
ಹುಬ್ಬಳ್ಳಿ (ಜ.20): ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ಪಕ್ಷದ ಕೆಲವರು ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಏನೇ ಅಸಮಾಧಾನ ಇದ್ದರೂ ಪಕ್ಷದ ವರಿಷ್ಠರ ಗಮನಕ್ಕೆ ತರಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯಾಧ್ಯಕ್ಷರ ಆಯ್ಕೆ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ, ರಾಜ್ಯಾಧ್ಯಕ್ಷ ಬಗ್ಗೆ ಯಾರಿಗೆ ಏನೇ ಅಸಮಾಧಾನ ಇದ್ದರೂ ಅದನ್ನು ವರಿಷ್ಠ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಚುನಾವಣೆ ನಡೆಯುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ದೇಶಾದ್ಯಂತ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದು ಸಾಮಾನ್ಯ. ಅದರಂತೆ ರಾಜ್ಯದಲ್ಲೂ ಚುನಾವಣೆ ನಡೆಯಬಹುದು. ಆದರೆ, ಇಲ್ಲಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡುತ್ತಾರೋ, ಇಲ್ಲವೋ ಎಂದು ನಾನು ಹೇಳುವುದಿಲ್ಲ ಎಂದು ಹೇಳಿದರು.
ಕೇಂದ್ರ ಅಕ್ಕಿ ನೀಡಲು ಸಿದ್ಧವಿದ್ದರೂ ಬೇಡಿಕೆ ಸಲ್ಲಿಸದ ರಾಜ್ಯ: ಕೇಂದ್ರದಲ್ಲಿ ಸಾಕಷ್ಟು ಅಕ್ಕಿ ಸಂಗ್ರಹವಿದ್ದು, ಹಿಂದೆ ಪ್ರತಿ ಕೇಜಿಗೆ ₹28 ಬೆಲೆಯಲ್ಲಿ ನೀಡುತ್ತಿದ್ದ ಅಕ್ಕಿಯನ್ನು ಈಗ ಕೇವಲ ₹22.50ಕ್ಕೆ ನೀಡಲಾಗುತ್ತಿದೆ. ರಾಜ್ಯದ ಜನರಿಗೆ ಅಕ್ಕಿ ನೀಡುವ ಮನಸ್ಸಿದ್ದರೆ ರಾಜ್ಯ ಸರ್ಕಾರ ಅಕ್ಕಿ ಖರೀದಿಸಿ ನೀಡಬಹುದಾಗಿದೆ. ಆದರೆ ರಾಜ್ಯ ಸರ್ಕಾರದಿಂದ ಅಕ್ಕಿ ಖರೀದಿಗೆ ಯಾವುದೇ ಬೇಡಿಕೆ ಬಂದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಎಫ್‌ಸಿಐನಲ್ಲಿ ಅಕ್ಕಿ ಸಂಗ್ರಹವಿರದ ವೇಳೆ ಎಫ್‌ಸಿಐ ದರದಲ್ಲಿ ಅಕ್ಕಿ ನೀಡಿದರೆ ಖರೀದಿಸಲು ಸಿದ್ಧ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದರೆ, ಈಗ ಅದರ ಕುರಿತು ಮಾತೇ ಎತ್ತುತ್ತಿಲ್ಲ. ನಮ್ಮ ಬಳಿ ಈಗ ರಾಜ್ಯಕ್ಕೆ ಆಗುವಷ್ಟು ಅಕ್ಕಿ ಸಂಗ್ರಹವಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರವು ದೇಶದ ಜನರಿಗೆ ಸಹಕಾರಿಯಾಗಲಿ ಎಂಬ ಸದುದ್ದೇಶದಿಂದ ಉಚಿತವಾಗಿ 5 ಕೇಜಿ ಅಕ್ಕಿ ನೀಡುತ್ತಿದೆಯೇ ಹೊರತು ರಾಜ್ಯ ಸರ್ಕಾರದಿಂದ ಅಕ್ಕಿ ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಪ್ರತಿ ಕುಟುಂಬಕ್ಕೂ 10 ಕೇಜಿ ಉಚಿತ ಅಕ್ಕಿ ನೀಡುವುದಾಗಿ ಹೇಳಿದ್ದರು. ಆದರೆ, 5 ಕೇಜಿ ಅಕ್ಕಿ ಸಹ ನೀಡಲು ಆಗುತ್ತಿಲ್ಲ. ನಮ್ಮ ಬಳಿ ಅಕ್ಕಿ ಸಂಗ್ರಹವಿರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಯಂಕರವಾಗಿ ಮಾತನಾಡಿದ್ದರು ಎಂದು ಜೋಶಿ ಹೇಳಿದರು.
ಭಾರತೀಯ ಸಂಸ್ಕೃತಿ, ಸಂಪ್ರದಾಯ ಉಳಿಸುವ ಕಾರ್ಯವಾಗಲಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಕಾಂಗ್ರೆಸ್‌ನಿಂದ ಅಂಬೇಡ್ಕರ್‌ಗೆ ಕ್ಷಮೆ: ಡಾ. ಬಿ.ಆರ್. ಅಂಬೇಡ್ಕರ್‌ಗೆ ಜೀವಿತಾವಧಿಯಲ್ಲಿ ನಿರಂತರ ಅಪಮಾನ ಮಾಡಿದ್ದ ಕಾಂಗ್ರೆಸ್ ಈಗ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಜತೆ ಅಂಬೇಡ್ಕರ್ ಹೆಸರಿನಲ್ಲಿ ಸಮಾವೇಶ ನಡೆಸಿ ಅವರಿಗೆ ಕ್ಷಮೆ ಕೇಳುವ ನಾಟಕ ಮಾಡುತ್ತಿದೆ ಎಂದು ಜೋಶಿ ಕಿಡಿಕಾರಿದರು. ಕಾಂಗ್ರೆಸ್ ಸಂವಿಧಾನ ಶಿಲ್ಪಿ ಮನೆ ಸ್ಮಾರಕ ಮಾಡಲಿಲ್ಲ. ಅವರನ್ನು ಸಂಸತ್ತಿಗೆ ಬಾರದಂತೆ ನೋಡಿಕೊಂಡಿತು. ಅಂತ್ಯಕ್ರಿಯೆಗೂ ಜಾಗ ನೀಡಲಿಲ್ಲ ಎಂದು ಆಪಾದಿಸಿದರು. ಕಾಂಗ್ರೆಸ್ ಸಮಾವೇಶಕ್ಕೆ ನಾವು ಹೆದರುವ ಪ್ರಶ್ನೆಯೇ ಇಲ್ಲ. ಮೊದಲು ದೇಶದಲ್ಲಿ ಅವರ ಪರಿಸ್ಥಿತಿ ಏನಿದೆ ಎಂಬುದು ಅರಿತುಕೊಳ್ಳಲಿ ಎಂದು ಕುಟುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.