ನಮ್ಮಿಬ್ಬರ ಮಧ್ಯೆ ಬಿರುಕಿದೆ ಎಂದು ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಬಿಜೆಪಿಯಲ್ಲಿ ಸದಾನಂದ ಗೌಡ, ಯತ್ನಾಳ್ ಹಾಗೂ ವಿಜಯೇಂದ್ರ ಮಧ್ಯೆ ಬಿರುಕಿಲ್ವಾ?. ಮೊದಲು ತಮ್ಮಲ್ಲಿರುವ ಬಿರುಕುಗಳನ್ನು ಬಿಜೆಪಿಯವರು ಮುಚ್ಚಿಕೊಳ್ಳಲಿ ಎಂದ ಡಿಕೆಶಿ
ಕಲಬುರಗಿ(ಡಿ.02): ನನ್ನ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಯಾವುದೇ ಬಿರುಕಿಲ್ಲ. ಸುಖಾಸುಮ್ಮನೆ ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂದು ಮಾಧ್ಯಮದವರು ಬಿಂಬಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮಿಬ್ಬರ ಮಧ್ಯೆ ಬಿರುಕಿದೆ ಎಂದು ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯಲ್ಲಿ ಸದಾನಂದ ಗೌಡ, ಯತ್ನಾಳ್ ಹಾಗೂ ವಿಜಯೇಂದ್ರ ಮಧ್ಯೆ ಬಿರುಕಿಲ್ವಾ?. ಮೊದಲು ತಮ್ಮಲ್ಲಿರುವ ಬಿರುಕುಗಳನ್ನು ಬಿಜೆಪಿಯವರು ಮುಚ್ಚಿಕೊಳ್ಳಲಿ ಎಂದರು.
ಕಾಂಗ್ರೆಸ್ಸೇ ರೌಡಿಗಳ ಪಕ್ಷ, ಅದರ ಅಧ್ಯಕ್ಷರ ಹಿನ್ನೆಲೆ ನೋಡಿ: ಅಶ್ವತ್ಥನಾರಾಯಣ್ ತಿರುಗೇಟು
ಬಿಜೆಪಿಗೆ ಭಯ ಶುರುವಾಗಿದೆ:
ಕಾರ್ಯಕರ್ತರೆಲ್ಲರೂ ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿಗೆ ಸರತಿಯಲ್ಲಿ ರೌಡಿಗಳು ಸೇರ್ಕೋತಿದ್ದಾರೆ. ಬಿಜೆಪಿಯವರು ಜನರ ಭಾವನೆಗಳ ಜೊತೆಗೆ ಆಟ ಆಡುತ್ತಿದ್ದಾರೆ. ಆದರೆ, ನಾವು ಜನರ ಬದುಕು ಕಟ್ಟುವ ಮಾತನ್ನಾಡುತ್ತಿದ್ದೇವೆ. ಹೀಗಾಗಿ, ಜನ ಈ ಬಾರಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್‌ಗೆ ಪಟ್ಟಕಟ್ಟುವ ಸಂಕಲ್ಪ ಮಾಡಿದ್ದಾರೆ. ಇದನ್ನು ಕಂಡು ಬಿಜೆಪಿಗೆ ಈಗಲೇ ಭಯ ಶುರುವಾಗಿದೆ. ಅನೇಕರು ಕಾಂಗ್ರೆಸ್‌ಗೆ ಬರುವ ಆತುರದಲ್ಲಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರ ಹೆಸರುಗಳನ್ನು ನಾನು ಈಗಲೇ ಹೇಳುವುದಿಲ್ಲ ಎಂದರು.
ಜೆಡಿಎಸ್ ಮೊದಲ ಪಟ್ಟಿ ಶಾಶ್ವತ ಅಲ್ಲ: ದೇವೇಗೌಡ
ಖರ್ಗೆ ಭೇಟಿ ಕುರಿತು ಪ್ರತಿಕ್ರಿಯಿಸಿ, ಕಲಬುರಗಿಯವರಾದ ಡಾ.ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರೋದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಅವರು ಡಿ.10ರಂದು ತಮ್ಮ ತವರೂರಿಗೆ ಭೇಟಿ ನೀಡಲಿದ್ದಾರೆ. ಅವರ ಮೊದಲ ಭೇಟಿಯನ್ನು ಕಲ್ಯಾಣ ನಾಡಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹೊಸ ಶಕ್ತಿ, ಹುರುಪು ತುಂಬುವ ಸಮಾವೇಶವನ್ನಾಗಿ ಸಂಘಟಿಸಲಾಗುತ್ತಿದೆ ಎಂದರು.
ಗಡಿ ವಿಚಾರ ಕುರಿತು ಪ್ರತಿಕ್ರಿಯಿಸಿ, ಗಡಿ ವಿಚಾರದಲ್ಲಿ ಬಿಜೆಪಿ ಸರ್ಕಾರ ರಾಜಕೀಯ ಮಾಡಬಾರದು. ಅವರ ಊರನ್ನು ಅವರಿಗೆ ಬಿಡಿ, ನಮ್ಮೂರು ನಮಗಿರಲಿ. ಗಡಿ ವಿಚಾರದಲ್ಲಿ ಜನರ ಭಾವನೆ ಕೆರಳಿಸುವುದು ಸರಿಯಲ್ಲ ಎಂದರು.