
ನವದೆಹಲಿ : ವಿಧಾನಸಭೆಯ ಕಲಾಪದಲ್ಲಿ ಆರ್‌ಎಸ್‌ಎಸ್ ಗೀತೆ ‘ನಮಸ್ತೆ ಸದಾ ವತ್ಸಲೆ...’ ಹಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಲಿ ಎಂದು ಕಾಂಗ್ರೆಸ್ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಯಾರಿಗೆ ಸಂದೇಶ ಕೊಡಲು ಅವರು ಆರ್‌ಎಸ್‌ಎಸ್ ಪ್ರಾರ್ಥನೆ ಮಾಡಿದ್ದಾರೋ ಗೊತ್ತಿಲ್ಲ. ಕೇವಲ ಉಪ ಮುಖ್ಯಮಂತ್ರಿಯಾಗಿ ಅವರು ಸಂಘದ ಪ್ರಾರ್ಥನೆ ಮಾಡೋದರಲ್ಲಿ ಅಭ್ಯಂತರ ಇಲ್ಲ.
ಆದರೆ, ಅವರು ಕೆಪಿಸಿಸಿ ಅಧ್ಯಕ್ಷರೂ ಕೂಡ ಹೌದು. ಕೆಪಿಸಿಸಿ ಅಧ್ಯಕ್ಷರಾಗಿ ಆರ್‌ಎಸ್‌ಎಸ್ ಪ್ರಾರ್ಥನೆ ಮಾಡಿದ್ದು ತಪ್ಪು. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರಿಂದ ಆರ್‌ಎಸ್‌ಎಸ್ ಪ್ರಾರ್ಥನೆ ಮಾಡಿದ್ದಕ್ಕೆ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.
ಮಹಾತ್ಮ ಗಾಂಧಿಯನ್ನು ಕೊಂದವರು ಅವರು. ಆರ್‌ಎಸ್‌ಎಸ್ ದೇಶದಲ್ಲಿ ಈಗಾಗಲೇ ಮೂರು ಬಾರಿ ನಿಷೇಧಕ್ಕೆ ಒಳಗಾಗಿತ್ತು ಎಂದರು.
ಸಂಘದ ಪ್ರಾರ್ಥನೆಗೆ ಬಿಜೆಪಿಯವರ ಸಮರ್ಥನೆ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯವರು ಇಂತಹ ವಿಚಾರಗಳನ್ನು ಸಮರ್ಥನೆ ಮಾಡಿಕೊಳ್ಳಬೇಕು. ಹಾಗಾಗಿ, ಮಾಡಿಕೊಳ್ಳುತ್ತಾರೆ ಎಂದರು.
ಡಿಕೆಶಿ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿ, ಅವರು ಆ ಧೈರ್ಯ ಮಾಡಲ್ಲ ಅಂತಾ ಅಂದುಕೊಂಡಿದ್ದೇನೆ. ಆದರೆ, ಕೃಷಿಕರು, ವ್ಯಾಪಾರಸ್ಥರು, ಉದ್ಯೋಗಸ್ಥರು, ರಾಜಕಾರಣಿ... ಹೀಗೆ ಡಿಕೆಶಿಯವರಿಗೆ ಹಲವು ಮುಖಗಳಿವೆ ಎಂದು ಹೇಳಿದರು.
ಡಿಕೆಶಿ ಬಗ್ಗೆ ಹೈಕಮಾಂಡ್,ಸಿಎಂ ಚರ್ಚೆ ನಡೆಸಲಿ: ಸತೀಶ್ ಜಾರಕಿಹೊಳಿ
ಬಾಗಲಕೋಟೆ: ವಿಧಾನಸಭೆಯೊಳಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ, ‘ಯಾಕೆ ಹಾಡಿದ್ದಾರೆಂದು ಅವರೇ ಉತ್ತರ ಕೊಡಬೇಕು. ಆದರೆ ಇದರ ಬಗ್ಗೆ ಪಕ್ಷದ ಹೈಕಮಾಂಡ್ ಮತ್ತು ಸಿಎಂ ಚರ್ಚೆ ನಡೆಸಬೇಕು. ರಾಜ್ಯದಲ್ಲಿ ಏನೇನು ನಡೆಯುತ್ತೆ ಅನ್ನೋ ಎಲ್ಲಾ ವಿಷಯ ರಾಹುಲ್ ಗಾಂಧಿ ಗಮನಕ್ಕೆ ಬರಲ್ಲ. ಹೀಗಾಗಿ ಈ ಎಲ್ಲಾ ವಿಷಯ ರಾಹುಲ್‌ಗೆ ಮುಟ್ಟಿಸೋ ಕೆಲಸ ಮಾಡಬೇಕು’ ಎಂದು ಹೇಳಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.