ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಆಡಳಿತಾರೂಢ ಬಿಜೆಪಿ ನಾಯಕರು, ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಬೆಂಗಳೂರು (ಅ.08): ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಆಡಳಿತಾರೂಢ ಬಿಜೆಪಿ ನಾಯಕರು, ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ನಾಯಕರು ಕಾಂಗ್ರೆಸ್ ಪಕ್ಷವನ್ನೇ ಗುರಿಯಾಗಿಸಿ ಮಾತನಾಡಿದರು. ಜತೆಗೆ ಪಕ್ಷ ಸಂಘಟನೆ ಬಲಪಡಿಸುವತ್ತ ಗಮನಹರಿಸುವಂತೆ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಎಸ್‌ವೈ ಕಿಡಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಜನರಿಂದ ತಿರಸ್ಕೃತಗೊಂಡಿದೆ. ದೇಶದೆಲ್ಲೆಡೆ ತಿರಸ್ಕಾರಗೊಂಡ ಪಕ್ಷವು ಇಲ್ಲೂ ನೆಲಕಚ್ಚಲಿದೆ. ಕಾಂಗ್ರೆಸ್ ಯಾತ್ರೆ ಯಾವುದೇ ಫಲ ಕೊಡುವುದಿಲ್ಲ ಎಂದು ಹೇಳಿದರು. ರಾಜ್ಯ ಬಿಜೆಪಿ ನಡೆಯುವ ಮತ್ತೆ ಅಧಿಕಾರಕ್ಕೆ ಏರುವ ಕಡೆ ಮುನ್ನಡೆಯಲಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ಯಾರೂ ತಡೆಯಲಾಗದು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಳ್ಳಬೇಕಿದೆ. ಸಚಿವರು ನಿರಂತರ ಪ್ರವಾಸದಲ್ಲಿದ್ದು, ಕಾರ್ಯಕರ್ತರಲ್ಲಿ ವಿಶ್ವಾಸ- ನಂಬಿಕೆ ಹೆಚ್ಚಿಸಬೇಕು ಎಂದು ತಿಳಿಸಿದರು. ಸಂಘಟನೆ ಬಲ ಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಅ.11ರಿಂದ ಯಡಿಯೂರಪ್ಪ ಜತೆ ರಾಜ್ಯ ಪ್ರವಾಸ: ಸಿಎಂ ಬೊಮ್ಮಾಯಿ
ಕಾಂಗ್ರೆಸ್ಸಿಂದ ಶೇ.100 ಭ್ರಷ್ಟಾಚಾರ- ಸಿಎಂ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷ ಕಳೆದಿದೆ. 30-32 ಸೀಟುಗಳಿದ್ದ ಪಕ್ಷಕ್ಕೆ ಅಧಿಕಾರ ಕೊಟ್ಟಪಕ್ಷ ಕಾಂಗ್ರೆಸ್. ಸರ್ಕಾರ ಜನಮನ್ನಣೆಯಿಂದ ಆಗಬೇಕು. ಜನಮನ್ನಣೆ, ಚುನಾವಣಾ ಫಲಿತಾಂಶ ಧಿಕ್ಕರಿಸಿ, ವಾಮಮಾರ್ಗದ ಸರಕಾರ ಪಾಪದ ನೆಲೆಗಟ್ಟಿನಿಂದ ಕುಸಿದು ಬಿತ್ತು. ಹಿಂದೆ ಕಾಂಗ್ರೆಸ್ಸಿನ ಐದು ವರ್ಷದ ದುರಾಡಳಿತ, ಭ್ರಷ್ಟಾಚಾರ, ಹಗರಣಗಳನ್ನು ಜನರು ಮರೆತಿಲ್ಲ. ಸಣ್ಣ ನೀರಾವರಿ ಇಲಾಖೆಯಲ್ಲೂ ಶೇ.100ರಷ್ಟುಭ್ರಷ್ಟಾಚಾರ ನಡೆದಿತ್ತು ಎಂದು ಆಪಾದಿಸಿದರು.
ಭಾರತ ಬಿಟ್ಟು ಓಡೋ ಯಾತ್ರೆ- ಕಟೀಲ್: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ದೇಶ ಮಾತ್ರವಲ್ಲದೆ, ವೀರಶೈವ ಸಮಾಜವನ್ನೂ ಒಡೆಯಲು ಮುಂದಾಗಿದ್ದು ಕಾಂಗ್ರೆಸ್ ಪಕ್ಷ. ಭಾರತದಿಂದ ಓಡಲು ಇಟಲಿಯ ಅಕ್ಕ ದಾರಿ ಹುಡುಕುತ್ತಿದ್ದಾರೆ. ಇದು ಭಾರತ್ ಜೋಡೋ ಯಾತ್ರೆ ಅಲ್ಲ. ಭಾರತ ಬಿಟ್ಟು ಓಡೋ ಯಾತ್ರೆ. ಇದು ಯಶಸ್ವಿ ಆಗುವುದಿಲ್ಲ ಎಂದರು. ಭಯೋತ್ಪಾದನೆ, ಭ್ರಷ್ಟಾಚಾರವೇ ಕಾಂಗ್ರೆಸ್‌ನ ದೊಡ್ಡ ಕೊಡುಗೆ. ಆರು ದಶಕಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಸದಾ ಕಾಲ ಹಗರಣಗಳನ್ನೇ ಮಾಡಿತು. ಶಾಸ್ತ್ರೀಜಿ ಹೊರತುಪಡಿಸಿ ಉಳಿದೆಲ್ಲ ಪ್ರಧಾನಿಗಳು ಭ್ರಷ್ಟರಾಗಿದ್ದರು.
ಸಿಎಂ ಬೊಮ್ಮಾಯಿ ಸಹ ಪ್ರಾಮಾಣಿಕ ಹೆಜ್ಜೆಯಿಡುತ್ತಿದ್ದಾರೆ: ಯಡಿಯೂರಪ್ಪ
ಕಾಂಗ್ರೆಸ್ ಮುಖಂಡರೆಲ್ಲರೂ ಭ್ರಷ್ಟಾಚಾರ ಮಾಡಿದವರು. ಹಾಸ್ಟೆಲ್, ಹಾಸಿಗೆ, ಸೋಲಾರ್, ಶಾಲಾ ಮೊಟ್ಟೆ, ನೇಮಕಾತಿಯಲ್ಲೂ ಹಗರಣಗಳನ್ನು ಮಾಡಿದ್ದ, ಜಾತಿ-ಜಾತಿಗಳ ನಡುವೆ ಸಂಘರ್ಷ ತಂದಿಟ್ಟಸಿದ್ದರಾಮಣ್ಣನ ಕೊಡುಗೆಯನ್ನು ಜನರು ಮರೆತಿಲ್ಲ. ಅರ್ಕಾವತಿ ರೀಡೂ ಹಗರಣದಲ್ಲಿ ಸಿದ್ದರಾಮಣ್ಣ ಎಲ್ಲಿರುತ್ತಾರೆ ಎಂಬುದನ್ನು ಕಾದುನೋಡಿ ಎಂದು ಮಾರ್ಮಿಕವಾಗಿ ಹೇಳಿದರು. ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ ಮತ್ತಿತರರು ಪಾಲ್ಗೊಂಡಿದ್ದರು.