ಆಪರೇಷನ್ ಹಸ್ತ ಭೀತಿ: ಮತ್ತಷ್ಟುಬಿಜೆಪಿ ಸದಸ್ಯರು ದಾಂಡೇಲಿಗೆ ದೌಡು!

By Kannadaprabha News  |  First Published Jun 18, 2023, 5:16 AM IST

ಹು-ಧಾ ಮಹಾನಗರ ಪಾಲಿಕೆ ಮೇಯರ್‌-ಉಪ ಮೇಯರ್‌ ಚುನಾವಣೆಗೆ ದಿನಗಣನೆ ಕಳೆದಂತೆ ಬಿಜೆಪಿ ಪಾಳೆಯದಲ್ಲಿ ಸಂಚಲನ ಮೂಡಿದ್ದು ಶನಿವಾರ ಮೇಯರ್‌ ಈರೇಶ ಅಂಚಟಗೇರಿ ಸೇರಿದಂತೆ ಬಿಜೆಪಿ ಮತ್ತಷ್ಟುಸದಸ್ಯರು ದಾಂಡೇಲಿಯ ರೆಸಾರ್ಚ್‌ ಸೇರಿದ್ದಾರೆ.


ಧಾರವಾಡ (ಜೂ.18) ಹು-ಧಾ ಮಹಾನಗರ ಪಾಲಿಕೆ ಮೇಯರ್‌-ಉಪ ಮೇಯರ್‌ ಚುನಾವಣೆಗೆ ದಿನಗಣನೆ ಕಳೆದಂತೆ ಬಿಜೆಪಿ ಪಾಳೆಯದಲ್ಲಿ ಸಂಚಲನ ಮೂಡಿದ್ದು ಶನಿವಾರ ಮೇಯರ್‌ ಈರೇಶ ಅಂಚಟಗೇರಿ ಸೇರಿದಂತೆ ಬಿಜೆಪಿ ಮತ್ತಷ್ಟುಸದಸ್ಯರು ದಾಂಡೇಲಿಯ ರೆಸಾರ್ಚ್‌ ಸೇರಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರು ಎಲ್ಲಿ ಬಿಜೆಪಿ ಸದಸ್ಯರನ್ನು ಸೆಳೆದು ಆಡಳಿತ ಕೈ ಪಾಲಾಗುವುದು ಎಂಬ ಭೀತಿಯಲ್ಲಿ ಬಿಜೆಪಿ ಬಹುತೇಕ ಸದಸ್ಯರನ್ನು ಬಿಜೆಪಿ ಮುಖಂಡರು ದಾಂಡೇಲಿ ಹಾಗೂ ಗೋವೆಯ ರೆಸಾರ್ಚ್‌ಗೆ ಶುಕ್ರವಾರ ಕರೆದೊಯ್ದಿದ್ದರು.

Tap to resize

Latest Videos

ಮೇಯರ್‌ ಉಪ ಮೇಯರ್‌ ಚುನಾವಣೆ: ಪಾಲಿಕೆ ವಶಪಡಿಸಿಕೊಳ್ಳಲು ಕೈ ಕಾರ್ಯತಂತ್ರ

ಇದೀಗ ಮುಂದುವರೆದ ಭಾಗವಾಗಿ ಮೇಯರ್‌ ಈರೇಶ ಅಂಚಟಗೇರಿ ಸೇರಿದಂತೆ ಶಂಕರ ಶೆಳಕೆ, ನಿತೀನ ಇಂಡಿ, ರಾಮಣ್ಣ ಬಡಿಗೇರ, ಸತೀಶ ಹಾನಗಲ್‌ ಅವರು ಶನಿವಾರ ದಾಂಡೇಲಿಯ ಪ್ರತಿಷ್ಠಿತ ರೆಸಾರ್ಚ್‌ಗೆ ತೆರಳಿದ್ದಾರೆ. ಈ ಮೂಲಕ ಬಿಜೆಪಿ ಎಲ್ಲ ಸದಸ್ಯರು ಒಗ್ಗಟ್ಟಾಗಿದ್ದು ಮೇ 20ರಂದು ನಡೆಯಲಿರುವ ಚುನಾವಣೆಗೆ ನೇರವಾಗಿ ಬಂದು ಮತ ಹಾಕಲು ಯೋಜನೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಸೆಂಟ್ರಲ್‌ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅವರದ್ದಾಗಿದೆ.

ಪಾಲಿಕೆ ಸದಸ್ಯರನ್ನು ಕಾಯುವ ಕೆಲಸ ಟೆಂಗಿನಕಾಯಿ ಅವರು ಜೋಶಿ ಅಣತಿಯಂತೆ ಹೊತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಪಾಲಿಕೆ ಸದಸ್ಯರೊಂದಿಗೆ ಟೆಂಗಿನಕಾಯಿ ಹಾಗೂ ಹುಬ್ಬಳ್ಳಿಯ ಕೆಲವು ಬಿಜೆಪಿ ಮುಖಂಡರೂ ಇದ್ದಾರೆ ಎಂಬ ಮಾಹಿತಿ ಇದೆ.

ಈಗಾಗಲೇ ಬಿಜೆಪಿ ಸದಸ್ಯರಿಗೆ ಗಾಳ ಹಾಕಿರುವ ಕೈ ಮುಖಂಡರು ರೆಸಾರ್ಚ್‌ ಸೇರಿದ ಪಾಲಿಕೆ ಸದಸ್ಯರ ಕುಟುಂಬದ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮಾಹಿತಿ ಪ್ರಕಾರ ಒಬ್ಬ ಸದಸ್ಯರಿಗೆ .1.20 ಕೋಟಿ ನೀಡಲು ಕಾಂಗ್ರೆಸ್‌ ಸಿದ್ಧವಾಗಿದೆ. ಇದರೊಂದಿಗೆ ಪಕ್ಷಾಂತರ ಮಾಡಿದಾಗ ಸದಸ್ಯತ್ವ ಅನರ್ಹವಾದರೆ ಕಾಂಗ್ರೆಸ್ಸಿನಿಂದ ಮತ್ತೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಡುವುದು ಅಥವಾ ನಾಮನಿರ್ದೇಶನ ಮಾಡಲು ಸಹ ಕಾಂಗ್ರೆಸ್‌ ಸಿದ್ಧವಾಗಿದೆ. ಆದರೆ, ಬಿಜೆಪಿಯಿಂದ ಆಯ್ಕೆಯಾದ ಸದಸ್ಯರು ಇದಕ್ಕೆ ಸೊಪ್ಪು ಹಾಕಿಲ್ಲ ಎಂದು ಗೊತ್ತಾಗಿದೆ. ನಿರಂತರವಾಗಿ ಆಮಿಷವೊಡ್ಡುತ್ತಿದ್ದು ಯಾವುದೇ ಕಾರಣಕ್ಕೂ ನಮ್ಮ ಮನೆಯಿಂದ ನಾವು ಹೊರ ಬರೋದಿಲ್ಲ ಎಂದು ರೆಸಾರ್ಚ್‌ನಲ್ಲಿರುವ ಸದಸ್ಯರೊಬ್ಬರು ಪತ್ರಿಕೆಗೆ ತಿಳಿಸಿದ್ದು, ಬಿಜೆಪಿಗಿರುವ ತಮ್ಮ ಬದ್ಧತೆ ತಿಳಿಸಿದ್ದಾರೆ.

ಹು-ಧಾ ಪಾಲಿಕೆ ಚುನಾವಣೆ: 'ಆಪರೇಷನ್ ಹಸ್ತ' ಭೀತಿಯಿಂದ ರೆಸಾರ್ಟ್ ಸೇರಿದ ಬಿಜೆಪಿ ಸದಸ್ಯರು

ಮೇಯರ್‌ -ಉಪ ಮೇಯರ್‌ ಚುನಾವಣೆಗೆ ಮೂರು ದಿನಗಳು ಮಾತ್ರ ಬಾಕಿ ಉಳಿದಿದ್ದು ಇನ್ನೂ ಏನೇನು ಬೆಳವಣಿಗೆಗಳು ನಡೆಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

click me!