ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ಬೇರೆಡೆ ಸ್ಪರ್ಧಿಸಲ್ಲ: ಸಂಸದೆ ಸುಮಲತಾ ಅಂಬರೀಷ್‌

By Govindaraj S  |  First Published Jan 26, 2024, 4:23 AM IST

‘ನಾನು ರಾಜಕೀಯಕ್ಕೆ ಬಂದಿರುವುದೇ ಮಂಡ್ಯಕ್ಕಾಗಿ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಟ್ಟು ಹೋಗುವುದಿಲ್ಲ. ಅಭಿಮಾನ, ಪ್ರೀತಿ ಸಿಕ್ಕಿರುವ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋದರೆ ಅದಕ್ಕೆ ಯಾವುದೇ ಅರ್ಥ ಇರಲ್ಲ’ ಎಂದು ಸಂಸದೆ ಸುಮಲತಾ ಅಂಬರೀಷ್‌ ಸ್ಪಷ್ಟವಾಗಿ ಹೇಳಿದ್ದಾರೆ. 


ಬೆಂಗಳೂರು (ಜ.26): ‘ನಾನು ರಾಜಕೀಯಕ್ಕೆ ಬಂದಿರುವುದೇ ಮಂಡ್ಯಕ್ಕಾಗಿ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಟ್ಟು ಹೋಗುವುದಿಲ್ಲ. ಅಭಿಮಾನ, ಪ್ರೀತಿ ಸಿಕ್ಕಿರುವ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋದರೆ ಅದಕ್ಕೆ ಯಾವುದೇ ಅರ್ಥ ಇರಲ್ಲ’ ಎಂದು ಸಂಸದೆ ಸುಮಲತಾ ಅಂಬರೀಷ್‌ ಸ್ಪಷ್ಟವಾಗಿ ಹೇಳಿದ್ದಾರೆ. ಗುರುವಾರ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಮುಖಂಡರು ತಮ್ಮನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆ ಸ್ಪರ್ಧಿಸುವುದಿಲ್ಲ. ಅಂಬರೀಷ್‌ ಅವರನ್ನು ಮಂಡ್ಯದ ಜನತೆ ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದಾರೆ. ಅಂತೆಯೇ ನನಗೂ ಆಶೀರ್ವಾದ ಮಾಡಿದ್ದಾರೆ. 

ಅಲ್ಲಿ ಅಭಿಮಾನ, ಪ್ರೀತಿ ಸಿಕ್ಕಿದೆ. ಸ್ಪರ್ಧಿಸಿದರೆ ಮಂಡ್ಯದಲ್ಲಿಯೇ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಸ್ಪರ್ಧಿಸುವುದು ಬೇಕಾಗಿಲ್ಲ ಎಂದು ಹೇಳಿದರು. ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣೆಗೆ ಪ್ರಯತ್ನ ಪಟ್ಟಿದ್ದೇನೆ ಎಂಬುದೆಲ್ಲ ಸತ್ಯಕ್ಕೆ ದೂರವಾದುದು. ನನಗೆ ಟಿಕೆಟ್‌ ಕೊಡಿ ಎಂದು ಕೇಳಿಲ್ಲ. ನನ್ನ ಬೆಂಬಲಿಗರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿದ್ದಾರೆ. ನನ್ನ ಗೆಲುವಿಗೆ ಶ್ರಮಪಟ್ಟಿರುವವರಲ್ಲಿ ಪ್ರಮುಖವಾಗಿ ಕಾಂಗ್ರೆಸ್ಸಿಗರು ಸಹ ಇದ್ದಾರೆ. ಅವರಿಗೆ ಅಂಬರೀಷ್‌ ಕುಟುಂಬದ ಮೇಲೆ ವಿಶ್ವಾಸ ಇದೆ. ಅದೇ ವಿಶ್ವಾಸದ ಮೇಲೆ ಆಂತರಿಕವಾಗಿ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ಬಂದಿದೆ. ಆದರೆ ನಾನು ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದು ಸುಮಲತಾ ಹೇಳಿದರು.

Tap to resize

Latest Videos

ಸಂಸದ ಡಾ.ಉಮೇಶ್‌ ಜಾಧವ್‌ಗೆ ಪ್ರೋಟೋಕಾಲ್‌ ಗೊತ್ತಿದೆಯಾ: ಸಚಿವ ಪ್ರಿಯಾಂಕ್‌ ಖರ್ಗೆ

ಬಿಜೆಪಿಗೆ ನಾನು ಬದ್ಧತೆ ಇರುವ ಬಗ್ಗೆ ಪತ್ರ ಬರೆದು ಕೊಟ್ಟಿದ್ದೇನೆ. ಬಿಜೆಪಿಗೆ ಬೆಂಬಲ ನೀಡಿರುವ ನಿಲುವಿಗೆ ಬದ್ಧವಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಭಿಮಾನ ಇದೆ. ದೇಶದ ಅಭಿವೃದ್ಧಿಗೆ ಮೋದಿ ಅವರ ನಾಯಕತ್ವವೇ ಸರಿಯಾಗಿದೆ. ಮಂಡ್ಯ ಜಿಲ್ಲೆಯ ಹೊಸ ಅಧ್ಯಕ್ಷರು ತಮ್ಮನ್ನು ಭೇಟಿಯಾಗಿದ್ದು, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಲಾಗಿದೆ. ಅಲ್ಲದೇ, ಜಿಲ್ಲೆಯಲ್ಲಿ ಯಾವ ರೀತಿಯ ಕೆಲಸಗಳನ್ನು ಮಾಡಬೇಕು ಎಂಬ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದರು.

ಹಾಲಿ ಸಂಸದರು ಎಂಬ ಸ್ಥಾನಮಾನ ಇದೆ. ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವುದು ವಾಡಿಕೆ. ಮೊದಲ ಬಾರಿಗೆ ಮಂಡ್ಯದಲ್ಲಿ ಹೆಚ್ಚು ಮತಗಳು ಲಭಿಸಿವೆ. ಮಂಡ್ಯದಲ್ಲಿ ಬಿಜೆಪಿಯನ್ನು ಉಳಿಸಬೇಕಾಗಿದ್ದು, ನಾವು ಗೆಲುವು ಸಾಧಿಸುತ್ತೇವೆ. ನಾನೇನು ದೊಡ್ಡ ನಾಯಕಿ ಎಂದು ಹೇಳುತ್ತಿಲ್ಲ. ನನಗಿಂತ ದೊಡ್ಡವರಿದ್ದಾರೆ. ಆದರೆ ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ನನ್ನ ಜತೆ ನನ್ನ ಅಭಿಮಾನಿಗಳು ಮತ್ತು ಮಂಡ್ಯದ ಜನತೆ ಇದ್ದಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಕಾಂಗ್ರೆಸ್‌ನಿಂದ ಆಹ್ವಾನ ಬಂದಿದೆ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭೇಟಿ ಮಾಡುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮನ್ನು ಭೇಟಿ ಮಾಡುವುದಕ್ಕೆ ಯಾವುದೇ ಆಕ್ಷೇಪ ಇಲ್ಲ. ಅದೊಂದು ಸೌಹಾರ್ದಯುತ ಭೇಟಿಯಾಗಲಿದ್ದು, ಅದನ್ನು ಗೌರವಿಸುತ್ತೇನೆ. ಇನ್ನು, ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡರೂ ಸೀಟು ಹಂಚಿಕೆ ಬಗ್ಗೆ ಚರ್ಚೆಯಾಗಿಲ್ಲ. ಯಾವುದೇ ಕಾರಣಕ್ಕೂ ಅಧಿಕೃತವಾಗಿ ಬಿಜೆಪಿಯಿಂದ ಯಾವುದೇ ಸೂಚನೆ ಇಲ್ಲ. ಜೆಡಿಎಸ್‌ಗೂ ಯಾವುದೇ ನಿರ್ದೇಶನ ಇಲ್ಲ ಎಂದರು.

ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವೆ ಎಂದಿದ್ದ ದೇವೇಗೌಡರು: ಸಚಿವ ಚಲುವರಾಯಸ್ವಾಮಿ

ಕೇಂದ್ರದ ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಲು ಸಮರ್ಪಕವಾಗಿ ಕೆಲಸ ಮಾಡಿದ್ದೇನೆ. ಅನುದಾನ ಬಳಕೆ ಮಾಡಿಕೊಂಡು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ನನ್ನ ಬಗ್ಗೆ ಕಪ್ಪುಚುಕ್ಕೆ ಇಲ್ಲ. ಸಂಸತ್‌ನಲ್ಲಿ ಮಾತನಾಡಿರುವ ವಿಷಯಗಳಲ್ಲಿಯೂ ಸಮರ್ಥವಾಗಿ ನಿಭಾಯಿಸಿದ್ದೇನೆ. ಹೀಗಾಗಿ ಬಿಜೆಪಿಯೇ ಮಂಡ್ಯ ಜಿಲ್ಲೆಯ ಸ್ಥಾನವನ್ನು ಉಳಿಸಿಕೊಳ್ಳಲಿದೆ ಎಂಬ ನಂಬಿಕೆ ಇದೆ. ಖಂಡಿತವಾಗಿಯೂ ಬಿಜೆಪಿ ನನಗೆ ಟಿಕೆಟ್‌ ನೀಡಲಿದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

click me!