ದಿಲ್ಲಿಯಲ್ಲಿ ಸುಬ್ರಮಣ್ಯಸ್ವಾಮಿಯ ತರಹವೇ ರಾಜ್ಯದಲ್ಲಿ ಎ.ಕೆ.ಸುಬ್ಬಯ್ಯ ಪಕ್ಷದಲ್ಲಿ ಸಂಘದ ಹಸ್ತಕ್ಷೇಪದ ಕುರಿತು ಬಹಿರಂಗವಾಗಿ ಮಾತನಾಡತೊಡಗಿದಾಗ ಕರ್ನಾಟಕದ ಆರ್‌ಎಸ್‌ಎಸ್, ಶಿಕಾರಿಪುರದ ಯಡಿಯೂರಪ್ಪನವರನ್ನು ಗುರುತಿಸಿ ಬಿಜೆಪಿಯಲ್ಲಿ ಅವಕಾಶ ನೀಡತೊಡಗಿತು.
ಬೆಂಗಳೂರು (ಆ. 14): ದಿಲ್ಲಿಯಲ್ಲಿ ಸುಬ್ರಮಣ್ಯಸ್ವಾಮಿಯ ತರಹವೇ ರಾಜ್ಯದಲ್ಲಿ ಎ.ಕೆ.ಸುಬ್ಬಯ್ಯ ಪಕ್ಷದಲ್ಲಿ ಸಂಘದ ಹಸ್ತಕ್ಷೇಪದ ಕುರಿತು ಬಹಿರಂಗವಾಗಿ ಮಾತನಾಡತೊಡಗಿದಾಗ ಕರ್ನಾಟಕದ ಆರ್‌ಎಸ್‌ಎಸ್, ಶಿಕಾರಿಪುರದ ಯಡಿಯೂರಪ್ಪನವರನ್ನು ಗುರುತಿಸಿ ಬಿಜೆಪಿಯಲ್ಲಿ ಅವಕಾಶ ನೀಡತೊಡಗಿತು.
ಹೀಗಾಗಿ ಬಿಎಸ್‌ವೈ ಮತ್ತು ಸಂಘದ ಸಂಬಂಧ ಹೋ.ವೆ.ಶೇಷಾದ್ರಿ ನ.ಕೃಷ್ಣಪ್ಪ ಕಾಲದಲ್ಲಿ ಚೆನ್ನಾಗಿಯೇ ಇತ್ತು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಮುಖ್ಯ ಕಾರಣ ಸಂಘದ ಮೈ.ಚ.ಜಯದೇವ. ಅನಂತಕುಮಾರ್ ಜೊತೆಗಿನ ಗುದ್ದಾಟದಲ್ಲಿ ಸಂಘ ಬಿಎಸ್‌ವೈ ಜೊತೆ ಗಟ್ಟಿಯಾಗಿ ನಿಂತಿತ್ತು. ಆದರೆ ಜಯದೇವ ಕಾಲವಾದ ನಂತರ ಯಡಿಯೂರಪ್ಪನವರ ಸಂಘದ ಜೊತೆಗಿನ ಸಂಬಂಧ ಹದೆಗೆಡತೊಡಗಿತು.
ಕಲ್ಲಡ್ಕ ಪ್ರಭಾಕರ ಭಟ್ ಯಡಿಯೂರಪ್ಪನವರಿಗೆ ಈಗಲೂ ಆತ್ಮೀಯರು ಹೌದಾದರೂ, ಹೊಸ ತಲೆಮಾರಿನ ಮುಕುಂದ ಮಂಗೇಶ ಬೆಂಡೆ ಯಡಿಯೂರಪ್ಪ ಹೇಳಿದಕ್ಕೆಲ್ಲಾ ತಲೆ ಅಲ್ಲಾಡಿಸುವವರಲ್ಲ. ಈಗ ಸಂಘದಲ್ಲಿ ಸಹಜವಾಗಿ ದಕ್ಷಿಣದಲ್ಲಿ ಸಂತೋಷ್ ಮತ್ತು ಉತ್ತರದಲ್ಲಿ ಪ್ರಹ್ಲಾದ್ ಜೋಶಿ ಅವರ ಪ್ರಭಾವ ಜಾಸ್ತಿ ಇದೆ. ಯಡಿಯೂರಪ್ಪನವರ ಬಗೆಗಿನ ದಿಲ್ಲಿ ನಾಯಕರ ಅಭಿಪ್ರಾಯ ಸಂಘದ ಜೊತೆಗಿನ ಸ್ಥಳೀಯ ಸಂಬಂಧಗಳ ಮೇಲೂ ಅವಲಂಬಿತ.
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಿಸ್ತಾರಾ..?
ಲಿಂಗಾಯತ ವೋಟ್ ಬ್ಯಾಂಕ್
ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರಬಲ ಸಮುದಾಯಗಳನ್ನು ಬದಿಗಿಟ್ಟು ಸಣ್ಣ ಸಮುದಾಯದ ವ್ಯಕ್ತಿಯ ಕೈಗೆ ನಾಯಕತ್ವ ಕೊಡುವುದು ಮೋದಿ, ಅಮಿತ್ ಶಾ ಪದ್ಧತಿ ಮತ್ತು ರಣತಂತ್ರ ಕೂಡ ಹೌದು. ಮಹಾರಾಷ್ಟ್ರದಲ್ಲಿ ಮರಾಠರ ಎದುರು ಬ್ರಾಹ್ಮಣ ಮುಖ್ಯಮಂತ್ರಿ, ಗುಜರಾತಿನಲ್ಲಿ ಪಟೇಲರ ಎದುರು ಜೈನ್ ಮುಖ್ಯಮಂತ್ರಿ, ಹರಾರಯಣದಲ್ಲಿ ಜಾಟರ ಎದುರು ಪಂಜಾಬಿ ಮುಖ್ಯಮಂತ್ರಿ, ಉತ್ತರ ಪ್ರದೇಶದಲ್ಲಿ ಯಾದವರು, ದಲಿತರು, ಬ್ರಾಹ್ಮಣರ ಎದುರು ರಜಪೂತ ಮುಖ್ಯಮಂತ್ರಿ. ಆದರೆ ಕರ್ನಾಟಕದಲ್ಲಿ ಮಾತ್ರ ಪ್ರಬಲ ಲಿಂಗಾಯತ ಮುಖ್ಯಮಂತ್ರಿ.
ಇದು ಒಂದು ರೀತಿಯಲ್ಲಿ ಸಾಮರ್ಥ್ಯವು ಹೌದು, ದೌರ್ಬಲ್ಯವೂ ಹೌದು. ಕರ್ನಾಟಕದ ಬಿಜೆಪಿ ಸಮಸ್ಯೆ ಎಂದರೆ, ಲಿಂಗಾಯತರಲ್ಲಿ ಯಡಿಯೂರಪ್ಪ ಅವರನ್ನು ತಟಸ್ಥಗೊಳಿಸಬಲ್ಲ ನಾಯಕತ್ವ ಇಲ್ಲ. ಉಳಿದ ಸಮುದಾಯದಲ್ಲಿ ಜನಮಾನಸವನ್ನು ಆಕರ್ಷಿಸಬಲ್ಲ ವ್ಯಕ್ತಿ ಇಲ್ಲ. ಈ ದ್ವಂದ್ವಕ್ಕೆ ಉತ್ತರ ಸಿಗುವವರೆಗೆ ರಾಜ್ಯ ಬಿಜೆಪಿಯಲ್ಲಿ ಊಹಾಪೋಹಗಳು ಸಾಮಾನ್ಯ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ