ಈ ಬಾರಿ ಕ್ಷೇತ್ರದಲ್ಲಿ ಮತಯಾಚನೆ ಸಂದರ್ಭದಲ್ಲಿ ನನ್ನ ಪರ ಅಪಾರ ಬೆಂಬಲ ವ್ಯಕ್ತವಾಗಿತ್ತು. ಅದರಲ್ಲೂ ಮಹಿಳೆಯರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲ ಸೂಚಿಸಿದ್ದರು. ಆದರೆ ಒಳಗಿನ ಕೆಲ ವಿರೋಧಿ ಸಂಚು ನನ್ನನ್ನು ಸೋಲಿಸಿದೆ: ಸಚಿವ ಬಿ.ಸಿ.ಪಾಟೀಲ್
ಹಿರೇಕೆರೂರು(ಮೇ.25): ಒಂದು ಸೋಲು 10 ಗೆಲುವಿಗೆ ಮುನ್ನುಡಿಯಾಗಲಿದೆ. ಕ್ಷೇತ್ರದ ಮತದಾರರ ಒತ್ತಾಯದಂತೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವವರೆಗೆ ರಾಜಕೀಯದಿಂದ ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ತಾಲೂಕಿನ ಬಾಳಂಬೀಡ ಗ್ರಾಮದ ಗೃಹ ಕಚೇರಿಯಲ್ಲಿ ತಾಲೂಕು ಬಿಜೆಪಿ ಮಂಡಳದಿಂದ ಸೋಮವಾರ ಏರ್ಪಡಿಸಿದ್ದ ಅಭ್ಯರ್ಥಿ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು. ಈ ಬಾರಿ ಕ್ಷೇತ್ರದಲ್ಲಿ ಮತಯಾಚನೆ ಸಂದರ್ಭದಲ್ಲಿ ನನ್ನ ಪರ ಅಪಾರ ಬೆಂಬಲ ವ್ಯಕ್ತವಾಗಿತ್ತು. ಅದರಲ್ಲೂ ಮಹಿಳೆಯರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲ ಸೂಚಿಸಿದ್ದರು. ಆದರೆ ಒಳಗಿನ ಕೆಲ ವಿರೋಧಿ ಸಂಚು ನನ್ನನ್ನು ಸೋಲಿಸಿದೆ. ಈ ಸೋಲಿನ ಸೇಡು ತೀರಿಸಿಕೊಳ್ಳಲು ಮುಂಬರುವ ತಾಪಂ, ಜಿಪಂ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕು. ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಡೆಸಿ ಜೊತೆಗಿದ್ದವರೇ ಬೆನ್ನಿಗೆ ಚೂರಿ ಹಾಕುವ ಮೂಲಕ ನನ್ನನ್ನು ಸೋಲಿಸಲು ಹುನ್ನಾರ ನಡೆಸಿದರು ಎಂದರು.
undefined
ಭರ್ಜರಿ ಮದುವೆ ಊಟ ಮಾಡಿದವರಿಗೆ ವಾಂತಿ, ಬೇಧಿ: 50 ಜನರು ಆಸ್ಪತ್ರೆ ದಾಖಲು
ಈ ಕುರಿತ ದಾಖಲೆ ನನ್ನ ಬಳಿ ಇದೆ. ನಂಬಿಕೆ ದ್ರೋಹ ಮಾಡಿದವರು, ವಿಶ್ವಾಸಘಾತುಕತನ ಮಾಡಿದವರಿಗೆ ಒಳ್ಳೆಯದಾಗಲಿ. ಇಂಥವರ ಮೇಲೆ ನಿಗಾವಹಿಸಿ ಕನಿಷ್ಠ ತಾಪಂ ಚುನಾವಣೆ ಗೆಲ್ಲದ ಹಾಗೆ ನೋಡಿಕೊಳ್ಳಿ ಎಂದರು.
ಯಾವುದೇ ಕಾರಣಕ್ಕೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ನನ್ನ ಸೋಲಿಗೆ ಧೃತಿಗೆಡಬಾರದು. ನಾನು ಸೋತಿದ್ದೇನೆ ಹಾಗಂತ ಸತ್ತಿಲ್ಲ, ಇನ್ನೂ ಸದೃಢನಾಗಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಮನದಾಳದ ಮಾತನ್ನು ತೆರೆದಿಟ್ಟರು.