ವಿಧಾನಪರಿಷತ್‌ ನಾಮನಿರ್ದೇಶಿತ ಸ್ಥಾನ : 4 ಹೆಸರಿಗೆ ಕಡೆಗೂ ಕಾಂಗ್ರೆಸ್‌ ವರಿಷ್ಠರ ಸಮ್ಮತಿ

Kannadaprabha News   | Kannada Prabha
Published : Aug 26, 2025, 05:44 AM IST
Vidhan soudha

ಸಾರಾಂಶ

ರಾಜ್ಯದಲ್ಲಿ ಖಾಲಿ ಇರುವ ನಾಲ್ಕು ವಿಧಾನಪರಿಷತ್‌ ನಾಮನಿರ್ದೇಶಿತ ಸ್ಥಾನಗಳ ನೇಮಕಾತಿಗೆ ಏಳು ತಿಂಗಳ ಹಗ್ಗ ಜಗ್ಗಾಟದ ಬಳಿಕ ಕೊನೆಗೂ ಕಾಂಗ್ರೆಸ್‌ ಹೈಕಮಾಂಡ್‌ ಒಪ್ಪಿಗೆ ದೊರೆತಿದೆ.

ಬೆಂಗಳೂರು : ರಾಜ್ಯದಲ್ಲಿ ಖಾಲಿ ಇರುವ ನಾಲ್ಕು ವಿಧಾನಪರಿಷತ್‌ ನಾಮನಿರ್ದೇಶಿತ ಸ್ಥಾನಗಳ ನೇಮಕಾತಿಗೆ ಏಳು ತಿಂಗಳ ಹಗ್ಗ ಜಗ್ಗಾಟದ ಬಳಿಕ ಕೊನೆಗೂ ಕಾಂಗ್ರೆಸ್‌ ಹೈಕಮಾಂಡ್‌ ಒಪ್ಪಿಗೆ ದೊರೆತಿದೆ.

ಡಾ.ಆರತಿ ಕೃಷ್ಣ, ರಮೇಶ್ ಬಾಬು, ಎಫ್‌.ಎಚ್.ಜಕ್ಕಪ್ಪನವರ್, ಶಿವಕುಮಾರ್‌ ಅವರ ಹೆಸರು ಅಂತಿಮಗೊಳಿಸಲಾಗಿದ್ದು, ರಾಜ್ಯದಿಂದ ಶಿಫಾರಸ್ಸಾಗಿದ್ದ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಡಿ.ಜಿ.ಸಾಗರ್‌ ಹಾಗೂ ದಿನೇಶ್ ಅಮಿನ್‌ಮಟ್ಟು ಅವರ ಹೆಸರು ಕೈಬಿಡಲಾಗಿದೆ.

ದಲಿತ ನಾಯಕ ಡಿ.ಜಿ.ಸಾಗರ್‌ ಅವರ ಬದಲಿಗೆ ಹುಬ್ಬಳ್ಳಿ ಧಾರವಾಡದ ಕಾಂಗ್ರೆಸ್‌ ನಾಯಕ, ಎಐಸಿಸಿ ಎಸ್‌ಸಿ ವಿಭಾಗದ ಪ್ರಧಾನ ಕಾರ್ಯದರ್ಶಿ ಜಕ್ಕಪ್ಪನವರ್‌ ಸ್ಥಾನ ಗಿಟ್ಟಿಸಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳೆದ ಬಾರಿ ಮಾಧ್ಯಮ ಸಲಹೆಗಾರರಾಗಿದ್ದ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಬದಲಿಗೆ ಮೈಸೂರಿನ ಹಿರಿಯ ಪತ್ರಕರ್ತ ಹಾಗೂ ಸಿದ್ದರಾಮಯ್ಯ ಅವರ ಆಪ್ತ ಶಿವಕುಮಾರ್‌ ಅವರಿಗೆ ಅವಕಾಶ ಒಲಿದಿರುವುದಾಗಿ ತಿಳಿದು ಬಂದಿದೆ.

ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಸದಸ್ಯರ ಪೈಕಿ ಯು.ಬಿ.ವೆಂಕಟೇಶ್‌, ಪ್ರಕಾಶ್‌ ರಾಥೋಡ್‌, ಸಿ.ಪಿ. ಯೋಗೇಶ್ವರ್‌ (ರಾಜೀನಾಮೆ) ಹಾಗೂ ತಿಪ್ಪೇಸ್ವಾಮಿ ಅವರ ಅವಧಿ ಜನವರಿ ವೇಳೆಗೆ ಮುಕ್ತಾಯಗೊಂಡಿತ್ತು.

ಆಕಾಂಕ್ಷಿಗಳಿಂದ ತೀವ್ರ ಒತ್ತಡ ಇದ್ದರೂ ಖಾಲಿ ಇರುವ ಸ್ಥಾನಗಳಿಗೆ ಜನವರಿಯಿಂದ ಈವರೆಗೆ ಸದಸ್ಯರನ್ನು ಅಂತಿಮಗೊಳಿಸಲು ಸರ್ಕಾರ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ಆಸಕ್ತಿ ತೋರಿರಲಿಲ್ಲ.

ಜೂನ್‌ ತಿಂಗಳಲ್ಲಿ ರಾಜ್ಯದ ಎನ್‌ಆರ್‌ಐ ಫೋರಂ ಉಪಾಧ್ಯಕ್ಷರು ಹಾಗೂ ಎಐಸಿಸಿ ಸಾಗರೋತ್ತರ ಸಮಿತಿ ಕಾರ್ಯದರ್ಶಿಗಳೂ ಆಗಿರುವ ಡಾ.ಆರತಿ ಕೃಷ್ಣ ಅವರನ್ನು ಹೈಕಮಾಂಡ್‌ ಕೋಟಾದಲ್ಲಿ ನಾಮನಿರ್ದೇಶನ ಮಾಡಲು ಅಂತಿಮಗೊಳಿಸಲಾಗಿತ್ತು.

ಇನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲದಿಂದಾಗಿ ದಲಿತ ಮುಖಂಡ ಡಿ.ಜಿ.ಸಾಗರ್‌, ಕೆಪಿಸಿಸಿ ಕೋಟಾದಲ್ಲಿ ರಮೇಶ್ ಬಾಬು, ಮುಖ್ಯಮಂತ್ರಿ ಸಿದ್ದರಾಮಯ್ಯ ಅ‍ವರ ಶಿಫಾರಸಿನ ಹಿನ್ನೆಲೆಯಲ್ಲಿ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅವರಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು.

ಇನ್ನೇನು ದಿನೇಶ್ ಅಮಿನ್‌ಮಟ್ಟು ಪರಿಷತ್‌ ಸದಸ್ಯರಾಗಲು ಆದೇಶ ಒಂದೇ ಬಾಕಿ ಎಂಬಂತಾಗಿತ್ತು. ಅಷ್ಟರಲ್ಲೇ, ದಿನೇಶ್ ಅಕ್ರಮವಾಗಿ ನಿವೇಶನ ಪಡೆದಿದ್ದಾರೆಂದು ದೂರು ನೀಡಿ ನೇಮಕಾತಿ ತಡೆಯುವಂತೆ ಜಿ.ಎಂ.ಗಾಡ್ಕರ್‌ ಎಂಬ ವ್ಯಕ್ತಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಇದಕ್ಕೆ ಸ್ಪಷ್ಟನೆಯಾಗಿ ದಿನೇಶ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು.

ಬೆನ್ನಲ್ಲೇ ದಿನೇಶ್ ಅಮಿನ್‌ಮಟ್ಟು ಹಾಗೂ ಡಿ.ಜಿ.ಸಾಗರ್‌ ನೇಮಕಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಪಟ್ಟಿ ತಡೆ ಹಿಡಿಯಲಾಗಿತ್ತು. ಇಬ್ಬರೂ ಪಕ್ಷದಿಂದ ಹೊರಗಿನವರು ಎಂಬ ಆಕ್ಷೇಪಣೆಯನ್ನು ಕೆಲ ನಾಯಕರು ಮಾಡಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರು ಅಮಿನ್‌ಮಟ್ಟು ಬದಲು ಶಿವಕುಮಾರ್‌ ಹೆಸರು ಶಿಫಾರಸು ಮಾಡಬೇಕಾಯಿತು ಎಂದು ತಿಳಿದುಬಂದಿದೆ.

- ಆರತಿ ಕೃಷ್ಣ, ರಮೇಶ್ ಬಾಬು, ಜಕ್ಕಪ್ಪನವರ್,ಶಿವಕುಮಾರ್‌ ಹೆಸರು ಬಹುತೇಕ ಫೈನಲ್‌- 7 ತಿಂಗಳ ಹಗ್ಗ ಜಗ್ಗಾಟ ಬಳಿಕ ಕಡೆಗೂ ಅಸ್ತು

ಜಾತಿವಾರು ಲೆಕ್ಕಾಚಾರ

ನಾಲ್ಕು ಮಂದಿ ಸದಸ್ಯರ ಪೈಕಿ ಆರತಿ ಕೃಷ್ಣ ಅವರು ಒಕ್ಕಲಿಗ, ರಮೇಶ್ ಬಾಬು ಅವರು ಹಿಂದುಳಿದ ವರ್ಗ, ಎಪ್‌.ಎಚ್‌.ಜಕ್ಕಪ್ಪನವರ್‌ ಹಾಗೂ ಶಿವಕುಮಾರ್‌ ಅವರು ದಲಿತ ಸಮುದಾಯ (ಬಲಗೈ)ಕ್ಕೆ ಸೇರಿದವರಾಗಿದ್ದಾರೆ.

ಯು.ಬಿ.ವೆಂಕಟೇಶ್‌, ಪ್ರಕಾಶ್‌ ರಾಥೋಡ್‌, ತಿಪ್ಪೇಸ್ವಾಮಿ ಅವಧಿ ಮುಕ್ತಾಯ, ಸಿ.ಪಿ. ಯೋಗೇಶ್ವರ್‌ ರಾಜೀನಾಮೆಯಿಂದ 4 ಸ್ಥಾನ ತೆರವು

ವಿಧಾನ ಪರಿಷತ್‌ನ ನಾಲ್ಕು ನಾಮ ನಿರ್ದೇಶಿತ ಸ್ಥಾನಗಳ ನೇಮಕದ ಕುರಿತು ಹಲವು ತಿಂಗಳಿನಿಂದ ನಡೆದಿದ್ದ ಹಗ್ಗಜಗ್ಗಾಟಡಾ.ಆರತಿ ಕೃಷ್ಣ, ರಮೇಶ್‌ ಬಾಬು, ದಿನೇಶ್‌ ಅಮೀನಮಟ್ಟು, ಡಿ.ಜಿ.ಸಾಗರ್‌ ಹೆಸರನ್ನು ವರಿಷ್ಠರಿಗೆ ರವಾನಿಸಿದ್ದ ರಾಜ್ಯ ಘಟಕ

ಈ ಪೈಕಿ ಎರಡು ಸ್ಥಾನಗಳಿಗೆ ಅಯ್ಕೆ ಕುರಿತು ಕಳೆದ 7 ತಿಂಗಳಿನಿಂದ ರಾಜ್ಯ- ಕೇಂದ್ರ ನಾಯಕರ ನಡುವೆ ಸಾಕಷ್ಟು ಚರ್ಚೆ

ಅಂತಿಮವಾಗಿ ದಿನೇಶ್‌ ಅಮೀನ್‌ಮಟ್ಟು, ಡಿ.ಜಿ.ಸಾಗರ್‌ ಬದಲಿಗೆ, ಶಿವಕುಮಾರ್‌, ಜಕ್ಕಪ್ಪನವರ್‌ ಹೆಸರು ವರಿಷ್ಠರಿಂದ ಅಂತಿಮ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು