
ಹಾವೇರಿ (ಜೂ.27): ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಡಿ ವಿವಿಧ ಯೋಜನೆಗಳಿಗೆ ಸಾಕಷ್ಟು ಗುರಿ ನಿಗದಿಪಡಿಸಿ ಅನುದಾನ ನೀಡಲಾಗಿದೆ. ಆದರೆ, ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ಅಭಿವೃದ್ಧಿ ನಿಗಮಗಳಿಗೆ ಸರ್ಕಾರ ಗುರಿಯನ್ನೇ ನಿಗದಿಪಡಿಸಿಲ್ಲ. ಸಾಕಷ್ಟು ಯೋಜನೆಗಳಿಗೆ ಶೂನ್ಯ ಗುರಿ. ಹೀಗಾದರೆ ಈ ಸಮಾಜಗಳಿಗೆ ಸರ್ಕಾರದ ಸೌಲಭ್ಯ ಹೇಗೆ ಸಿಗಬೇಕು ಎಂದ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು. ಇಲ್ಲಿನ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಮಿತಿ ಹಾಗೂ ಜಿಲ್ಲಾ ಮಟ್ಟದ ಬ್ಯಾಂಕುಗಳ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾವಲಂಬಿ ಸಾರಥಿ, ಪಶು ಭಾಗ್ಯ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಜೀರೋ ಗುರಿ ನಿಗದಿಯಾಗಿದೆ. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಗುರಿ ನಿಗದಿಪಡಿಸಿದಂತೆ ಇನ್ನುಳಿದ ನಿಗಮಗಳಿಗೂ ಗುರಿ ನಿಗದಿಪಡಿಸಿ ಅನುದಾನ ಕೊಡಬೇಕಿತ್ತು. ಎಸ್‌ಸಿ, ಎಸ್ಟಿ, ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಲು ಸರ್ಕಾರದ ಬಳಿ ಹಣ ಇಲ್ಲ, ಬಜೆಟ್‌ನಲ್ಲೂ ಹಣ ಇಟ್ಟಿಲ್ಲ, ಆದರೆ, ದೊಡ್ಡ-ದೊಡ್ಡ ಜಾಹೀರಾತು ಮಾತ್ರ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.ಹಣಕಾಸು ಸಚಿವರಿಗೆ ದೂರು: ಕಳೆದ ಒಂದು ವರ್ಷದಿಂದ ಹೊಸರಿತ್ತಿ ಹಾಗೂ ಚಂದಾಪುರದಲ್ಲಿ ಹೊಸ ಬ್ಯಾಂಕ್ ಶಾಖೆ ಆರಂಭಿಸುವಂತೆ ಸೂಚಿಸಿದರೂ ಶಾಖೆ ಆರಂಭಿಸಿಲ್ಲ.
ಆಗಲ್ಲ ಅಂದ್ರೆ ನೇರವಾಗಿ ಹೇಳಿ. ಸುಮ್ನೆ ಭರವಸೆ ನೀಡಬೇಡಿ. ಬ್ಯಾಂಕ್‌ಗಳ ಠೇವಣಿ ಹಾಗೂ ಸಾಲ ವಿತರಣೆ(ಸಿಡಿ) ಅನುಪಾತವೂ ಸಮರ್ಪಕವಾಗಿಲ್ಲ. ಕರ್ನಾಟಕ ಬ್ಯಾಂಕ್‌ನವರು ಜಿಲ್ಲೆಯಲ್ಲಿ ₹549 ಕೋಟಿ ಠೇವಣಿ ಸಂಗ್ರಹಿಸಿಟ್ಟುಕೊಂಡು ಕೇವಲ ₹237 ಕೋಟಿ ಸಾಲ ಕೊಟ್ಟಿದ್ದೀರಿ. ಹಾಗೆಯೇ ಡಿಎಸ್‌ಬಿ ಬ್ಯಾಂಕ್‌ನವರ ಸಿಡಿ ಅನುಪಾತ ಕಡಿಮೆ ಇದೆ. ಈ ಭಾಗದ ಜಿಲ್ಲೆಗಳಿಂದ ಠೇವಣಿ ಪಡೆದು ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಹೆಚ್ಚು ಸಾಲ ವಿತರಣೆ ನೀಡುತ್ತಿದ್ದೀರಿ. ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಕೇಂದ್ರ ಹಣಕಾಸು ಸಚಿವರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು. ಬ್ಯಾಂಕ್ ಬರೋಡದ ರಿಜಿನಲ್ ಮ್ಯಾನೇಜರ್ ಪಂಕಜಕುಮಾರ ಪ್ರತಿಕ್ರಿಯಿಸಿ, ಹೊಸರಿತ್ತಿಯಲ್ಲಿ ಹೊಸ ಶಾಖೆ ಆರಂಭಿಸುವ ಪ್ರಕ್ರಿಯೆ ನಡೆದಿದೆ.
ಸೆಪ್ಟೆಂಬರ್‌ನಲ್ಲಿ ಹೊಸ ಶಾಖೆ ಉದ್ಘಾಟಿಸುವುದಾಗಿ ಭರವಸೆ ನೀಡಿದರು. ಚಂದಾಪುರದಲ್ಲಿ ಕೆವಿಜಿಬಿ ಶಾಖೆ ಆರಂಭಿಸುವಂತೆ ಬ್ಯಾಂಕ್‌ನ ಅಧ್ಯಕ್ಷರಿಗೆ ಪತ್ರ ಬರೆಯುವಂತೆ ಸಂಸದ ಬೊಮ್ಮಾಯಿ ಸೂಚಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಾಲ್, ಕೆವಿಜಿ ಬ್ಯಾಂಕ್ ಪ್ರಾದೇಶಿಕ ಅಧಿಕಾರಿ ಸೋಮಶೇಖರ್, ನಬಾರ್ಡ್‌ನ ರಂಗನಾಥ್, ಬ್ಯಾಂಕ್ ಅಧಿಕಾರಿಗಳಾದ ಸೂರಜ್ ಎಸ್, ಪಂಕಜಕುಮಾರ ಇತರರಿದ್ದರು. ಲೀಡ್ ಬ್ಯಾಂಕಿನ ಮ್ಯಾನೇಜರ್ ಜೀವನ ಜಿ.ಎನ್. ನಿರ್ವಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.