
ಬೆಂಗಳೂರು (ಜೂ.18): ‘ಉಚಿತ ಅಕ್ಕಿ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು, ಕಾಂಗ್ರೆಸ್ ಪಕ್ಷ ನಿರಂತರ ಸುಳ್ಳು ಹೇಳುತ್ತಿದೆ. ರಾಜ್ಯ ಸರ್ಕಾರ ಜೂ.9ರಂದು ಎಫ್‌ಸಿಐ ಪ್ರಾದೇಶಿಕ ಕಚೇರಿಗೆ ಹೆಚ್ಚುವರಿ ಅಕ್ಕಿ ಕೊಡಬೇಕೆಂದು ಮನವಿ ಮಾಡುವುದಕ್ಕಿಂತ ಮುಂಚೆಯೇ ಸಚಿವಾಲಯಗಳ ಆಂತರಿಕ ಸಭೆಯಲ್ಲಿ ಜೂ.8ರಂದು ಬೆಲೆ ಏರಿಕೆಯಾಗದಂತೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಅಷ್ಟೇ ಅಲ್ಲ, ರಾಜ್ಯದಲ್ಲಿ ಚುನಾವಣೆ ನಡೆಯುವ ಮುನ್ನವೇ ಬೆಲೆ ಏರಿಕೆ ನಿಯಂತ್ರಿಸಲು ಮುಕ್ತ ಮಾರುಕಟ್ಟೆಮಾರಾಟ ಯೋಜನೆ ಕುರಿತು ಪರಿಶೀಲಿಸಲು ಮೇ 2ರಂದು ಸೂಚಿಸಲಾಗಿತ್ತು’ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಶನಿವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ನೀಡಲು ಹೊರಟ ಅಕ್ಕಿಯನ್ನು ದುರುದ್ದೇಶದಿಂದ ನೀತಿ ನಿಯಮ ಬದಲಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ನಿಲ್ಲಿಸಿದೆ ಎಂಬ ಆರೋಪ ಮಾಡಲಾಗಿದೆ. ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡಲು ಎಫ್‌ಸಿಐ (ಭಾರತೀಯ ಆಹಾರ ನಿಗಮ) ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಕೇಂದ್ರ ಆಹಾರ ನಿಗಮದವರು ಅನುಮತಿ ಇದೆ ಎಂದು ಪತ್ರ ಬರೆದಿದ್ದರು. ನಂತರ ಕೇಂದ್ರ ಸಭೆ ನಡೆಸಿ ನಿಯಮ ಬದಲಿಸಿ ಹೆಚ್ಚುವರಿ ಅಕ್ಕಿ ನೀಡುವುದಿಲ್ಲ ಎಂಬುದಾಗಿ ಹೇಳಿದೆ ಎಂದು ಆರೋಪಿಸಲಾಗಿದೆ. ಆದರೆ, ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ರಾಜ್ಯದ ಜನತೆಯ ಮುಂದೆ ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿದರು.
ಕಾಂಗ್ರೆಸ್ ‘ಗ್ಯಾರಂಟಿ’ಗೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲವೆನ್ನುವುದು ಸರಿಯಲ್ಲ: ಸಂಸದ ಸಿದ್ದೇಶ್ವರ
‘ರಾಜ್ಯ ಸರ್ಕಾರವು ಎಫ್‌ಸಿಐ ಪ್ರಾದೇಶಿಕ ಕಚೇರಿಗೆ ಹೆಚ್ಚುವರಿ ಐದು ಕೆ.ಜಿ. ಅಕ್ಕಿ ನೀಡಬೇಕು ಎಂದು ಮನವಿ ಮಾಡುವುದಕ್ಕಿಂತ ಮುಂಚಿತವಾಗಿಯೇ ದೆಹಲಿಯಲ್ಲಿ ಸಚಿವಾಲಯಗಳ ಆಂತರಿಕ ವಿಶೇಷ ಸಭೆ ನಡೆಸಿ ಬಡವರ, ಮಧ್ಯಮ ವರ್ಗದವರ ಹಿತಾಸಕ್ತಿಯಿಂದ ಖಾಸಗಿ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು ಗೋಧಿ, ಅಕ್ಕಿ ದಾಸ್ತಾನು ಇಡಲು ಮಿತಿ ಹೇರುವ ಕುರಿತು ಚರ್ಚಿಸಲಾಗಿತ್ತು. ರಾಜ್ಯದಲ್ಲಿ ಚುನಾವಣೆ ನಡೆಯುವ ಮೊದಲೇ, ಅಂದರೆ ಮೇ 2ರಂದು ಕೇಂದ್ರ ಸಚಿವ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರು ತಮ್ಮ ಅಸಮರ್ಥತೆಯನ್ನು ಮರೆಮಾಚಲು ಸುಳ್ಳನ್ನು ಹೇಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆ ಜನತೆಗೆ ತಲುಪಿಸಲು ಸಾಧ್ಯವಾಗದ ಕಾರಣ ಕೇಂದ್ರವನ್ನು ದೂಷಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಟೀಕಾಪ್ರಹಾರ ನಡೆಸಿದರು.
ಮನೆ ಯಜಮಾನಿಗೆ ಗೃಹಲಕ್ಷ್ಮಿ ಸವಲತ್ತು ಸಿಗಬೇಕು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
‘ಕೇಂದ್ರದ ಸಬ್ಸಿಡಿಯ ಅಕ್ಕಿ ಯೋಜನೆಯನ್ನೇ ತಮ್ಮದೇ ಯೋಜನೆ ಎಂದು ಬಿಂಬಿಸಿ ಜಾರಿಗೆ ತರಲು ಕಾಂಗ್ರೆಸ್ ಬಯಸಿತ್ತು. ಆದರೆ, ಈಗ ಸಿಕ್ಕಿಬಿದ್ದ ಬಳಿಕ ಸಾರ್ವಜನಿಕರನ್ನು ಮರಳು ಮಾಡಲು ಪ್ರಯತ್ನಿಸುತ್ತಿದೆ. ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ ಗ್ಯಾರಂಟಿಯಂತೆ ನಡೆದುಕೊಳ್ಳಬೇಕು. 10 ಕೆ.ಜಿ. ಅಕ್ಕಿ ನೀಡುವ ಬದ್ಧತೆಯ ಬಗ್ಗೆ ಗಂಭೀರವಾಗಿದ್ದರೆ ಮುಕ್ತ ಮಾರುಕಟ್ಟೆಯಿಂದ 10 ಕೆ.ಜಿ. ಅಕ್ಕಿಯನ್ನು ಖರೀದಿಸಿ ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡುವ ಐದು ಕೆ.ಜಿ. ಅಕ್ಕಿಯನ್ನು ಹೆಚ್ಚುವರಿ ವಿತರಣೆ ಮಾಡಬೇಕು. ರಾಜ್ಯದ ಜನತೆಗೆ ಒಟ್ಟು 15 ಕೆ.ಜಿ. ಅಕ್ಕಿ ನೀಡಬೇಕು. ಇಲ್ಲದಿದ್ದರೆ ವಚನ ಭ್ರಷ್ಟರಾಗಲಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ಪಿ.ಸಿ.ಮೋಹನ್, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.