮನೆಗಳಿಗೆ ತಮ್ಮ ಏಜೆಂಟರನ್ನು ಕಳಿಸಿ, ಬೆದರಿಕೆ ಹಾಕಿದ್ದಾರೆ. ಬಿಜೆಪಿಗೆ ಬನ್ನಿ, ಬರದೆ ಹೋದರೆ ಸಿಬಿಐ, ಇಡಿ ದಾಳಿ ಮಾಡಿಸಿ, ನಿಮ್ಮ ಅಕ್ರಮ ಆಸ್ತಿ ಹೊರಗೆ ಎಳೆಸುತ್ತೇವೆ ಎನ್ನುತ್ತಿದ್ದಾರೆ. ಆ ಲಿಸ್ಟ್‌ನಲ್ಲಿ ನಾನು ಇದ್ದರೂ ಇರಬಹುದು. ಹೀಗಾಗಿ, ನಮ್ಮ ಶಾಸಕರಿಗೆ ಈ ಬಗ್ಗೆ ಭಯ ಇದೆ ಎಂದರು.

ಆದರೆ, ಬಿಜೆಪಿಯವರ ಇಂತಹ ಬೆದರಿಕೆಗೆ ನಾನು ಹೆದರುವವನಲ್ಲ. ಅವರು ನನ್ನನ್ನು ಏನು ಮಾಡಲೂ ಸಾಧ್ಯವಿಲ್ಲ. ನನ್ನ ಮೇಲೆ ಇ.ಡಿ. ಸೇರಿ ಯಾವುದೇ ದಾಳಿ ಮಾಡಿದರೂ ನಾನು ಅದನ್ನು ಎದುರಿಸಲು ಸಜ್ಜಾಗಿದ್ದೇನೆ. ಮೊನ್ನೆಯಷ್ಟೇ, ನಮ್ಮ ಬಳ್ಳಾರಿ ಜಿಲ್ಲೆಯ ಶಾಸಕರಾದ ಭರತ್‌ ರೆಡ್ಡಿ, ತುಕಾರಾಮ್, ನಾಗೇಂದ್ರ ಅವರ ಮನೆಗಳ ಮೇಲೆ ದಾಳಿ ಮಾಡಿಸಿದರು. ಇವೆಲ್ಲ ಉದ್ದೇಶಪೂರ್ವಕ, ದ್ವೇಷದ, ಕುತಂತ್ರ ರಾಜಕಾರಣ ಎಂದು ಅವರು ದೂರಿದರು.

ಬಿಜೆಪಿಯವರು ಒಮ್ಮೆಯಾದರೂ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದಾರಾ?. ಸಮ್ಮಿಶ್ರ ಸರ್ಕಾರ, ಹಿಂಬಾಗಿಲಿನಿಂದ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿಯವರಿಗೆ ತಾಕತ್, ಧಮ್ ಇದ್ರೆ 2028ಕ್ಕೆ ಜನರ ಬಹುಮತದಿಂದ ಗೆದ್ದು ಬಂದು, ಅಧಿಕಾರ ಹಿಡಿಯಲಿ ಎಂದು ಅವರು ಸವಾಲು ಹಾಕಿದರು.

ಕಳೆದ ಬಾರಿ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದರು. ತಾವು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಬಿಜೆಪಿಯವರಿಗೆ ಗೊತ್ತಾಗಿದೆ. ಹೀಗಾಗಿ, ಅವರು ಕುತಂತ್ರ ರಾಜಕಾರಣವನ್ನೇ ಮಾಡಬೇಕು ಎಂದು ಆರೋಪಿಸಿದರು.

ಕಾಂಗ್ರೆಸ್ಸಲ್ಲಿ ‘ಕೈ-ಕೈ’ ಆಪರೇಷನ್‌

ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಡಿಕೆಶಿ ಮತ್ತು ಸಿದ್ದು ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಶಾಸಕರ ಬೆಂಬಲ ಹೆಚ್ಚಿಸಿಕೊಳ್ಳಲು ಕಸರತ್ತು ನಡೆಯುತ್ತಿದೆ. ಹೀಗಾಗಿ, ಡಿಕೆಶಿ ಮತ್ತು ಸಿದ್ದು ಬಣಗಳು ಉಭಯ ಬಣಗಳ ಶಾಸಕರನ್ನು ಸೆಳೆದುಕೊಳ್ಳಲ ಕುದುರೆ ವ್ಯಾಪಾರ ನಡೆಸುತ್ತಿವೆ.

- ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

- ಇತ್ತೀಚೆಗೆ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದು, ಡಿಕೆಶಿ ಬಣಗಳ ನಡುವೆ ಮೇಲಾಟ ನಡೆದಿತ್ತು

- ತಮ್ಮ ತಮ್ಮ ಬಣಗಳ ಬಲ ವರ್ಧನೆಗೆ ಸಿದ್ದು-ಡಿಕೆಶಿ ಬಣಗಳ ಯತ್ನ ಎಂದು ಬಿಜೆಪಿ ಆರೋಪ

- ಆದರೆ ಸರ್ಕಾರ ಬೀಳಿಸಲು ಬಿಜೆಪಿಯೇ ಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್‌ ಶಾಸಕ ಕಿಡಿ

- ಬಳ್ಳಾರಿ ಶಾಸಕರ ಮೇಲೆ ಇ.ಡಿ. ದಾಳಿ ಮಾಡಿಸಿದ್ದೂ ಇದೇ ಕಾರಣಕ್ಕೆ ಎಂದು ಆರೋಪ

- ಆದರೆ ಇಂಥ ಬೆದರಿಕೆಗೆ ಹೆದರಲ್ಲ ಎಂದು ಹುನಗುಂದ ಶಾಸಕ ಕಾಶಪ್ಪನವರ ಸ್ಪಷ್ಟೋಕ್ತಿ

- ತಾಕತ್ ಇದ್ರೆ 2028ಕ್ಕೆ ಬಹುಮತದಿಂದ ಗೆದ್ದು ಬಂದು, ಅಧಿಕಾರ ಹಿಡಿಯಲಿ: ಸವಾಲು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: BBK 12 - ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ - ರಘು ವಿರುದ್ಧ ರೊಚ್ಚಿಗೆದ್ದ ಜನತೆ